ನವದೆಹಲಿ, ಮಾ.17: ಇರಾನ್ ಯುದ್ಧದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರಿದಿರುವ ಹಿನ್ನೆಲೆ, ಖಾಸಗಿ ಪೆಟ್ರೋಲಿಯಂ ಕಂಪನಿಯಾದ ಶೆಲ್ ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸಲ್ ದರಗಳನ್ನು ಸತತವಾಗಿ ಹೆಚ್ಚಿಸಿದೆ. ಕೇವಲ ಮೂರು ದಿನಗಳ ಹಿಂದೆ ದರ ಪರಿಷ್ಕರಣೆ ಮಾಡಿದ್ದ ಶೆಲ್, ಮತ್ತೊಮ್ಮೆ ಪ್ರತಿ ಲೀಟರ್ಗೆ ಸುಮಾರು ₹2ರಷ್ಟು ಹೆಚ್ಚಳ ಮಾಡಿದ್ದು, ಕಳೆದ 10 ದಿನಗಳಲ್ಲಿ ಒಟ್ಟು ₹4.50ರಷ್ಟು ದರ ಏರಿಕೆ ಮಾಡಿರುವುದು ಗಮನಾರ್ಹವಾಗಿದೆ.
ಇದರ ನಡುವೆಯೇ, ಕೇಂದ್ರ ಸರ್ಕಾರ ಭಾರತದಲ್ಲಿ ಸಾಮಾನ್ಯ ಜನತೆಗೆ ಪೆಟ್ರೋಲ್-ಡೀಸಲ್ ದರ ಏರಿಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ತಮ್ಮ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಜಾಗತಿಕ ಮಾರುಕಟ್ಟೆಯಲ್ಲೂ ಶೆಲ್ ದರ ಏರಿಕೆ
ಶೆಲ್ ಸಂಸ್ಥೆ ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲೂ ಪೆಟ್ರೋಲ್ ದರವನ್ನು ಏರಿಸಿದೆ. ವಿಶೇಷವಾಗಿ ಸಿಂಗಾಪುರದಲ್ಲಿ ಪೆಟ್ರೋಲ್ ದರ ಗರಿಷ್ಠ ಮಟ್ಟಕ್ಕೆ ತಲುಪಿದ್ದು, 2022ರ ಉಕ್ರೇನ್-ರಷ್ಯಾ ಯುದ್ಧದ ತೀವ್ರ ಅವಧಿಯಲ್ಲಿ ಕಂಡಿದ್ದ ಗರಿಷ್ಠ ಮಟ್ಟವನ್ನು ಮರುಮುಟ್ಟಿದೆ ಎಂದು ವರದಿಯಾಗಿದೆ. ಈಗಿನ ಇರಾನ್ ಯುದ್ಧದ ಪರಿಣಾಮವೇ ಇದಕ್ಕೆ ಪ್ರಮುಖ ಕಾರಣವೆಂದು ತೈಲ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಶೆಲ್ ದರ ವಿವರ
ಮಾರ್ಚ್ 14ರಂದು ದರ ಪರಿಷ್ಕರಣೆ ಬಳಿಕ ಬೆಂಗಳೂರಿನಲ್ಲಿ ಶೆಲ್ ಇಂಧನದ ದರಗಳು ಹೀಗಿವೆ:
- ಪೆಟ್ರೋಲ್: ₹108.41
- ಡೀಸಲ್: ₹93.49
- ವಿ-ಪವರ್ ಪೆಟ್ರೋಲ್: ₹118.41
- ವಿ-ಪವರ್ ಡೀಸಲ್: ₹104.64
ವಿವಿಧ ನಗರಗಳಲ್ಲಿ ಶೆಲ್ ಪೆಟ್ರೋಲ್ ದರ
ದೇಶದ ವಿವಿಧ ನಗರಗಳಲ್ಲಿ ಶೆಲ್ ಪೆಟ್ರೋಲ್ ದರ ಈ ಕೆಳಕಂಡಂತಿದೆ:
- ಬೆಂಗಳೂರು: ₹108.41
- ಮೈಸೂರು: ₹107.95
- ಬೆಳಗಾವಿ: ₹108.73
- ಮಂಗಳೂರು: ₹108.10
- ಮುಂಬೈ: ₹116.36
- ಚೆನ್ನೈ: ₹106.29
- ಅಹ್ಮದಾಬಾದ್: ₹99.98
ಗ್ರಾಹಕರಲ್ಲಿ ಆತಂಕ
ಖಾಸಗಿ ಕಂಪನಿಗಳ ದರ ಏರಿಕೆಯಿಂದ ನಗರ ಪ್ರದೇಶದ ವಾಹನ ಸವಾರರು ಮತ್ತು ವಾಣಿಜ್ಯ ಬಳಕೆದಾರರಲ್ಲಿ ಆತಂಕ ಹೆಚ್ಚಾಗಿದೆ. ವಿಶೇಷವಾಗಿ, ಶೆಲ್ನ ಪ್ರೀಮಿಯಂ ಇಂಧನ ಬಳಸುವ ಗ್ರಾಹಕರಿಗೆ ನಿರಂತರ ದರ ಏರಿಕೆ ಹೆಚ್ಚುವರಿ ಹೊರೆ ತಂದಿದೆ. ಜಾಗತಿಕ ಯುದ್ಧ ಪರಿಸ್ಥಿತಿ ಮುಂದುವರಿದರೆ, ಮುಂದಿನ ದಿನಗಳಲ್ಲಿ ಖಾಸಗಿ ವಲಯದಲ್ಲಿ ಇನ್ನಷ್ಟು ದರ ಪರಿಷ್ಕರಣೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
