ಹಾಸನ:ವಿಷಕಾರಿ ಮೇವು ಸೇವಿಸಿದ ಪರಿಣಾಮ ನೂರಾರು ಕುರಿಗಳು ಸಾವನ್ನಪ್ಪಿರುವ ದುರ್ಘಟನೆ ಹಾಸನ ಜಿಲ್ಲೆಯ ಜಾವಗಲ್ ಹೋಬಳಿಯ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನಿಂದ ಕುರಿ ಮಂದೆಯನ್ನು ಮೇಯಿಸಲು ಕರೆತಂದಿದ್ದ ಕುರಿಗಾಹಿಗಳು ಹೊಲಗಳಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮೆಕ್ಕೆಜೋಳದ ಚಿಗುರು ಅಥವಾ ವಿಷಕಾರಿ ಮೇವು ಸೇವಿಸಿರುವುದರಿಂದ ಕುರಿಗಳು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಘಟನೆಯ ಪರಿಣಾಮ ಹೊಲಗಳ ತುಂಬೆಲ್ಲಾ ಕುರಿಗಳು ಸತ್ತು ಬಿದ್ದಿದ್ದು, ಇದುವರೆಗೆ ಸುಮಾರು 100ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಇನ್ನೂ ಹಲವು ಕುರಿಗಳು ಅಸ್ವಸ್ಥಗೊಂಡಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

ಸುದ್ದಿ ತಿಳಿದು ಹಾಸನದಿಂದ ಮೂವರು ಪಶುವೈದ್ಯರ ತಂಡ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡುವ ಕಾರ್ಯದಲ್ಲಿ ತೊಡಗಿದೆ. ಮಂದೆಯಲ್ಲಿ ಒಟ್ಟು ಸುಮಾರು 800 ಕುರಿಗಳು ಇದ್ದವು ಎಂದು ತಿಳಿದುಬಂದಿದೆ.

ಸಾವನ್ನಪ್ಪಿದ ಕುರಿಗಳು ತುಮಕೂರು ಜಿಲ್ಲೆಯ ಶಿರಾ ಮೂಲದ ರಾಜಣ್ಣ ಅವರಿಗೆ ಸೇರಿದ್ದು, ಕುರಿಗಳನ್ನು ಮೇಯಿಸಲು ರಾಮಣ್ಣ, ಭಾಗ್ಯಮ್ಮ, ರಂಗನಾಥ್ ಸೇರಿದಂತೆ ಇತರರು ಹಾಸನ ಜಿಲ್ಲೆಯ ಕಡೆಗೆ ವಲಸೆ ತಂದಿದ್ದರು.

ಆಕಸ್ಮಿಕವಾಗಿ ಸಂಭವಿಸಿದ ಈ ಘಟನೆಯಿಂದ ಕುರಿ ಮಂದೆ ಮಾಲೀಕರು ಕಂಗಾಲಾಗಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
