ಬೇಲೂರು, ನ.5: ಬೇಲೂರು ತಾಲೂಕಿನ ಅರೇಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಮಾರಾಟ ನಡೆಸುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಹೊರರಾಜ್ಯಗಳ ವಲಸಿಗರು ಪಟ್ಟಣದಲ್ಲಿ ಹೆಚ್ಚಾಗುತ್ತಿದ್ದಂತೆ, ಸಮಾಜಘಾತಕ ಚಟುವಟಿಕೆಗಳು ಕೂಡ ವೇಗ ಪಡೆದಿವೆ ಎಂಬ ಸ್ಥಳೀಯರ ಆತಂಕವನ್ನು ಈ ಘಟನೆಯು ಮತ್ತೊಮ್ಮೆ ದೃಢಪಡಿಸಿದೆ.
ಪೊಲೀಸರ ಪ್ರಕಾರ, ಅಸ್ಸಾಂ ಮೂಲದ ತಾಹೀರ್ ಆಲಿ ಎಂಬಾತನು ಕಳೆದ ಮೂರು ವರ್ಷಗಳಿಂದ ಅರೇಹಳ್ಳಿಯ ಸಂತೋಷನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಟಿಂಬರ್ ಕೆಲಸದ ಹೆಸರಿನಲ್ಲಿ ತಂಗಿದ್ದನು. ನಿನ್ನೆ ಹಗಲಿನ ಹೊತ್ತಿನಲ್ಲಿ, ಪಟ್ಟಣದ ಪೆಟ್ರೋಲ್ ಬಂಕ್ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ, ಸಾವಿರಾರು ರೂಪಾಯಿ ಮೌಲ್ಯದ ಗಾಂಜಾ ಸೊಪ್ಪನ್ನು ಮೂರ್ನಾಲ್ಕು ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ವಶಪಡಿಸಿಕೊಂಡಿದ್ದಾರೆ.
ಇದನ್ನು ಓದಿ: ರಾಜ್ಯದಲ್ಲಿನ 2025–26ನೇ ಸಾಲಿನ SSLC ಹಾಗೂ PUC ಅಂತಿಮ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ
ಆರೋಪಿ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಜೈಲಿಗೆ ಕಳುಹಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಸಿಪಿಐ ಜಗದೀಶ್ ಅವರ ಮಾರ್ಗದರ್ಶನದಲ್ಲಿ, ಪಿಎಸ್ಐ ಯೋಗಾಬರಂ ಅವರ ನೇತೃತ್ವದಲ್ಲಿ ಪೊಲೀಸರು — ಶಮಶೋದ್ದಿನ್, ಪೃಥ್ವಿ, ಸುಪ್ರೀತ್ ಹಾಗೂ ಮಂಜುನಾಥ್ — ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ಸ್ಥಳೀಯರು ಪೊಲೀಸರ ತ್ವರಿತ ಕ್ರಮವನ್ನು ಮೆಚ್ಚಿ, “ಪಟ್ಟಣದ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಲು ಇಂಥ ಕಾನೂನು ಉಲ್ಲಂಘಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
Watch Video- ಅರೇಹಳ್ಳಿಯಲ್ಲಿ ಅಕ್ರಮ ಗಾಂಜಾ ಮಾರಾಟ ಪತ್ತೆ! 👮♂️ ಅಸ್ಸಾಂ ಮೂಲದ ಕಾರ್ಮಿಕ ಖಾಕಿ ಬಲೆಗೆ
