ಭಾರತ ಸರ್ಕಾರ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಅಥವಾ ಫ್ರೀ ಹ್ಯಾಂಡ್ ನೀಡಿದ ನಂತರ ಪಾಕಿಸ್ತಾನದಲ್ಲಿ ಭೀತಿ ಉಂಟಾಗಿದೆ. ಅಲ್ಲಿನ ಸಚಿವರು ಭಾರತ 24 ರಿಂದ 36 ಗಂಟೆಗಳಲ್ಲಿ ಮಿಲಿಟರಿ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿಶ್ವದಾದ್ಯಂತದ ನಾಯಕರು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಬಹಿರಂಗವಾಗಿ ಖಂಡಿಸಿದ್ದಾರೆ.
ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಮಿಲಿಟರಿ ಕಾರ್ಯಾಚರಣೆ ನಡೆದರೆ, ಯುದ್ಧದ ಸಂದರ್ಭದಲ್ಲಿ ವಿಶ್ವದ ಯಾವ ದೇಶಗಳು ಭಾರತದ ಪರವಾಗಿ ನಿಲ್ಲುತ್ತವೆ, ಯಾವ ದೇಶಗಳು ಪಾಕಿಸ್ತಾನವನ್ನು ಬೆಂಬಲಿಸಲಿವೆ ಎನ್ನುವ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡಿದೆ.
ಮೊದಲನೆಯದಾಗಿ ಭಯೋತ್ಪಾದಕ ದಾಳಿಯಲ್ಲಿ ಮುಗ್ಧ ನಾಗರಿಕರ ರಕ್ತ ಹರಿಸಲಾಗಿದೆ. ಹಾಗಾಗಿ ಯಾವುದೇ ದೇಶವು ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸುವುದಿಲ್ಲ. ಆದರೆ ಮುಸ್ಲಿಂ ರಾಷ್ಟ್ರಗಳು ಪಾಕಿಸ್ತಾನವನ್ನು ಬೆಂಬಲಿಸಲು ಮುಂದೆ ಬರಬಹುದು. ಈ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ದೆಹಲಿಯಲ್ಲಿ ಬೇರೆ ಬೇರೆ ದೇಶಗಳ ರಾಜತಾಂತ್ರಿಕರಿಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಲಾಗಿದೆ.
ಈ ಮೂರು ದೇಶಗಳು ಏನು ಮಾಡುತ್ತಿವೆ? :
ಈ ನಡುವೆ ಮೂರು ದೇಶಗಳು ಎರಡೂ ದೇಶಗಳೊಂದಿಗೆ ಸಂಪರ್ಕದಲ್ಲಿವೆ ಎಂದು ಹೇಳಲಾಗುತ್ತಿದೆ. ಸೌದಿ ಅರೇಬಿಯಾ, ಯುಕೆ ಮತ್ತು ಇರಾನ್ ಸದ್ಯಕ್ಕೆ ಎರಡೂ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿವೆ. ಎರಡು ಪರಮಾಣು ಶಸ್ತ್ರಸಜ್ಜಿತ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿರುವುದರಿಂದ, ಈ ದೇಶಗಳು ಸಮನ್ವಯವನ್ನು ತರಲು ಪ್ರಯತ್ನಿಸುತ್ತಿವೆ.ಆದರೆ ಭಯೋತ್ಪಾದನೆಯ ವಿಷಯದಲ್ಲಿ ಅಂತರರಾಷ್ಟ್ರೀಯ ಸಮುದಾಯವು ಭಾರತದ ಬಗ್ಗೆ ಸಹಾನುಭೂತಿ ಹೊಂದಿದೆ. ಆದರೂ, ಕೆಲವು ದೇಶಗಳು ಪಾಕಿಸ್ತಾನವನ್ನು ರಹಸ್ಯವಾಗಿ ಬೆಂಬಲಿಸುತ್ತಿರುವಂತೆ ಕಾಣುತ್ತಿದೆ.
ಪಾಕಿಸ್ತಾನವನ್ನು ಬೆಂಬಲಿಸುವವರು ಯಾರು? :
ಪಾಕಿಸ್ತಾನಕ್ಕೆ ತಮ್ಮ ಬೆಂಬಲ ಇದೆ ಎನ್ನುವುದನ್ನು ಯಾವುದೇ ದೇಶ ಬಹಿರಂಗವಾಗಿ ಹೇಳುತ್ತಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದೊಂದಿಗೆ ತಮ್ಮ ಆಪ್ತತೆಯನ್ನು ಹೆಚ್ಚಿಸಿಕೊಂಡಿರುವ ಎರಡು ದೇಶಗಳಿವೆ. ಅವುಗಳೆಂದರೆ ಚೀನಾ ಮತ್ತು ಟರ್ಕಿ.ಎರಡೂ ದೇಶಗಳು ಕೆಲವು ಮಿಲಿಟರಿ ಸರಬರಾಜುಗಳನ್ನು ಮಾಡುತ್ತಿವೆ ಎಂಬ ವರದಿಗಳಿವೆ. ಪಾಕಿಸ್ತಾನದ ಸಾಮಾಜಿಕ ಮಾಧ್ಯಮದಲ್ಲಿ ಟರ್ಕಿಶ್ ಮಿಲಿಟರಿ ವಿಮಾನದ ಮೂಲಕ ಯುದ್ಧ ಸಲಕರಣೆಗಳನ್ನು ತಲುಪಿಸಲಾಗಿದೆ ಎಂದು ಹೇಳಲಾಗಿದೆ. ಮತ್ತೊಂದೆಡೆ, ಚೀನಾ ಕೆಲವು ಮಾರಕ ಕ್ಷಿಪಣಿಗಳ ಸರಕನ್ನು ಕಳುಹಿಸಿದೆ. ಬಾಂಗ್ಲಾದೇಶದ ಮೊಹಮ್ಮದ್ ಯೂನಸ್ ಈಗಾಗಲೇ ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ 1971 ರ ಯುದ್ಧದಂತೆ, ಈ ಬಾರಿ ಪಾಕಿಸ್ತಾನವು ಅಮೆರಿಕದಿಂದ ಯಾವುದೇ ಬೆಂಬಲವನ್ನು ಪಡೆಯುವುದಿಲ್ಲ, ಅದು ಹಿಂದೆ ಅದರ ದೊಡ್ಡ ಶಕ್ತಿಯಾಗಿತ್ತು.
ಚೀನಾ ಪಾಕಿಸ್ತಾನವನ್ನು ಬೆಂಬಲಿಸುತ್ತದೆಯೇ?
ಚೀನಾ ಭಾರತದ ವಿರುದ್ಧ ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸುವ ಸಾಧ್ಯತೆ ಕಡಿಮೆ. ಈಗಾಗಲೇ ಅಮೆರಿಕದೊಂದಿಗಿನ ಟ್ರೇಡ್ ವಾರ್ ಸುಳಿಯಲ್ಲಿ ಸಿಲುಕಿರುವ ಚೀನಾ ಮತ್ತೆ ಭಾರತದೊಂದಿಗೆ ನೆರ ಸಂಘರ್ಷಕ್ಕೆ ಇಳಿಯಲು ಇಷ್ಟಪಡುವುದಿಲ್ಲ. ಹೆಚ್ಚೆಂದರೆ ಚೀನಾ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಮಟ್ಟದಲ್ಲಿ ಶಸ್ತ್ರಾಸ್ತ್ರ, ತಾಂತ್ರಿಕ ಬೆಂಬಲ ಮತ್ತು ಸಹಾಯವನ್ನು ಒದಗಿಸಬಹುದು. ಒಂದು ವರದಿಯ ಪ್ರಕಾರ, ಚೀನಾದ ರಕ್ಷಣಾ ರಫ್ತಿನ 82 ಪ್ರತಿಶತ ಪಾಕಿಸ್ತಾನಕ್ಕೆ ಹೋಗುತ್ತದೆ.
ಟರ್ಕಿಯೇ ನಾಯಕನಾಗಲು ಕಾರಣವೇನು?
ಟರ್ಕಿ ಇಡೀ ಮುಸ್ಲಿಂ ಜಗತ್ತಿನ ನಾಯಕನಾಗುವ ಕನಸು ಕಾಣುತ್ತಿದೆ. ಈ ವಿಷಯದಲ್ಲಿ ಸೌದಿಯನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನವು ತನ್ನ ಶಸ್ತ್ರಾಸ್ತ್ರಗಳ ದೊಡ್ಡ ಆಮದುದಾರ ರಾಷ್ಟ್ರವಾಗಿದೆ. ಆದ್ದರಿಂದ ಅದು ಪಾಕಿಸ್ತಾನಕ್ಕೂ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತದೆ. ಚೀನಾದ ಶಸ್ತ್ರಾಸ್ತ್ರಗಳಿಗಿಂತ ಭಿನ್ನವಾಗಿ, ಟರ್ಕಿಯೆಯ ಶಸ್ತ್ರಾಸ್ತ್ರಗಳು ಆಧುನಿಕ ಮತ್ತು ಯುದ್ಧಪರೀಕ್ಷಿತವಾಗಿವೆ. ಇದಲ್ಲದೆ, ಪಾಕಿಸ್ತಾನಕ್ಕೆ ಎಲ್ಲಿಂದಲೂ ಯಾವುದೇ ಪ್ರಮುಖ ಸಹಾಯ ಸಿಗುವುದಿಲ್ಲ.
