ನಮ್ಮ ಮೂರನೆ ದಿವಸದ ಪ್ರಯಾಣ ಹುಸ್ತೈ ರಾಷ್ಟ್ರೀಯ ಉದ್ಯಾನವನದ ಕಡೆಗೆ. ಸುಮಾರು ನೂರು ಐವತ್ತು ಕಿಲೋಮೀಟರ್ಸ ಸಾಗ ಬೇಕಿತ್ತು. ನಮ್ಮ ಸಾರಿಗೆ ವ್ಯವಸ್ಥೆಯನ್ನು ಅತ್ಯುತ್ತಮ ಕಾರಗಳಲ್ಲಿ ಒಂದಾದ ಟೊಯಾಟೋ ಆಲ್ಫರ್ಡ ಕಾರು ಮಾಡಿದ್ದರು. ನಮ್ಮ ಪ್ರವಾಸದ ಸ್ಥಳಗಳು ದೂರವಿದ್ದರು ಪ್ರಯಾಣ ಆಯಾಸ ಆಗುತ್ತಿರಲಿಲ್ಲ.
ಈ ಸಮಯದಲ್ಲೇ ನಾವು ಮಂಗೋಲಿಯ ಹಸಿರು ಹುಲ್ಲು ಗಾವಲುಗಳನ್ನು ನಮ್ಮ ಕಣ್ಗಳಲ್ಲಿ ತುಂಬಿಸಿ ಕೊಂಡಿದ್ದು. ಐವತ್ತು ಆರವತ್ತು ಕಿಲೋಮೀಟರ್ಸ ನೇರ ರಸ್ತೆಗಳು ಮತ್ತು ಅಕ್ಕಪಕ್ಕ ಕಣ್ಣು ಹಾಯುವಷ್ಟು, ಅಂದರೆ ಕಿಲೋಮೀಟರ್ಸಗಳಷ್ಷು ಹುಲ್ಲಿನ ಹಸಿರು ಹಾಸು ಮತ್ತು ಚಿಕ್ಕ ಚಿಕ್ಕ ಗುಡ್ಡಗಳನ್ನು ಕಂಡೆವು. ಅಲ್ಲಿಯ ರಸ್ತೆಯ ಬದಿ ಯಾವ ಹೋಟೆಲ್ ಅಥವ ಮನೆಗಳು ಕಾಣುವುದಿಲ್ಲ. ನಮ್ಮ ನೈಸರ್ಗಿಕ ಕರೆಗೆ ಹುಲ್ಲು ಗಾವಲೇ ಗತಿ.

ಲೇ ಲಡಾಖ್ ಸಹ ಇಂತಹದೇ ಪ್ರಕೃತಿ ಇದ್ದರೂ ಕೂಡ ಹಸಿರು ಹುಲ್ಲು ಗಾವಲು ಸಿಗುವುದಿಲ್ಲ. ಲೇ ಲಡಾಖ್ ಭೂ ಪ್ರದೇಶದ ಮೇಲ್ಮೈಯ ಲಕ್ಷಣ ಮೇಲೆ ಕೆಳಗೆ ಇದ್ದು ಚಿಕ್ಕ ಕಣಿವೆಗಳು ಇರುತ್ತದೆ. ಆದರೆ ಮಂಗೋಲಿಯ ಭೂ ಪ್ರದೇಶ ಒಂದೇ ಮಟ್ಟವಾಗಿದ್ದು ಹಸಿರು ಚಾಪೆ ಹಾಸಿದಂತೆ ಇರುತ್ತದೆ. ನಮ್ಮ ಎರಡು ಗಂಟೆ ಟಾರ್ ರೋಡಿನ ಪ್ರವಾಸದ ನಂತರ ಮಣ್ಣಿನ ರಸ್ತೆಯನ್ನು ದಾಟಿ ಹುಸ್ತೈ ರಾಷ್ಟ್ರೀಯ ಉದ್ಯಾನವನ್ನು ಸೇರಿದೆವು.
ನಮ್ಮ ರಾತ್ರಿ ವಾಸ್ತವ್ಯ ಇಲ್ಲಿಯ ಯುರ್ಟ ಅಥವ ಗೆರ್ ಟೆಂಟಿನ ಒಳಗೆ. ನಾವು ಉಳಿದುಕೊಂಡ ಯುರ್ಟ ಐಷಾರಾಮಿ ಮಟ್ಟದ್ದು. ಇಲ್ಲಿಯ ಅಲೆಮಾರಿಗಳ ಟೆಂಟ್ ಒಳಗೆ ಇಂತಹ ಸೌಕರ್ಯ ಇರುವುದಿಲ್ಲ. ಈ ದೇಶದ ಚಳಿ ಮತ್ತು ಉಷ್ಣಾಂಶವನ್ನು ತಡೆದು ಕೊಳ್ಳುವಷ್ಟು ಸೌಕರ್ಯಗಳು ಈ ಟೆಂಟಿನ ಒಳಗೆ ಇರುತ್ತವೆ. ಇವುಗಳ ಮಧ್ಯ ಭಾಗದ ಎತ್ತರ ಸುಮಾರು ಏಳರಿಂದ ಎಂಟು ಅಡಿ.

ಈ ಟೆಂಟು ಗೋಳಾಕಾರವಾಗಿದ್ದು ಸುತ್ತಲಿನ ಎತ್ತರ ಐದರಿಂದ ಆರು ಅಡಿ ಮತ್ತು ಬಾಗಿಲಿನ ಎತ್ತರ ಇಷ್ಟೇ ಇರುತ್ತದೆ. ನಮ್ಮ ಹಳೇ ದೇವಸ್ಥಾನಗಳ ದ್ವಾರದಂತೆ. ತಲೆ ತಗ್ಗಿಸಿ ಒಳ ಹೋಗಬೇಕು. ಮಧ್ಯ ಭಾಗದಲ್ಲಿ ಎರಡು ಕಂಬಗಳು (ಕಂಬಗಳು ಹೆಣ್ಣು ಮತ್ತು ಗಂಡಿನ ಪ್ರತೀಕ) ಇದ್ದು ಇದರ ಸುತ್ತು ಬಗ್ಗಿರುವ ಮರದ ಪಟ್ಟಿ (ಇವರ ಪ್ರಕಾರ ಅತಿಥಿಗಳು) ಗಳನ್ನು ಕಟ್ಟಿರುತ್ತಾರೆ. ಇವುಗಳ ಮಧ್ಯೆ ಉಣ್ಣೆಯನ್ನು ಗಟ್ಟಿ ದಾರಳಿಂದ ಬಿಗಿದು ಹೂರ ಗೋಡೆಯನ್ನು ಮತ್ತು ಮೇಲಿನ ಛಾವಣಿಯನ್ನು ದಪ್ಪನೆಯ ನೀರು ನಿರೋಧಕ ವಸ್ತುವಿನಿಂದ ಹೊದಿಸಿರುತ್ತಾರೆ.
ಚಾವಣಿಯ ತುದಿಯನ್ನು ಬೆಳಕು ಮತ್ತು ಹೊಗೆ ಹೋಗುವ ಕೊಳುವೆಗೆ ಜಾಗ ಮಾಡಿಕೊಟ್ಟಿರುತ್ತಾರೆ. ಒಳ ಗೋಡೆಯನ್ನು ಜಾನುವಾರಗಳ ಚರ್ಮದಿಂದ ಅಲಂಕಾರ ಮಾಡಿರುತ್ತಾರೆ. ಟೆಂಟಿನ ಸುತ್ತಲು ಕಲ್ಲುಗಳನ್ನು ಇಟ್ಟಿರುತ್ತಾರೆ. ಇಲ್ಲಿಯ ಗಾಳಿ ವೇಗ ಅರವತ್ತರಿಂದ ಎಪ್ಪತ್ತು ಕಿಲೋಮೀಟರ್ಸ ಅಷ್ಟು ಇರುತ್ತೆ. ಮಳೆ ಒಂದೆ ಸಮನೆ ಬರುತ್ತೆ ಮತ್ತು ಚಳಿ ಕಾಲದಲ್ಲಿ -30 ಮತ್ತು -50 ಡಿಗ್ರಿ ಇರುತ್ತದೆ. ಇಂತಹ ವಿಪರೀತ ಅಥವ ವ್ಯತಿರಿಕ್ತ ಹವಾಮಾನವನ್ನು ಈ ಟೆಂಟ್ಗಳು ತಡೆದುಕೊಳ್ಳಬೇಕು. ಇಲ್ಲಿಯ ಅಲೆಮಾರಿಗಳ ಪಂಗಡಗಳು ಇಪ್ಪತ್ತು ಪಂಗಡ ಇರಬಹುದೆಂಬುದು ಒಂದು ಅಂದಾಜು. ಕಜಕ್ ಟೆಂಟ್ಗಳು ಸ್ವಲ್ಪ ವಿಭಿನ್ನ. ಇವರ ಯುರ್ಟಿನ ಒಳಗಡೆಯ ವಿನ್ಯಾಸ ಬಟ್ಟೆಗಳು ಕೈ ಕಸೂತಿಗಳಿಂದ ಅಲಾಂಕಾರ ಮಾಡಿರುತ್ತಾರೆ ಮತ್ತು ಒಳಗಡೆಯ ಕಂಬ ಒಂದೇ ಒಂದು ಇರುತ್ತದೆ.

ಇಲ್ಲಿಯ ಹುಸ್ತೈ ರಾಷ್ಟ್ರೀಯ ಉದ್ಯಾನವನ ಸುಮಾರು ಆರುನೂರು ಚದರ ಕಿಲೋಮೀಟರ್ಸ ಇದೆ. ಈ ಉದ್ಯಾನವನದಲ್ಲಿ ಅಳವಿನ ಅಂಚಿನಲ್ಲಿ ಇರುವ “ತಾಕಿಃ (Takhi)” ಅಥವ “ಪ್ರೆಜ್ವಸ್ಕಿ (Przewalski)” ಕಾಡು ಕುದುರೆಗಳು ಇವೆ . ಈಗ ಇವುಗಳ ಸಂಖ್ಯೆ ಮುನ್ನೂರು ಐವತ್ತು ಮಾತ್ರ. ಆಶ್ಚರ್ಯ ಆಗಬಹುದು, ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಒಂದೆ ಒಂದು ಕಾಡು ಕುದುರೆ ಮಂಗೋಲಿಯದಲ್ಲಿ ಇರಲಿಲ್ಲ. ಕಾಡು ಕುದುರೆ ಸಂತತಿ ಸಂಪೂರ್ಣವಾಗಿ ನಶಿಸಿಹೋಗಿತ್ತು. ಆಗ ಮಂಗೋಲಿಯ ಹಾಗು ಡೆನ್ಮಾರ್ಕ್ ಮತ್ತು ನಾರ್ವೆ ದೇಶಗಳ ಸಂಯೋಜನೆ (ಸಹಯೋಗತ್ವ) ಗಳಿಂದ ಇವುಗಳ ತಳಿಯನ್ನು ವೃದ್ಧಿಸಿ ಇಂದು ಈ ಉದ್ಯಾನವನದಲ್ಲಿ ಕಾಡು ಕುದುರೆಗಳು ಮುನ್ನೂರು ಐವತ್ತಕ್ಕೆ ಬಂದು ನಿಂತಿದೆ.
ಇಡೀ ಪ್ರಪಂಚದಲ್ಲಿ ಈ ಕಾಡು ಕುದುರೆಗಳು ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಆ ಸಮಯದಲ್ಲಿ ಅವುಗಳ ಸಂತತಿ ನಶಿಸಲು ಕಾರಣ ನೀರಿನ ಕೊರತೆ ಮತ್ತು ನಿರಂತರ ಬೇಟೆ. ಈಗ ಈ ತಳಿಗಳನ್ನು ಬೇಟೆ ಆಡಿದರೆ ಜೀವನ ಪರ್ಯಂತ ಬಂಧಿಖಾನೆಯಲ್ಲೇ ಕೊಳೆಯಬೇಕು. ಈ ಕುದುರೆಗಳು ವಿರಳವಾದ್ದರಿಂದ ಉದ್ಯಾನವನದಲ್ಲಿ ಅಳವಡಿಸಲಾದ ದೂರ ದರ್ಶಕದಲ್ಲಿ ಹುಡುಕಿ ನೋಡಬೇಕು. ಹಾಗೆಯೆ ಜಿಂಕೆಗಳನ್ನು ಸಹ ದೂರ ದರ್ಶಕದಲ್ಲಿ ನೋಡಿದೆವು.

ನಾವು ಉದ್ಯಾನವನದಿಂದ ಪಾಪಸ್ಸು ಆಗುವಾಗ ನಮ್ಮ ಅದೃಷ್ಟಕ್ಕೆ ಕಾಡು ಕುದುರೆ ಕುಟುಂಬ ಒಂದು ನಮ್ಮ ಮುಂದೆಯೇ ಹಾದು ಹೋಯಿತು. ಬಂದಿದ್ದಕ್ಕೆ ಸುಂಕವಿಲ್ಲ ಎನ್ನುವ ಗಾದೆಯ ಮಾತು ನೆನಪಿಗೆ ಬಂತು. ಇದೇ ತರಹ ಬ್ಯಾಕ್ಟ್ರಿಮ್ ಒಂಟೆಗಳ ಹಿಂಡನ್ನು ಕಂಡೆವು. ಈ ಒಂಟೆಗಳಿಗೆ ಎರಡು ಉಬ್ಬಿದ್ದು ಕುಳ್ಳ ಮೈ ಕಟ್ಟು ಹೊಂದಿರುತ್ತವೆ. ಕತ್ತು ದಪ್ಪನೆಯಾಗಿ ಇದ್ದು ತುಪ್ಪಳ ಹೆಚ್ಚು ಇರುತ್ತದೆ. ನಾವು ಮಿನಿ ಗೋಬಿ ಮರಳಗಾಡು ಭೇಟಿ ಮಾಡಿದಾಗ ಈ ಒಂಟೆಗಳ ಮೇಲೆ ಸವಾರಿ ಮಾಡಿದೆವು. ಆ ದೇಶದಲ್ಲಿ ಮೂವತ್ತ ಮೂರು ಮಿನಿ ಮರಳು ಭೂಮಿಗಳಿವೆ. ಅತಿ ದೊಡ್ಡ ಗೋಬಿ ಮರಳುಗಾಡು ಮಂಗೋಲಿಯ ದಕ್ಷಿಣಕ್ಕೆ ಚೀನಾ ಸೇರಿದಂತೆ ಇದೆ.
ಈ ಉದ್ಯಾನವನದ ವೈಶಿಷ್ಟ್ಯ ಹಲವಾರು ಸಸ್ತನಿಗಳಿಗೆ ಮನೆ ಮಾಡಿಕೊಟ್ಟಿದೆ. ಈ ಉದ್ಯಾನವನದ ಉದ್ದ ಅಗಲಕ್ಕೆ ಸಹಸ್ರಾರು ಮಂಗೋಲಿಯ ಮರ್ಮೋಟ್ಸ ನೋಡಬಹುದು. ಇವು ಅಳಿಲು ಜಾತಿಯ ಬಿಲ ಕೊರೆಯುವ ರೋಡೆಂಟ್ಸಗಳು. ಇಲ್ಲಿಯ ಫಾಲ್ಕನ್ಸ (ಗಿಡುಗ), ನರಿ ಮತ್ತು ತೋಳಗಳಿಗೆ ಒಳ್ಳೆಯ ಅಹಾರ. ಇವುಗಳಲ್ಲದೆ ಹಲವಾರು ತಳಿಗಳ ಚಿಂಕೆಗಳನ್ನು ಕಾಣಬಹುದು. ಐದು ನೂರಕ್ಕೂ ಹೆಚ್ಚು ತೀರ ವಿರಳವಾದ ವಿಶಿಷ್ಟ ಪ್ರಭೇದಗಳು ಉಳ್ಳ ಸಸ್ಯ ಸಂಪತ್ತನ್ನು ಇಲ್ಲಿ ನೋಡಬಹುದು. ಇದೇ ತರಹ ವಿಶಿಷ್ಟ ಕೀಟ ಮತ್ತು ಪತಂಗಗಳು ಇಲ್ಲಿ ಕಾಣಲು ಸಿಗುವುದು.

ವಿಸ್ತಾರವಾದ ಗ್ರೀನ್ ಮೆಡೋಸ್ನಲ್ಲಿ ಒಂದು ಯುರ್ಟ ಮತ್ತು ಇದರ ಸುತ್ತಾ ನೂರಾರು ಎಕರೆಗೆ ಕಾಂಪೌಂಡ್ ಹಾಕಿರುವ ಸ್ಥಳಗಳನ್ನ ನೋಡಬಹುದು. ಈ ಕಾಂಪೌಂಡ್ ಒಳಗೆ ಸಾವಿರಾರು ಮೇಕೆ ಮತ್ತು ಕುರಿ, ನೂರಾರು ಯಾಕ್ ಮತ್ತು ಹಸುಗಳು, ಮತ್ತೆ ಕುದುರೆ ಹಾಗು ಒಂಟೆಗಳು ಮೇಯುತ್ತಿರುವ ದೃಶ್ಯಗಳನ್ನು ನೋಡಬಹುದು. ಇಲ್ಲಿಯ ರೈತರು ಸಾವಿರಾರು ಎಕರೆಗಳಲ್ಲಿ ಮಳೆ ಮತ್ತು ಚಳಿಗಾಲಕ್ಕೆ ವಿಷೇಶವಾದಂತ ಹುಲ್ಲನ್ನು ಬೆಳೆಸಿ, ಕಟಾವು ಮಾಡಿ ತಮ್ಮ ಗೋದಾಮುಗಳಲ್ಲಿ ಶೇಖರಿಸಿ ಇಡುತ್ತಾರೆ. ಹೊರ ದೇಶದವರು ಇಲ್ಲಿಗೆ ಬಂದು, ಅದರಲ್ಲೂ ಚೀನಾ ದೇಶದ ಪ್ರಜೆಗಳು ಬೃಹತ್ ಹುಲ್ಲು ಗಾವಲುಗಳನ್ನು ಕೊಂಡಿದ್ದಾರೆ. ಕೊಂಡ ಜಾಗದಲ್ಲಿ ಅಲ್ಲಿಯ ಅಲೆಮಾರಿಗಳನ್ನು ಇಟ್ಟು ಮಾಲಿಕರು ನಗರದಲ್ಲಿ ವಾಸ ಮಾಡುತ್ತಾರೆ. ದೊಡ್ಡ ಮಟ್ಟದ ಜಾನುವಾರಗಳ ಹಿಂಡುಗಳನ್ನು ಡೊಮೆಸ್ಟಿಕೇಟಡ್ ಕುದುರೆಗಳನ್ನು ಏರಿ ನಿಯಂತ್ರಣ ಮಾಡುತ್ತಾರೆ. ಈ ಹಿಂಡುಗಳು ಯಾವ ಯಾವ ಮಾಲೀಕರಿಗೆ ಸೇರಿದೆ ಎನ್ನುವುದಕ್ಕೆ ನಿರ್ದಿಷ್ಟವಾದ ಚಿಹ್ನೆಯನ್ನು ಜಾನುವಾರಗಳ ಹಿಂಬದಿ ಕಾಣಬಹುದು.
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

