ಬೆಂಗಳೂರು : ಕಿಡ್ನಿ ನಮ್ಮ ದೇಹದ ಅತಿ ಪ್ರಮುಖ ಭಾಗ. ಇದರ ಆರೋಗ್ಯ ಕಾಪಾಡಿಕೊಳ್ಳುವುದು ಕೂಡಾ ಅತಿ ಮುಖ್ಯ. ಹೊಸ ತಲೆಮಾರಿನ ಜೀವನ ಶೈಲಿ ನಮ್ಮ ಮೂತ್ರ ಪಿಂಡದ ಆರೋಗ್ಯದ ಮೇಲೂ ಅನೇಕ ಪರಿಣಾಮ ಬೀರುತ್ತಿದೆ. ಹಾಗಾಗಿ, ಕಿಡ್ನಿ ಸಂಬಂಧಿತ ಸಮಸ್ಯೆಗಳು ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿವೆ.
ಕಿಡ್ನಿ ಆರೋಗ್ಯದ ಬಗ್ಗೆ ಗಮನವಹಿಸುವುದು ಅತೀ ಮುಖ್ಯ.
ಆರೋಗ್ಯದಲ್ಲಿ ಈ ಕೆಳಗಿನ ಬದಲಾವಣೆಗಳು ಕಂಡು ಬಂದರೆ, ನಿಮ್ಮ ಕಿಡ್ನಿ ಆರೋಗ್ಯ ಹಾಳಾಗಿರುವುದು ಪಕ್ಕಾ. ಈ ಸೂಚನೆಯನ್ನು ದೇಹ ನೀಡಿದ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಹಾಗಾದರೆ, ಆ ಐದು ಲಕ್ಷಣಗಳು ಯಾವುವು ಗಮನಿಸೋಣ.
ನಿರಂತರ ಆಯಾಸ:
ಸಾಕಷ್ಟು ವಿರಾಮದ ಬಳಿಕವೂ ನಿಮಗೆ ಆಯಾಸವಾಗುತ್ತಿದೆ ಎಲ್ಲೋ ಏನೋ ಯಡವಟ್ಟಾಗಿದೆ ಎಂದೇ ಅರ್ಥ. ನಿರಂತರ ಆಯಾಸ, ವೀಕ್ನೆಸ್ ಕಂಡು ಬಂದರೆ, ನಿಮ್ಮ ಕಿಡ್ನಿ ಸರಿಯಾಗಿ ಕೆಲಸ ಮಾಡದೇ ಇರುವುದು ಕೂಡಾ ಒಂದು ಕಾರಣ ಆಗಿರಬಹುದು. ಹಾಗಾಗಿ, ಸಾಕಷ್ಟು ವಿಶ್ರಾಂತಿ ಪಡೆಯಿರಿ. ವಿಶ್ರಾಂತಿಯ ಬಳಿಕವೂ ಆಯಾಸ, ದೌರ್ಬಲ್ಯ ಮುಂದುವರಿದರೆ, ಬೇಗ ವೈದ್ಯರನ್ನು ಭೇಟಿಯಾವುದು ಉತ್ತಮ. ಅದರ ಲಿಂಕ್ ನೇರ ಕಿಡ್ನಿಗೆ ಸಂಬಂಧಿಸಿರಬಹುದು.
ಮಣಿಗಂಟು, ಪಾದ, ಕೈಯಲ್ಲಿ ಬಾವು:
ಕೈ, ಪಾದ, ಕಾಲು ಹಾಗೂ ಕೆಲವೊಮ್ಮೆ ಮುಖ ಊದಿಕೊಂಡಿದ್ದರೆ, ಅದನ್ನು ಕಡೆಗಣಿಸುವುದು ಸರಿಯಲ್ಲ. ಯಾಕಂದರೆ, ಅದೂ ಕೂಡಾ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯ ಮುನ್ನೆಚ್ಚರಿಕೆ ನೀಡುತ್ತಿರಬಹುದು. ಪಾದ, ಕಾಲು, ಮಣಿಗಂಟು ಊದಿ ಕೊಳ್ಳುತ್ತಿದ್ದರೆ, ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದೇ ಹೇಳಬಹುದು. ಯಾಕಂದರೆ, ಕಿಡ್ನಿ ನಿಯಮಿತವಾಗಿ ಹಾಗೂ ಸರಾಗವಾಗಿ ದ್ರವವನ್ನು ವಿಸರ್ಜಿಸಲು ವಿಫಲವಾದಾಗ, ಮುಖ, ಪಾದ, ಕಾಲು, ಮಣಿಗಂಟುಗಳಲ್ಲಿ ಊತ ಕಾಣಿಸಿಕೊಳ್ಳುತ್ತಿದೆ.
ಮೂತ್ರವಿಸರ್ಜನೆಯಲ್ಲಿ ಉರಿ, ವ್ಯತ್ಯಾಸ:
ನಮ್ಮ ಮೂತ್ರ ಕೂಡಾ ನಮ್ಮ ಆರೋಗ್ಯದ ಸುಳಿವು ನೀಡುತ್ತದೆ. ಮೂತ್ರದ ಬಣ್ಣದಲ್ಲಿ ವ್ಯತ್ಯಾಸ, ಮೂತ್ರದಲ್ಲಿ ವಿಪರೀತ ನೊರೆ, ಸರಾಗವಾಗಿ ಮೂತ್ರ ವಿಸರ್ಜನೆ ಆಗದಿರುವುದು, ಮೂತ್ರ ವಿಸರ್ಜನೆ ವೇಳೆ ಉರಿ, ಸರಿಯಾಗಿಮೂತ್ರ ವಿರ್ಸಜನೆಆಗದಿರುವುದು – ಈ ಎಲ್ಲಾ ಸಮಸ್ಯೆಗಳು ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸದೇ ಹೋದಾಗ ಉದ್ಭವವಾಗುತ್ತವೆ. ನಿಮ್ಮ ಆರೋಗ್ಯದಲ್ಲಿ ಇಂಥ ಲಕ್ಷಣಗಳು ಕಾಣಿಸಿಕೊಂಡರೆ ಮೊದಲು ವೈದ್ಯರನ್ನು ಸಂಪರ್ಕ ಮಾಡಿ.
ಉಸಿರುಕಟ್ಟಿದಂತಾಗುವುದು:
ನಿಮಗೆ ಪದೇ ಪದೇ ಉಸಿರುಗಟ್ಟಿದಂತಾದರೆ ಯಾವುದೇ ಕಾರಣಕ್ಕೂ ಅದನ್ನು ಕಡೆಗಣಿಸಬೇಡಿ. ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸದೇ ಹೋದಾಗ, ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಕಿಡ್ನಿ ದ್ರವವನ್ನು ಸರಿಯಾಗಿ ಫಿಲ್ಟರ್ ಮಾಡಲು ವಿಫಲವಾದಾಗ, ಶ್ವಾಸಕೋಸದಲ್ಲಿ ದ್ರವ ಶೇಖರಣೆಯಾಗುವ ಸಾಧ್ಯತೆಗಳಿವೆ. ಇಲ್ಲಿ ದ್ರವ ಶೇಖರಣೆಯಾದಾಗ, ಉಸಿರಾಟಕ್ಕೆ ಸಮಸ್ಯೆ ಉಂಟಾಗುತ್ತದೆ.
ಒಣ ಚರ್ಮ ಮತ್ತು ಚರ್ಮದಲ್ಲಿ ತುರಿಕೆ:
ಕಿಡ್ನಿ ನಿಮ್ಮ ದೇಹದಲ್ಲಿರುವ ವೇಸ್ಟ್ ಮತ್ತು ಹೆಚ್ಚುವರಿ ದ್ರವವನ್ನು ಫಿಲ್ಟರ್ ಮಾಡುತ್ತದೆ. ಇದರಿಂದ ನಮ್ಮ ರಕ್ತ ಶುದ್ಧವಾಗುತ್ತದೆ ಮತ್ತು ಮೂಳೆ ಬಲಿಷ್ಠವಾಗುತ್ತದೆ. ವೇಸ್ಟ್ ಮತ್ತು ಹೆಚ್ಚುವರಿ ದ್ರವ ಫಿಲ್ಟ್ ಆಗದೇ ಹೋದಾಗ, ಚರ್ಮ ಒಣಗಲು ಶುರುವಾಗುತ್ತದೆ. ಜೊತೆ ದೇಹದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಅನಿಯಮಿತ ತುರಿಕೆ ಉಂಟಾದರೆ, ಅದು ಸೀದಾ ಕಿಡ್ನಿಗೆ ಸಂಬಂಧಿಸಿರುತ್ತದೆ. ಇಂಥಹ ಸಂದರ್ಭದಲ್ಲಿ ವೈದ್ಯರ ಸಲಹೆ ಅತ್ಯಂತ ಮುಖ್ಯ.
(ಸೂಚನೆ : ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಇದನ್ನು ದೃಢಪಡಿಸುವುದಿಲ್ಲ.)
