ಬೆಂಗಳೂರು : ಶಾಸಕ ಮುನಿರತ್ನ ಮತ್ತೆ ತಮ್ಮ ನಾಲಿಗೆ ಹರಿಬಿಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಹೆಣ್ಣಿಗೆ ಯಾವ ಹುಚ್ಚು ಹಿಡಿದರೂ ಬಿಡಿಸಬಹುದು. ಆದರೆ ಎಂಎಲ್ಎ ಆಗುವ ಹುಚ್ಚು ಹಿಡಿದರೆ ಬಿಡಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ವಿರುದ್ದ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ಮಲ್ಲತ್ತಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಮುನಿರತ್ನ ಈ ಹೇಳಿಕೆ ನೀಡಿದ್ದಾರೆ.
ನಾನು ಯಾರನ್ನೂ ದೂರುವುದಿಲ್ಲ. ಇಲ್ಲಿ ಈ ದೇವರು ಹಣೆಯ ಮೇಲೆ ಅದೇನು ಬರೆದಿದ್ದಾನೋ ಅದೇ ನಡೆಯುತ್ತದೆ. ಪೊಲೀಸನವರಿಗೆ ಎಲ್ಲರಿಗೂ ನನ್ನ ಧನ್ಯವಾದಗಳು. ನನ್ನ ರಕ್ಷಣೆಗಾಗಿ ನೀವೆಲ್ಲರೂ ಹಗಲಿರುಳು ಶ್ರಮಿಸುತ್ತಿದ್ದೀರಿ. ನನ್ನನ್ನು ಏನು ಮಾಡುತ್ತಾರೋ ಗೊತ್ತಿಲ್ಲ. ಏನು ಬೇಕಾದರೂ ಮಾಡಲಿ. ಈ ಭೂಮಿಗೆ ಬಂದ ಮೇಲೆ ನಾವು ಹೋಗಲೇ ಬೇಕು. ಅವರ ಕೈಯಿಂದ ನಾನು ಹೋಗಬೇಕು ಎಂದು ಬರೆದಿದ್ದರೆ ಯಾರು ತಪ್ಪಿಸಲು ಆಗುತ್ತೆ? ಅದೂ ಸಹ ಆಗಿಬಿಡಲಿ ಎಂದು ನುಡಿದಿದ್ದ ಮುನಿರತ್ನ, ಒಂದು ಹೆಣ್ಣಿಗೆ ಯಾವ ಹುಚ್ಚು ಹಿಡಿದರೆ ಬೇಕಾದರೂ ತಪ್ಪಿಸಬಹುದು. ಈ ಎಂಎಲ್ಎ ಹುಚ್ಚು ಹಿಡಿದರೆ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಶಾಸಕ ಮುನಿರತ್ನ ಅವರ ನುಡಿಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಈ ಹಿಂದೆಯೂ ಮುನಿರತ್ನ ಗುತ್ತಿಗೆದಾರರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಡ್ಡ ಹಗರಣ ಸೃಷ್ಟಿಸಿದ್ದರು. ಬಳಿಕ ಅವರ ಹೆಂಡತಿಯನ್ನೇ ಮಂಚಕ್ಕೆ ಕರೆದಿದ್ದ ಅಡಿಯೋ ರಾಜ್ಯಾದ್ಯಂತ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಮುನಿರತ್ನ ವಿರುದ್ದ ಹಲವು ಕೇಸುಗಳು ದಾಖಲಾಗಿದ್ದು. ಬಳಿಕ ಸಂತ್ರಸ್ತೆಯೋರ್ವಳು ಮುನಿರತ್ನ ತಮ್ಮ ವಿರುದ್ದ ಅತ್ಯಾಚಾರವೆಸಗಿದ್ದಾರೆಂದು ದೂರು ನೀಡಿದ್ದಳು. ಅಲ್ಲದೇ ಮುನಿರತ್ನ ಹಲವರ ವಿಡಿಯೋಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ತಮ್ಮ ಸ್ವಂತ ಮಗಳ ವಿಡಿಯೋ ಸಹ ಅವರ ಮೊಬೈಲ್ ನಲ್ಲಿದೆ ಎಂದು ಸಂತ್ರಸ್ತೆ ದೂರಿದ್ದಳು.
ಕಾಂಗ್ರೆಸ್ ಪಕ್ಷದಲ್ಲಿದ್ದ ಮುನಿರತ್ನ ಆಪರೇಷನ್ ಕಮಲ ಬಳಿಕ ಬಿಜೆಪಿ ಸೇರಿ ಸಚಿವರಾಗಿದ್ದರು. ಬಳಿಕ ಕಾಂಗ್ರೆಸ್ ಸರ್ಕಾರ ಬಂದಾಗ ತಮ್ಮ ಬಾಕಿ ಹಣವನ್ನು ನೀಡುವಂತೆ ಬೇಡಿಕೊಂಡು ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾಲಿಗೆ ಬಿದ್ದಿದ್ದೂ ಸಹ ಸುದ್ದಿಯಾಗಿತ್ತು. ಈಗ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮುನಿರತ್ನ ಹಾಗೂ ಕುಸುಮಾ ಹನುಮಂತರಾಯಪ್ಪ ನಡುವೆ ಶೀತಲ ಸಮರ ತಾರಕಕ್ಕೇರಿದ್ದು, ಇಬ್ಬರು ಹಲವು ಬಾರಿ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದಾರೆ.
ಪ್ರತ್ಯೇಕ ಪ್ರಕರಣದಲ್ಲಿ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನೀಯ ಹೇಳಿಕೆಗಳನ್ನು ಬಳಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕ ಕೃಷ್ಣ ಸಿಂಗ್ ಕಲ್ಲು ಅವರು ಪೊಲೀಸ್ ದೂರು ನೀಡಿದ್ದಾರೆ.
ಮೋದಿಯವರ ದಿವಂಗತ ತಾಯಿ ಬಗ್ಗೆ ಬಳಸಿರುವ ಅವಾಚ್ಯ ಪದಗಳು ವಿರೋಧಪಕ್ಷಗಳ ಹತಾಶ ಸ್ಥಿತಿಯನ್ನು ತೋರಿಸುತ್ತದೆ. ಎಷ್ಟೇ ಬಾರಿ ಕ್ಷಮೆ ಕೇಳಿದರೂ ಬಿಹಾರದ ಜನರು ವಿಪಕ್ಷಗಳನ್ನು ಕ್ಷಮಿಸುವುದಿಲ್ಲ. ಕಾಂಗ್ರೆಸ್ ನ ಈ ಯಾತ್ರೆಯು ಪ್ರಧಾನಿ ಮೋದಿ ಅವರಿಗೆ ಅವಮಾನ ಮಾಡಲೆಂದೇ ಹಮ್ಮಿಕೊಳ್ಳಲಾಗಿದೆ ಎಂದು ಕೃಷ್ಣ ಸಿಂಗ್ ಕಲ್ಲು ಆರೋಪಿಸಿದರು.
ದೇಶದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ನಿರಂತರವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ವೇದಿಕೆ ಮೇಲೆ ಪ್ರಧಾನಿ ಮೋದಿ ಅವರ ತಾಯಿಯ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. ದಿವಂಗತ ತಾಯಿಯ ಬಗ್ಗೆ ಈ ರೀತಿ ಮಾತನಾಡಿರುವುದು ರಾಹುಲ್ ಗಾಂಧಿಯ ವ್ಯಕ್ತಿತ್ವ ತೋರಿಸುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯು ಪ್ರಧಾನಿ ಮೋದಿ ಮತ್ತು ಅವರ ತಾಯಿಯ ವಿರುದ್ಧ ಅವಾಚ್ಯ ಶಬ್ದಗಳಿನಿಂದ ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿರುವ ವಿಡಿಯೋ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.
