ಹಾಸನ- ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ವಿಪಕ್ಷ ನಾಯಕರು ಹೇಳುವಷ್ಟು ಹದಗೆಟ್ಟಿಲ್ಲ. ಜಿಲ್ಲೆಯಲ್ಲಿ ಯಾವುದೇ ಅಧಿಕಾರಿಗಳು ತಪ್ಪು ಮಾಡಿದ್ದರೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರು ನೀಡಲಿ, ಅದನ್ನು ಬಿಟ್ಟು ಸುಳ್ಳು ಆರೋಪ ಮಾಡುವುದು ಬೇಡ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಸಂಸದ ಶ್ರೇಯಸ್ ಪಟೇಲ್ ತಿರುಗೇಟು ನೀಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಲ್ಲ ಜನಪ್ರತಿನಿಧಿಗಳು ಸರ್ಕಾರದ ಅಂಗ, ಸರ್ಕಾರದ ಅಧಿಕಾರಿಗಳಿಂದ ಕೆಲಸ ತಗೋಬೇಕು. ಅದನ್ನು ಬಿಟ್ಟು ದಾಖಲೆ ಇಲ್ಲದೆ ಆರೋಪ ಮಾಡಬಾರದು ಎಂದು ಟಾಂಗ್ ನೀಡಿದರು.
ನಾನು ಸಂಸದರಾಗಿ, ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ಹೇಳುವುದಾದರೆ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ, ಆದರೆ ರೇವಣ್ಣ ಅವರು ಪೌತಿ ಅದಾಲತ್ನಲ್ಲಿ ಸರ್ಕಾರದ ಬಗ್ಗೆ ಲಘುವಾಗಿ ಮಾತನಾಡುವುದು ಖಂಡನೀಯ ಎಂದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಸರ್ಕಾರದ ವಿರುದ್ಧ ಮಾತನಾಡಬಾರದು, ಅವರ ಮೇಲೆ ಗೌರವ ಇದೆ, ನನಗೆ ವಯಸ್ಸಾಗಿರುವಷ್ಟು ಅವರು ಶಾಸಕರಾಗಿ ಕೆಲಸ ಮಾಡಿದ್ದಾರೆ. ಇಂಥವರು ಯೋಚಿಸಿ ಮಾತನಾಡಬೇಕು, ಸುಮ್ಮನೆ ಆರೋಪ ಮಾಡಬಾರದು ಎಂದರು.
ನಮಗೂ ಜವಾಬ್ದಾರಿ ಇದೆ, ಜಿಲ್ಲೆಯ ಅಭಿವೃದ್ಧಿಗೆ ಬೇಕಾಗುವ ಅನುದಾನವನ್ನು ಸರ್ಕಾರದ ಕಡೆಯಿಂದ ತರುವ ಪ್ರಯತ್ನ ಮಾಡುತ್ತಿದ್ದೇವೆ. ಇದು ಮುಂದುವರಿಯಲಿದೆ ಎಂದು ಸಮರ್ಥಿಸಿಕೊಂಡರು. ಜಿಲ್ಲೆಯಲ್ಲಿ ಕೊಲೆ ಇತ್ಯಾದಿ ಪ್ರಮಾಣ ಹಿಂದೆಗೆ ಹೋಲಿಸಿದರೆ ಈಗ ಕಡಿಮೆ ಆಗಿದೆ. ಹೆಚ್ಚಾಗಿದೆ ಎಂದು ಪ್ರತಿಭಟನೆ ಮಾಡುತ್ತೇವೆ ಎಂದು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸ್ವತಂತ್ರರು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಜಿಲ್ಲೆಯನ್ನು ಕಡೆಗಣಿಸಿಲ್ಲ, ಜಿಲ್ಲೆಯ ಬಗ್ಗೆ ಸದಾ ಯೋಚಿಸುತ್ತಾರೆ. ಕಣ್ಣಿನ ಆಪರೇಷನ್ ಆಗಿರುವುದರಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು. ಮನೆಯಲ್ಲೇ ಇಸ್ಪೀಟ್ ದಂಧೆ ನಡೆಯುತ್ತಿದೆ ಎಂಬ ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ಅವರ ಆರೋಪಕ್ಕೆ, ಯಾರೆಲ್ಲ ಗಾಂಜಾ ಮಾರಾಟ ಇತ್ಯಾದಿ ಅಕ್ರಮ ದಂಧೆಯಲ್ಲಿ ತೊಡಗಿರುವ ಕಿಂಗ್ಪಿನ್ನನ್ನು ಮೊದಲು ಪತ್ತೆ ಮಾಡುವ ಕೆಲಸ ಆಗಬೇಕು.
ಮನೆಯಲ್ಲಿ ಇಸ್ಪೀಟ್ ಆಡಿಸಿದರೆ ಅಂಥವರ ವಿರುದ್ದಕ್ರಮ ಆಗಬೇಕು. ನಾವೆಲ್ಲ ಜನಪ್ರತಿನಿಧಿಗಳು, ಪರಸ್ಪರ ಆರೋಪ ಪ್ರತ್ಯಾರೋಪ ಮಾಡುವ ಬದಲು ಅಭಿವೃದ್ಧಿಗೆ ಸಹಕಾರ ಕೊಡಿ, ಜನರಿಗೆ ತಪ್ಪು ಸಂದೇಶ ಹೋಗುವುದು ಬೇಡ ಎಂದರು. ನಾನು ನನ್ನ ಶತ್ರುಗಳಿಗೂ ತೊಂದರೆ ಕೊಡಲ್ಲ, ರಾಜಕೀಯ ಇಂದು ಇರುತ್ತೆ, ನಾಳೆ ಹೋಗಲಿದೆ, ಚುನಾವಣೆ ಬಂದಾಗ ರಾಜಕೀಯ ಮಾಡೋಣ, ಯಾವುದೇ ಅಧಿಕಾರಿಗಳು ತಪ್ಪು ಮಾಡಿದ್ದರೆ ಕ್ರಮ ಆಗಬೇಕು. ಆದರೆ ಸುಳ್ಳು ಆರೋಪ ಬೇಡ ಎಂದರು.

[…] ಹಾಸನ-ಜಿಲ್ಲೆಯಲ್ಲಿ ಯಾವುದೇ ಅಧಿಕಾರಿಗಳು ತ… […]