ಮಸ್ಕತ್ (ಓಮನ್): ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ Iran–Israel War ನಡುವೆಯೇ ಓಮನ್ ಕರಾವಳಿಯಲ್ಲಿ ಭೀಕರ ಘಟನೆ ನಡೆದಿದೆ. Iran ಡ್ರೋನ್ ದಾಳಿಯಲ್ಲಿ ತೈಲ ಟ್ಯಾಂಕರ್ನಲ್ಲಿದ್ದ ಭಾರತೀಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದು, ನಾಲ್ವರು ಭಾರತೀಯರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ಸೋಮವಾರ ದೃಢಪಡಿಸಿದ್ದಾರೆ.
ಓಮನ್ ಸುಲ್ತಾನೇಟ್ನ ಕಡಲ ಭದ್ರತಾ ಕೇಂದ್ರದ ಮಾಹಿತಿ ಪ್ರಕಾರ, Muscat ಸಮೀಪ ಸಾಗುತ್ತಿದ್ದ ಮಾರ್ಷಲ್ ಐಲ್ಯಾಂಡ್ಸ್ ಧ್ವಜ ಹೊಂದಿದ ‘MKD VYOM’ ತೈಲ ಟ್ಯಾಂಕರ್ ಮೇಲೆ ಸ್ಫೋಟಕ ತುಂಬಿದ ಡ್ರೋನ್ ಬೋಟ್ ಮೂಲಕ ದಾಳಿ ನಡೆದಿದೆ. ಈ ದಾಳಿಯಿಂದ ಹಡಗಿನ ಎಂಜಿನ್ ರೂಮ್ನಲ್ಲಿ ಭೀಕರ ಸ್ಫೋಟ ಸಂಭವಿಸಿದೆ.
ಸ್ಫೋಟದ ವೇಳೆ ಎಂಜಿನ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯ ಮೂಲದ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಭಾರತೀಯರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಸುಮಾರು 59,463 ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಈ ಹಡಗಿನಲ್ಲಿ ಒಟ್ಟು 15 ಭಾರತೀಯ ಸಿಬ್ಬಂದಿಯಿದ್ದರು ಎನ್ನಲಾಗಿದೆ. ದಾಳಿಯ ನಂತರ ಹಡಗಿಗೆ ಭಾಗಶಃ ಹಾನಿಯಾಗಿದ್ದು, ಸಮುದ್ರ ಭದ್ರತಾ ಪಡೆಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.
ಇತ್ತ Israel ಮತ್ತು United States ಇರಾನ್ ಮೇಲೆ ವೈಮಾನಿಕ ದಾಳಿಗಳನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಪರ್ಷಿಯನ್ ಕೊಲ್ಲಿಯಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ವಿಶೇಷವಾಗಿ Strait of Hormuz ಮೂಲಕ ಸಂಚರಿಸುವ ವಾಣಿಜ್ಯ ಹಡಗುಗಳಿಗೆ ಇರಾನ್ ಬೆದರಿಕೆ ಹಾಕುತ್ತಿರುವುದಾಗಿ ವರದಿಗಳು ತಿಳಿಸಿವೆ.
ಘಟನೆಯ ಕುರಿತು ಭಾರತೀಯ ವಿದೇಶಾಂಗ ಇಲಾಖೆ ಗಮನಹರಿಸಿದ್ದು, ಗಾಯಾಳುಗಳ ಆರೋಗ್ಯ ಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ. ಮೃತರ ಕುಟುಂಬಕ್ಕೆ ಅಗತ್ಯ ಸಹಾಯ ಒದಗಿಸುವ ಭರವಸೆ ನೀಡಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಯುದ್ಧ ಪರಿಸ್ಥಿತಿ ಜಾಗತಿಕ ತೈಲ ಸಾಗಣೆ ಮತ್ತು ವ್ಯಾಪಾರಕ್ಕೆ ಮತ್ತಷ್ಟು ಆತಂಕ ಮೂಡಿಸಿದೆ.
