ನವದೆಹಲಿ, ಮೇ 10: ಭಾರತ ಮತ್ತು ಪಾಕಿಸ್ತಾನ ನಡುವಿನ ಉಗ್ರ ಚಟುವಟಿಕೆಗಳು ಮತ್ತು ಗಡಿಭಾಗದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಭಾರತದ ಚಾರ್ಟರ್ಡ್ ಅಕೌಂಟೆಂಟ್ಗಳ ಉನ್ನತ ಸಂಸ್ಥೆಯಾದ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆಯ ದಿಟ್ಟ ಕ್ರಮಗಳಿಗೆ ಬಲವಾದ ಬೆಂಬಲವನ್ನು ನೀಡಿದೆ.
ICAI ಸಂಸ್ಥೆಯ ಅಧ್ಯಕ್ಷರಾದ CA ಚರಣ್ಜೋತ್ ಸಿಂಗ್ ನಂದಾ ಅವರು ‘ರಾಷ್ಟ್ರ ಮೊದಲು‘ ಎಂಬ ತತ್ವದೊಂದಿಗೆ ಸಂಸ್ಥೆಯ 14 ಲಕ್ಷಕ್ಕೂ ಹೆಚ್ಚು ಸದಸ್ಯರು ಮತ್ತು ವಿದ್ಯಾರ್ಥಿಗಳು ಭಾರತೀಯ ಸೈನಿಕರ ಜೊತೆಗೆ ನಿಲ್ಲುತ್ತಿದ್ದಾರೆ ಎಂದು ಘೋಷಿಸಿದರು.
ICAI ದೇಶಾದ್ಯಂತದ 17,000ಕ್ಕೂ ಹೆಚ್ಚು ಪಿನ್ಕೋಡ್ಗಳಲ್ಲಿ ವ್ಯಾಪಿಸಿರುವ 177 ಶಾಖೆಗಳು ಹಾಗೂ ಗಡಿಯ ಪ್ರಾಂತ್ಯಗಳಲ್ಲಿ ಇರುವ ಶಾಖೆಗಳ ಮೂಲಕ ಭದ್ರತಾ ಸಿಬ್ಬಂದಿಗೆ ಸಹಕಾರ ನೀಡಲು, ಆಂಬ್ಯುಲೆನ್ಸ್ ಸೇವೆ, ಆಮ್ಲಜನಕ ಸಿಲಿಂಡರ್ ಪೂರೈಕೆ, ರಕ್ತದಾನ ಶಿಬಿರಗಳು ಸೇರಿದಂತೆ ವಿವಿಧ ಸಾಮಾಜಿಕ ಸೇವೆಗಳಲ್ಲಿ ಪಾಲ್ಗೊಳ್ಳಲು ಸ್ವಯಂಸೇವಕರನ್ನು ಸಜ್ಜುಗೊಳಿಸುತ್ತಿದೆ.
ಅಲ್ಲದೆ, ICAI ತನ್ನ ವಿಶಿಷ್ಟ ಕೊಡುಗೆಗಳ ಮೂಲಕ 1971ರ ಇಂಡೋ-ಪಾಕ್ ಯುದ್ಧದಿಂದ ಹಿಡಿದು ಕೊವಿಡ್-19 ಪಾಂಡೆಮಿಕ್ ತನಕ ತಮ್ಮ ಸೇವಾಭಾವನೆಯನ್ನು ನಿಭಾಯಿಸಿದ್ದನ್ನು ನೆನಪಿಸಿದೆ. ICAI ಉಪಾಧ್ಯಕ್ಷ CA ಪ್ರಸನ್ನ ಕುಮಾರ್ ಡಿ ಅವರು, “ನಾವು ದೇಶದ ಆರ್ಥಿಕ ಸೈನಿಕರು, ಅಗತ್ಯದ ಸಮಯದಲ್ಲಿ ದೇಶದ ಸೇವೆಗೆ ಸದಾ ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ.
ICAI ತನ್ನ ಸಶಕ್ತ ಜಾಲತಂತ್ರದ ಮೂಲಕ ಸರ್ಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳಿಗೆ ಬೆಂಬಲ ನೀಡಿ, ಭದ್ರತಾ ಬಿಕ್ಕಟ್ಟಿನಲ್ಲಿ ಸಾಮಾಜಿಕ ಜವಾಬ್ದಾರಿಯ ನಿಟ್ಟಿನಲ್ಲಿ ಮಾದರಿಯಾದ ಕಾರ್ಯತತ್ಪರತೆಯನ್ನು ತೋರಿಸುತ್ತಿದೆ.
