ವಾರ್ಷಿಕ ಆದಾಯ 155.95 ಕೋಟಿ ರೂ
ಮಂಗಳೂರು: ಕರ್ನಾಟಕದ ಇತಿಹಾಸ ಪ್ರಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯದಲ್ಲಿ ಭಾರೀ ಹೆಚ್ಚಳವಾಗಿದೆ. 2024-25ನೇ ಸಾಲಿನ ವಾರ್ಷಿಕ ಆದಾಯ 155.95 ಕೋಟಿ ರೂ. ಏರಿಕೆ ಆಗಿದೆ. ಕಳೆದ ವರ್ಷ ವಾರ್ಷಿಕ ಆದಾಯ 146.01 ಕೋಟಿ ರೂ. ಆಗಿತ್ತು. ಅಂದರೆ ಕಳೆದ ವರ್ಷಕ್ಕಿಂತ ಈ ಬಾರಿ 9.94 ಕೋಟಿ ರೂ. ಆದಾಯ ಏರಿಕೆ ಆಗಿದೆ. ಆ ಮೂಲಕ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತೆ ರಾಜ್ಯದ ಶ್ರೀಮಂತ ದೇವಸ್ಥಾನ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ವರ್ಷದಿಂದ ವರ್ಷಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಾಯದಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ಕಳೆದ ವರ್ಷವೂ ಪ್ರಥಮ ಸ್ಥಾನದಲ್ಲಿತ್ತು. ಈ ಭಾರಿ ಕೂಡ ವಾರ್ಷಿಕ ಆದಾಯದಲ್ಲಿ ಏರಿಕೆಯಿಂದಾಗಿ ಮತ್ತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತನ್ನ ಪ್ರಥಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಶಕ್ತಿ ಯೋಜನೆ ಪರಿಣಾಮ ಕುಕ್ಕೆ ದೇವಸ್ಥಾನದ ಆದಾಯದಲ್ಲಿ ಹೆಚ್ಚಳ ಸಾಧ್ಯತೆ ಎನ್ನಲಾಗುತ್ತಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿ ಇಲಾಖೆಯಡಿ ಬರುತ್ತದೆ. ಇನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ನಾಗಾರಾಧನೆಯ ಪ್ರಮುಖ ಕ್ಷೇತ್ರವಾಗಿದ್ದು, ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲೂ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಸರ್ಪ ಸಂಸ್ಕಾರ ಸೇರಿದಂತೆ ವಿವಿಧ ಸೇವೆ ಹಾಗೂ ಇತರ ಮೂಲಗಳಿಂದ ಒಟ್ಟು 155.95 ಕೋಟಿ ರೂ ಆದಾಯವಾಗಿದೆ. ದೇವಸ್ಥಾನದ ಒಟ್ಟು ಖರ್ಚು 79.82 ಕೋಟಿ ರೂ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ
- 2020-21ರಲ್ಲಿ 68.94 ಕೋಟಿ ರೂ.
- 2021-22 ರಲ್ಲಿ 72.73 ಕೋಟಿ ರೂ.
- 2022-23ರಲ್ಲಿ 123 ಕೋಟಿ ರೂ.
- 2023-24 146.01 ಕೋಟಿ ರೂ.
