ನವದೆಹಲಿ, ಜನವರಿ 23: ಸಂಕಷ್ಟದಲ್ಲಿರುವ ಕರ್ನಾಟಕದ ರೈತರ ಬೆಂಬಲಕ್ಕೆ ಕೇಂದ್ರ ಸರ್ಕಾರ ಮತ್ತೊಮ್ಮೆ ಮುಂದಾಗಿದೆ. ರಾಜ್ಯದ ಕಡಲೆ (ಚಾನಾ) ಬೆಳೆಗಾರರ ಹಿತದೃಷ್ಟಿಯಿಂದ ಬೆಂಬಲ ಬೆಲೆಯಲ್ಲಿ 1 ಲಕ್ಷ ಮೆಟ್ರಿಕ್ ಟನ್ಗೂ ಅಧಿಕ ಕಡಲೆ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಮನವಿ ಮೇರೆಗೆ, ಕನಿಷ್ಠ ಬೆಂಬಲ ಬೆಲೆ ಯೋಜನೆ (PSS) ಅಡಿಯಲ್ಲಿ ಹಿಂಗಾರು ಹಂಗಾಮಿನ 101,340 ಮೆಟ್ರಿಕ್ ಟನ್ ಕಡಲೆ ಕಾಳುಗಳನ್ನು ಪ್ರತಿ ಕ್ವಿಂಟಲ್ಗೆ ₹5,875 ದರದಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಅಸ್ತು ಎಂದಿದೆ. ಈ ಕುರಿತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಸಚಿವ ಜೋಶಿ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಪ್ರಮುಖ ದ್ವಿದಳ ಧಾನ್ಯಗಳಲ್ಲಿ ಕಡಲೆಯೂ ಒಂದಾಗಿದ್ದು, ರಾಜ್ಯದಲ್ಲಿ ಸುಮಾರು 9.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿದಿರುವುದರಿಂದ ಕಡಲೆ ಬೆಳೆಗಾರರು ಭಾರೀ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆ ಬೆಲೆ, RMS 2026–27ಕ್ಕೆ ಘೋಷಿಸಲಾದ ₹5,875ರ MSP ಗಿಂತ ಬಹಳ ಕಡಿಮೆಯಾಗಿದೆ, ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಇಳಿಯುವ ಆತಂಕವೂ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಕಡಲೆಗೆ ಬೆಂಬಲ ಬೆಲೆ ಯೋಜನೆಯನ್ನು ಆದ್ಯತೆ ಮೇರೆಗೆ ಜಾರಿಗೆ ತರಬೇಕೆಂದು ಸಚಿವ ಪ್ರಲ್ಹಾದ ಜೋಶಿ ಕೇಂದ್ರ ಕೃಷಿ ಸಚಿವರಿಗೆ ಮನವಿ ಮಾಡಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಕೃಷಿ ಸಚಿವರು, ರಾಜ್ಯದ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು 1 ಲಕ್ಷ ಮೆಟ್ರಿಕ್ ಟನ್ಗೂ ಹೆಚ್ಚು ಕಡಲೆ ಖರೀದಿಗೆ ರಾಜ್ಯ ಸರ್ಕಾರಕ್ಕೆ ಅನುಮೋದನೆ ನೀಡಿದ್ದಾರೆ.
ತಕ್ಷಣ ಖರೀದಿ ಕೇಂದ್ರ ತೆರೆಯಲು ಒತ್ತಾಯ
ಈ ನಿರ್ಧಾರ ಜಾರಿಯಾಗುವಂತೆ ರಾಜ್ಯ ಸರ್ಕಾರ ಕೂಡಲೇ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ರೈತರಿಂದ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಪ್ರಕ್ರಿಯೆ ಆರಂಭಿಸಬೇಕೆಂದು ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.
ಪ್ರಧಾನಿ ಹಾಗೂ ಕೃಷಿ ಸಚಿವರಿಗೆ ಧನ್ಯವಾದ
ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಗೆ ಅನುಮತಿ ನೀಡಿ ರಾಜ್ಯದ ರೈತರ ನೆರವಿಗೆ ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕೃತಜ್ಞತೆ ಸಲ್ಲಿಸಿದ್ದಾರೆ.
