ಬೆಂಗಳೂರು, ಜನವರಿ 30, 2026:ರಾಜ್ಯಾದ್ಯಂತ ದಂತ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂಡಿಯನ್ ಡೆಂಟಲ್ ಅಸೋಸಿಯೇಷನ್ (ಐಡಿಎ) ನೇತೃತ್ವದಲ್ಲಿ, ಕರ್ನಾಟಕ ಸರ್ಕಾರ, ಇಂಡಿಯನ್ ಪ್ರೊಸ್ತೋಡಾಂಟಿಕ್ ಸೊಸೈಟಿ (ಐಪಿಎಸ್) ಹಾಗೂ ರೋಟರಿ ಬೆಂಗಳೂರು ಸೋಶಿಯಲ್ ಕ್ಲಬ್ ಸಹಯೋಗದಲ್ಲಿ ‘ಸ್ಮೈಲಥಾನ್’ ಎಂಬ ಭವ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು ಕರ್ನಾಟಕದ ಅತಿದೊಡ್ಡ ಸ್ಮೈಲ್ ಸ್ಪರ್ಧೆಯಾಗಿದ್ದು, ಐಡಿಎ ಅನುಮೋದಿತ ಕ್ಲಿನಿಕ್ಗಳಲ್ಲಿ ಭಾಗವಹಿಸುವ 1 ಲಕ್ಷಕ್ಕೂ ಅಧಿಕ ಸ್ಪರ್ಧಿಗಳಿಗೆ ಕಡ್ಡಾಯವಾಗಿ ಉಚಿತ ದಂತ ತಪಾಸಣೆಯನ್ನು ಒದಗಿಸಲಾಗುತ್ತಿದೆ. ದಂತ ಆರೋಗ್ಯವನ್ನು ದಿನನಿತ್ಯದ ಸಂಭಾಷಣೆಯ ಭಾಗವಾಗಿಸಿ, ನಗುವಿನೊಂದಿಗೆ ಉತ್ತಮ ಜೀವನ ನಡೆಸುವಂತೆ ಜನರನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಕಾರ್ಯಕ್ರಮದ ಕುರಿತು ಮಾತನಾಡಿದ ಸ್ಮೈಲಥಾನ್ ಆಯೋಜನಾ ಅಧ್ಯಕ್ಷ ಡಾ. ಅಕ್ಷಯ ಎಂ. ಶೆಟ್ಟಿ,
“ಇಂದಿನ ಯುವಜನತೆ ಲುಕ್ ಮತ್ತು ಬ್ಯೂಟಿಗೆ ಹೆಚ್ಚಿನ ಒತ್ತಡ ನೀಡುತ್ತಾ ದಂತ ತಪಾಸಣೆಯನ್ನು ನಿರ್ಲಕ್ಷ್ಯ ಮಾಡುತ್ತಿದೆ. ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಸ್ಮೈಲಥಾನ್ ಮೂಲಕ ಪ್ರತಿಯೊಬ್ಬ ಸ್ಪರ್ಧಿಗೂ ಉಚಿತ ತಪಾಸಣೆ, ಮುಂಚಿತ ರೋಗ ಪತ್ತೆ ಹಾಗೂ ರಾಜ್ಯಾದ್ಯಂತ ದಂತ ಆರೋಗ್ಯ ಜಾಗೃತಿ ಮೂಡಿಸುವ ಗುರಿ ಹೊಂದಿದ್ದೇವೆ,” ಎಂದು ಹೇಳಿದರು.
ರಾಷ್ಟ್ರೀಯ ಮಾಹಿತಿಗಳ ಪ್ರಕಾರ ಶೇ.90ರಷ್ಟು ಭಾರತೀಯರು ಯಾವುದೋ ಒಂದು ರೀತಿಯ ದಂತ ಸಮಸ್ಯೆಯಿಂದ ಬಳಲುತ್ತಿದ್ದು, ಕೇವಲ ಶೇ.9ರಷ್ಟು ಜನ ಮಾತ್ರ ನಿಯಮಿತವಾಗಿ ದಂತ ವೈದ್ಯರನ್ನು ಭೇಟಿಯಾಗುತ್ತಾರೆ. ವಿಶೇಷವಾಗಿ 15–30 ವಯೋಮಾನದವರಲ್ಲಿ ದಂತ ಆರೋಗ್ಯದ ಕುರಿತು ಜಾಗೃತಿ ಕಡಿಮೆಯಾಗಿದೆ. ಪೆರಿಯೊಡಾಂಟಿಟಿಸ್ ಮುಂತಾದ ದಂತ ಸಮಸ್ಯೆಗಳು ಡಯಾಬಿಟಿಸ್, ಹೃದಯ ಸಂಬಂಧಿ ರೋಗಗಳು, ಅಸ್ಥಿ ಕ್ಷಯ ಹಾಗೂ ಇನ್ಫ್ಲಮೇಟರಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಕಳಪೆ ದಂತ ನೈರ್ಮಲ್ಯ ಆತ್ಮವಿಶ್ವಾಸ, ಶೈಕ್ಷಣಿಕ ಸಾಧನೆ ಹಾಗೂ ಸಾಮಾಜಿಕ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತದೆ.
ಸ್ಪರ್ಧೆಯಲ್ಲಿ 18–29 ವರ್ಷದ ಮಹಿಳೆ ಹಾಗೂ ಪುರುಷರು, ಮತ್ತು 30–45 ವರ್ಷದ ಮಹಿಳೆಯರು ಭಾಗವಹಿಸಬಹುದು. ಸ್ಪರ್ಧಿಗಳು ಮೊದಲು ಅಧಿಕೃತ ವೆಬ್ಸೈಟ್ ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಂಡು, ಪಾಲುದಾರ ಕ್ಲಿನಿಕ್ಗಳಲ್ಲಿ ಉಚಿತ ದಂತ ತಪಾಸಣೆ, ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಅಪ್ಲೋಡ್ ಹಾಗೂ ಸಾರ್ವಜನಿಕ ಮತದಾನ ಪ್ರಕ್ರಿಯೆಗಳಲ್ಲಿ ಭಾಗವಹಿಸಬೇಕು.
ಟಾಪ್ 500 ಸ್ಪರ್ಧಿಗಳ ಆಯ್ಕೆ ಬಳಿಕ, ಟಾಪ್ 32 ಸ್ಪರ್ಧಿಗಳು ಮಾರ್ಚ್ 1, 2026ರಿಂದ ನಡೆಯುವ ಫೈನಲ್ ಹಂತಕ್ಕೆ ಪ್ರವೇಶಿಸಲಿದ್ದು, ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿ ಫೈನಲ್ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯಲ್ಲಿ ಒಟ್ಟು 6 ಲಕ್ಷ ರೂ.ವರೆಗಿನ ನಗದು ಬಹುಮಾನಗಳೊಂದಿಗೆ ಗ್ರೂಮಿಂಗ್ ಕಿಟ್ಗಳು ಹಾಗೂ ದಂತ ಆರೋಗ್ಯ ಪ್ಯಾಕೇಜ್ಗಳನ್ನು ಗೆಲ್ಲುವ ಅವಕಾಶವಿದೆ. ಡೆಂಟಲ್ ಕ್ಲಿನಿಕ್ಗಳ ಮಿತಿಯನ್ನು ಮೀರಿ, ದಂತ ಆರೋಗ್ಯದ ಕುರಿತ ಸಂಭಾಷಣೆಯನ್ನು ನೆರೆಹೊರೆಯವರು, ಕೆಲಸದ ಸ್ಥಳಗಳು ಮತ್ತು ಡಿಜಿಟಲ್ ವೇದಿಕೆಗಳಿಗೆ ವಿಸ್ತರಿಸುವುದು ಈ ಕಾರ್ಯಕ್ರಮದ ವಿಶೇಷತೆ.
ಹೆಚ್ಚಿನ ಮಾಹಿತಿಗಾಗಿ: www.ssmileathon.com
