
ಕ್ರಿಕೆಟ್ : ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಹು ನಿರೀಕ್ಷಿತ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಬುಧವಾರ ಬಾಂಗ್ಲಾದೇಶ ವಿರುದ್ಧ ಆರು ವಿಕೆಟ್ ಗಳ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದರೆ, ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ 60 ರನ್ ಗಳ ಹೀನಾಯ ಸೋಲಿನಿಂದ ಕಂಗೆಟ್ಟಿದೆ. ಗ್ರೂಪ್ ಎನಲ್ಲಿ ಸೆಮಿಫೈನಲ್ ಪ್ರವೇಶಿಸಲು ಪಾಕಿಸ್ತಾನಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ಒಂದು ವೇಳೆ ಭಾರತ ಗೆಲುವು ಸಾಧಿಸಿದರೆ ಬಹುತೇಕ ಸೆಮಿಫೈನಲ್ ಪ್ರವೇಶಿಸಲಿದೆ.
2023ರ ವಿಶ್ವಕಪ್ ನಲ್ಲಿ ಅಹಮದಾಬಾದ್ ನಲ್ಲಿ ನಡೆದ ಪಂದ್ಯವೇ ಇವರಿಬ್ಬರ ನಡುವಿನ ಕೊನೆಯ ಪಂದ್ಯ. ಆ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಅವರ ಅರ್ಧಶತಕಗಳ ನೆರವಿನಿಂದ ಭಾರತ ಏಳು ವಿಕೆಟ್ ಗಳ ಗೆಲುವು ಸಾಧಿಸಿತ್ತು. ಆದರೆ, 2017ರಲ್ಲಿ ಓವಲ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತಿತ್ತು. 2018ರಿಂದಲೂ (2023ರ ಏಷ್ಯ ಕಪ್ ಸೇರಿದಂತೆ) ಭಾರತ ಪಾಕಿಸ್ತಾನ ವಿರುದ್ಧ ಆರು ಏಕದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಆತ್ಮವಿಶ್ವಾಸ ಉಳಿಸಿಕೊಂಡಿದೆ.
2024ರಲ್ಲಿ ನ್ಯೂಯಾರ್ಕ್ನಲ್ಲಿ ನಡೆದ ಟಿ20 ವಿಶ್ವಕಪ್ನ ಲೀಗ್ ಹಂತದ ಪಂದ್ಯದಲ್ಲಿ ಉಭಯ ತಂಡಗಳು ಕೊನೆಯದಾಗಿ ಪೈಪೋಟಿ ನಡೆಸಿದ್ದವು. ಆ ಪಂದ್ಯವನ್ನು ಭಾರತ 9 ರನ್ ಗಳ ಅಂತರದಿಂದ ಗೆದ್ದುಕೊಂಡಿತ್ತು. ಅಲ್ಲದೇ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ 2007 ರ ನಂತರ ತಮ್ಮ ಎರಡನೇ T20 ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿತ್ತು.
ಇಂದು ಭಾರತೀಯ ಕಾಲಮಾನ ಮಧ್ಯಾಹ್ನ 2-30 ರಿಂದ ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ಪಂದ್ಯದ ನೇರ ಪ್ರಸಾರ ಮಾಡಲಿದೆ.
ಭಾರತ ತಂಡ ಇಂತಿದೆ: ರೋಹಿತ್ ಶರ್ಮಾ (ನಾಯಕ) ಶುಭಮನ್ ಗಿಲ್ (ವಿಕೆಟ್ ಕೀಪರ್) ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್ )ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷ್ದೀಪ್ ಸಿಂಗ್, ಹರ್ಷಿತ್ ರಾಣಾ, ರಿಷಭ್ ಪಂತ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ
ಪಾಕಿಸ್ತಾನ ತಂಡ ಇಂತಿದೆ: ಮೊಹಮ್ಮದ್ ರಿಜ್ವಾನ್ (ನಾಯಕ, ವಿಕೆಟ್ ಕೀಪರ್) ಸಲ್ಮಾನ್ ಅಲಿ ಅಘಾ, ಬಾಬರ್ ಅಜಮ್, ಫಖರ್ ಜಮಾನ್, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಷ್ದಿಲ್ ಷಾ, ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹರಿಸ್ ರೌಫ್, ಮೊಹಮ್ಮದ್ ಶಾಹ್ರಿ ಹಸ್ನೇನ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ.