ಮಂಗಳೂರು ಮಾರ್ಚ್ 19: ಐಷಾರಾಮಿ ಫಾರ್ಚೂನರ್ ಕಾರಿನಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಪೊಲೀಸರು, ನಾಲ್ಕು ದನಗಳನ್ನು ರಕ್ಷಿಸಿದ್ದಾರೆ. ತೆಂಕ ಎಡಪದವು ಗ್ರಾಮದ ಸಾಸ್ತಾವು ದೇವಸ್ಥಾನದ ಬಳಿ ಗುರುವಾರ ಬೆಳಗಿನ ಜಾವ ಈ ಘಟನೆ ನಡೆದಿದೆ.
ಮಾರ್ಚ್ 18ರಂದು ಬೆಳಗಿನ ಜಾವ 4:45ರ ಸುಮಾರಿಗೆ ಪೊಲೀಸರು ಗಸ್ತಿನಲ್ಲಿದ್ದಾಗ ಸಾಸ್ತಾವು ದೇವಸ್ಥಾನದ ಬಳಿ ಫಾರ್ಚೂನರ್ ಕಾರಿನಲ್ಲಿ ದನಗಳನ್ನು ಅಕ್ರಮವಾಗಿ ತುಂಬುತ್ತಿದ್ದಾರೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರನ್ನು ಕಂಡ ಆರೋಪಿಗಳು ಕಾರನ್ನು ಬಿಟ್ಟು ಕತ್ತಲೆಯಲ್ಲಿ ಪೊದೆಗಳ ಮೂಲಕ ಓಡಿ ಪರಾರಿಯಾಗಿದ್ದಾರೆ.ಬಿಳಿ ಬಣ್ಣದ ಫಾರ್ಚೂನರ್ ಕಾರನ್ನು (KA-51 AN-8967) ಪರಿಶೀಲಿಸಿದಾಗ, ಹಿಂಸಾತ್ಮಕ ರೀತಿಯಲ್ಲಿ ಕೈಕಾಲು ಕಟ್ಟಿ ಹಾಕಿದ್ದ ನಾಲ್ಕು ದನಗಳು ಪತ್ತೆಯಾಗಿವೆ. ದನಗಳನ್ನು ಕಳವು ಮಾಡಿ, ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು ಎಂದು ಶಂಕಿಸಲಾಗಿದೆ. ಕಾರಿನೊಳಗೆ ಒಂದು ಕಬ್ಬಿಣದ ತಲವಾರು, ರಾಡ್, ನೈಲಾನ್ ಹಗ್ಗಗಳು ಹಾಗೂ ‘DL-10 CE-6227’ ಎಂಬ ನಕಲಿ ನಂಬರ್ ಪ್ಲೇಟ್ಗಳು ಪತ್ತೆಯಾಗಿವೆ. . ಈ ಕುರಿತು ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.
