ಶ್ಲೋಕ – 13 & 14
ಸಮಂ ಕಾಯಶಿರೋಗ್ರೀವಂ ಧಾರಯನ್ನಚಲಂ ಸ್ಥಿರಃ ।
ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್ ॥೧೩॥
ಪ್ರಶಾಂತಾತ್ಮಾ ವಿಗತಭೀರ್ಬ್ರಹ್ಮಚಾರಿವ್ರತೇ ಸ್ಥಿತಃ ।
ಮನಃ ಸಂಯಮ್ಯ ಮಚ್ಚಿತ್ತೋ ಯುಕ್ತ ಆಸೀತ ಮತ್ಪರಃ ॥೧೪॥
ಬೆನ್ನು-ತಲೆ-ಕತ್ತುಗಳನ್ನು ನೆಟ್ಟಗೆ ನಿಲ್ಲಿಸಿ, ನಲುಗದೆ ಗಟ್ಟಿಯಾಗಿ ಕುಳಿತು, ಅತ್ತಿತ್ತ ನೋಡದೆ ತನ್ನ ಮೂಗಿನ ತುದಿಯಲ್ಲೆ ನೋಟವಿಟ್ಟು, ಬಗೆಯನ್ನು ವಿಷಯಗಳತ್ತ ಹರಿಯಗೊಡದೆ ಹದಗೊಳಿಸಿ, ಅಂಜದೆ, ಬ್ರಹ್ಮಚರ್ಯದಲ್ಲಿದ್ದು, ನನ್ನನ್ನೇ ಪರದೈವವೆಂದು ನಂಬಿ, ನನ್ನನ್ನೆ ನೆನೆಯುತ್ತ ಸಮಾಧಿಯನ್ನು ಸಾಧಿಸಬೇಕು.
ಧ್ಯಾನಕ್ಕೆ ಕುಳಿತಾಗ ಸೊಂಟದಿಂದ ಮೇಲಿನ ನಮ್ಮ ಶರೀರ ನೆಟ್ಟಗೆ ಸರಳರೇಖೆಯಲ್ಲಿರಬೇಕು. ಬೆನ್ನು ಬಗ್ಗಿರಕೂಡದು, ಕುತ್ತಿಗೆ, ತಲೆ ವಾಲಿರಬಾರದು. ದೇಹವನ್ನು ನಿಶ್ಚಲಗೊಳಿಸಬೇಕು. ಸ್ವಲ್ಪವೂ ಅಲ್ಲಡಿಸಬಾರದು. ಈ ರೀತಿ ಕುಳಿತುಕೊಳ್ಳದೆ ಮನಸ್ಸಿನ ಸ್ಥಿರತೆ ಅಸಾಧ್ಯ. ಮನಸ್ಸು ಈ ದೇಹವೆಂಬ ಪಾತ್ರೆಯೊಳಗಿನ ನೀರಿನಂತೆ. ಪಾತ್ರೆ ಅಲ್ಲಾಡಿದರೆ ಮನಸ್ಸೆಂಬ ನೀರಿನಲ್ಲಿ ಅಲೆಗಳು ಮೂಡುತ್ತವೆ, ಇದರಿಂದ ಏಕಾಗ್ರತೆಗೆ ಭಂಗವಾಗುತ್ತದೆ.
ದೇಹದಲ್ಲಿ ಇನ್ನೊಂದು ಪ್ರಮುಖ ಅಂಗ ಕಣ್ಣು. ದೇಹವನ್ನು ಸ್ಥಿರಗೊಳಿಸಿದ ಮೇಲೆ ಕಣ್ಣನ್ನು ಸ್ಥಿರಗೊಳಿಸಬೇಕು. ಮೂಗಿನ ತುದಿಯಲ್ಲಿ ದೃಷ್ಟಿಯನ್ನು ನೆಟ್ಟು ಯಾವ ದಿಕ್ಕಿನ ಯಾವ ಆಕೃತಿಯೂ ಕಾಣದಂತೆ ನೇರವಾಗಿ ಒಂದೇ ಕಡೆ ದೃಷ್ಟಿ ಸ್ಥಿರಗೊಳಿಸಬೇಕು.(ಕಣ್ಣನ್ನು ಮುಚ್ಚಿ ಧ್ಯಾನ ಮಾಡಬಹುದು, ಆದರೆ ಕಣ್ಣನ್ನು ಮುಚ್ಚಿದರೆ ನಿದ್ದೆ ಮಾಡುವ ಸಾಧ್ಯತೆ ಹೆಚ್ಚು).
ಈ ರೀತಿ ಧ್ಯಾನದ ಸ್ಥಿತಿಯನ್ನು ತಲುಪಿದಾಗ ಮನಸ್ಸು ಪ್ರಶಾಂತವಾಗುತ್ತದೆ. ಯಾವ ಗೊಂದಲವೂ ಇಲ್ಲದ ಹೇಳಲಾಗದ ವಿಚಿತ್ರ ಆನಂದದಸ್ಥಿತಿಯನ್ನು ನಾವು ಈ ಸ್ಥಿತಿಯಲ್ಲಿ ಅನುಭವಿಸುತ್ತೇವೆ. ಇದರಿಂದ ನಮಗೆ ಎಲ್ಲಾ ಭಯವೂ ಹೊರಟು ಹೋಗುತ್ತದೆ. ಧ್ಯಾನಕ್ಕೆ ಅತಿ ಮುಖ್ಯವಾಗಿ ಬೇಕಾದ ಇನ್ನೊಂದು ಅಂಶ ಬ್ರಹ್ಮಚರ್ಯ ಪಾಲನೆ. ಇಲ್ಲಿ ಬ್ರಹ್ಮಚರ್ಯ ಎನ್ನುವ ಪದಕ್ಕೆ ಮೂರು ಅರ್ಥವಿದೆ. ಪರಬ್ರಹ್ಮನ ಕಡೆಗೆ ಹೋಗುವ ಧೀಕ್ಷೆ-ಬ್ರಹ್ಮಚರ್ಯ; ನಿರಂತರ ವೇದಾಧ್ಯಯನ-ಬ್ರಹ್ಮಚರ್ಯ; ಸಂಸಾರಿಗಳಾದವರು ನಿಯಮಿತ ಲೈಂಗಿಕತೆ ಪಾಲಿಸುವುದು(ಅತಿ ಸುಲಭವಾಗಿ ಲೈಂಗಿಕತೆಯಿಂದ ದೂರ ಸರಿದು ನಿಲ್ಲುವ ಕ್ಷಮತೆ ಹಾಗು ಬೇಕೆನಿಸಿದಾಗ ನಿಯಮಿತ ಲೈಂಗಿಕತೆ) ಹಾಗು ವಿರಕ್ತಿಗಳ(ನೈಷ್ಠಿಕ ಬ್ರಹ್ಮಚಾರಿ) ಲೈಂಗಿಕ ಮುಕ್ತ ಜೀವನ-ಬ್ರಹ್ಮಚರ್ಯ.
ಭಗವಂತನೇ ಸರ್ವೋತ್ತಮ ಎನ್ನುವ ಅಚಲವಾದ ಭಕ್ತಿಯಿಂದ, ಭಗವಂತನಲ್ಲಿ ಸಂಪೂರ್ಣ ಭರವಸೆಯನ್ನಿಟ್ಟು ಸದಾ ಭಗವಂತನನ್ನು ನೆನೆಯುತ್ತ, ಎಂದೂ ಎದೆಗುಂದದೆ ಸಮಾಧಿಯನ್ನು ಸಾಧಿಸಬೇಕು.

[…] […]