ಬೆಂಗಳೂರು: ಪಶ್ಚಿಮ ಏಷ್ಯಾ ಭಾಗದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ತೈಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವು ಭಾರತದಲ್ಲಿ ಗ್ಯಾಸ್ ಬಿಕ್ಕಟ್ಟಿಗೆ ಕಾರಣವಾಗಿದೆ. ಇದರ ಪರಿಣಾಮವಾಗಿ ವಾಣಿಜ್ಯ (Commercial) ಗ್ಯಾಸ್ ಸಿಲಿಂಡರ್ಗಳ ಕೊರತೆ ತೀವ್ರಗೊಂಡಿದ್ದು, ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ ವಾಣಿಜ್ಯ ಸಿಲಿಂಡರ್ಗಳ ಕೊರತೆ ಕಾಣಿಸಿಕೊಂಡಿದ್ದು, ಕಾಳಸಂತೆಯಲ್ಲಿ ಒಂದೊಂದು ಸಿಲಿಂಡರ್ ಬೆಲೆ ₹3,000 ರಿಂದ ₹4,000 ವರೆಗೆ ಏರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೋಟೆಲ್ ಬಂದ್ ಭೀತಿ:
ಸುಮಾರು 70 ದಿನಗಳವರೆಗೆ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ ಎಂದು ತೈಲ ಕಂಪನಿಗಳು ಭರವಸೆ ನೀಡಿದ್ದವು. ಆದರೆ ಈಗ ದಿಢೀರ್ ಸರಬರಾಜು ಸ್ಥಗಿತಗೊಂಡಿರುವುದರಿಂದ ಬೆಂಗಳೂರಿನ ಸುಮಾರು ಶೇ.30ರಷ್ಟು ಹೋಟೆಲ್ಗಳು ಮುಚ್ಚುವ ಹಂತಕ್ಕೆ ತಲುಪಿವೆ ಎನ್ನಲಾಗಿದೆ.
ಬೆಂಗಳೂರು ಹೋಟೆಲ್ ಸಂಘಟನೆಯ ಮನವಿ:
“ಗ್ಯಾಸ್ ಪೂರೈಕೆ ಸ್ಥಗಿತಗೊಂಡಿರುವುದು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಇದರಿಂದ ಸಾಮಾನ್ಯ ಜನರು, ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆ ರೋಗಿಗಳಿಗೆ ಊಟದ ತೊಂದರೆ ಉಂಟಾಗಲಿದೆ. ತಕ್ಷಣ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಗ್ಯಾಸ್ ಪೂರೈಕೆಯನ್ನು ಸರಿಪಡಿಸಬೇಕು” ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಆಗ್ರಹಿಸಿದೆ.
ಬದಲಾದ ಮೆನು:
ಗ್ಯಾಸ್ ಉಳಿತಾಯಕ್ಕಾಗಿ ಅನೇಕ ಹೋಟೆಲ್ಗಳಲ್ಲಿ ಈಗಾಗಲೇ ದೋಸೆ ಸೇರಿದಂತೆ ಹೆಚ್ಚು ಗ್ಯಾಸ್ ಬಳಸುವ ತಿಂಡಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಕೇವಲ ಟೀ, ಕಾಫಿ ಮತ್ತು ಸೀಮಿತ ಊಟಕ್ಕೆ ಮಾತ್ರ ವ್ಯವಸ್ಥೆ ಮಾಡಲಾಗಿದೆ.
ಗೃಹ ಬಳಕೆಗೂ ಹೊಸ ನಿಯಮ:
ಸರ್ಕಾರವು ಗೃಹ ಬಳಕೆದಾರರಿಗೆ ಸಿಲಿಂಡರ್ ಬುಕ್ಕಿಂಗ್ ಮಾಡಲು 25 ದಿನಗಳ ಕಡ್ಡಾಯ ಅಂತರ ಇರಬೇಕೆಂಬ ಹೊಸ ನಿಯಮವನ್ನು ಜಾರಿಗೆ ತಂದಿದೆ. ತೈಲ ಬೆಲೆ ಏರಿಕೆ ಮತ್ತು ಕೊರತೆಯ ಪರಿಣಾಮವಾಗಿ ರಾಜ್ಯದಲ್ಲಿ ಆಹಾರ ಪದಾರ್ಥಗಳ ಬೆಲೆ ಶೇ.10ರಿಂದ 20ರಷ್ಟು ಏರಿಕೆಯಾಗುವ ಸಾಧ್ಯತೆಯೂ ವ್ಯಕ್ತವಾಗಿದೆ.
