ಕರ್ನಾಟಕ ಸರ್ಕಾರ ಸರ್ಕಾರಿ ನೌಕರರ ಬೇಡಿಕೆಯಂತೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸಲು ಆದೇಶಿಸಿದೆ. ಈಗ ಹಿಂದಿನ ಡಿಫೈನ್ ಪಿಂಚಿಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 247-A ರನ್ವಯ ಪಿಂಚಣಿ ಸೌಲಭ್ಯಕ್ಕಾಗಿ ಅರ್ಹತಾದಾಯಕ ಸೇವೆಯನ್ನು ಪರಿಗಣಿಸುವ ಕುರಿತು ಆದೇಶವನ್ನು ಹೊರಡಿಸಲಾಗಿದೆ.
ಪ್ರಸ್ತಾವನೆ ಏನು?;
ಮೇಲೆ ಓದಲಾದ ಸರ್ಕಾರಿ ಆದೇಶದಲ್ಲಿ ದಿನಾಂಕ 01/04/2006 ರಂದು ಹಾಗೂ ತದನಂತರ ಸರ್ಕಾರಿ ಸೇವೆಗೆ ಸೇರುವ ಎಲ್ಲಾ ಸರ್ಕಾರಿ ನೌಕರರಿಗೆ ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಯೋಜನೆಪದ್ದತಿಯನ್ನು ಕಡ್ಡಾಯಗೊಳಿಸಿ ಜಾರಿಗೆ ತರಲಾಗಿರುತ್ತದೆ. ಸರ್ಕಾರಿ ಆದೇಶದಲ್ಲಿ, ಸದರಿ ಯೋಜನೆಯನ್ನು ಕಾರ್ಯರೂಪಗೊಳಿಸಿದೆ. ದಿನಾಂಕ 31/03/2006ರ ಆದೇಶಾನುಸಾರ ನೌಕರನು ಸೇವೆಗೆ ವಾಸ್ತವವಾಗಿ ವರದಿ ಮಾಡಿಕೊಂಡ ದಿನಾಂಕದ ಆಧಾರದ ಮೇರೆಗೆ ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಯೋಜನೆಗೆ ಒಳಪಡುವುದಾಗಿದೆ.
ಸರ್ಕಾರಿ ಆದೇಶದಲ್ಲಿ, ರಾಜ್ಯ ಸಿವಿಲ್ ಹುದ್ದೆಗಳಿಗೆ ಸಂಬಂಧಿಸಿದಂತೆ ದಿನಾಂಕ 1/4/2006ರ ಪೂರ್ವದ ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆಗಳ ಸಂಬಂಧದಲ್ಲಿ ದಿನಾಂಕ 1/4/2006 ಮತ್ತು ತದನಂತರದಲ್ಲಿ ಆಯ್ಕೆ ಮತ್ತು ನೇಮಕ ಹೊಂದಿ ಸೇವೆಗೆ ಸೇರಿರುವ ಅಭ್ಯರ್ಥಿಗಳ ಪ್ರಕರಣಗಳಿದ್ದು, ಆದರೆ ಅದೇ ತಂಡದಲ್ಲಿನ ಇತರೆ ಅಭ್ಯರ್ಥಿಗಳು ದಿನಾಂಕ 1/4/2006ರ ಪೂರ್ವದಲ್ಲಿಯೇ ಆಯ್ಕೆ ಮತ್ತು ನೇಮಕಾತಿಗಳು ಪೂರ್ಣಗೊಂಡು ಸೇವೆಗೆ ನೇಮಕ ಹೊಂದಿ ವರದಿ ಮಾಡಿಕೊಂಡಿರುವ ಮತ್ತು ಇದರಿಂದಾಗಿ ಡಿಫೈನ್ಡ್ ಪಿಂಚಣಿ ಯೋಜನೆಗೆ ಒಳಪಟ್ಟಿರುವ ಸಂದರ್ಭಗಳಿರುವ ನಿರ್ದಿಷ್ಟ ವಿಶಿಷ್ಟ ಪ್ರಕರಣಗಳನ್ನು ಮಾತ್ರ ಸರ್ಕಾರದ ಆದೇಶ ದಿನಾಂಕ 31/3/2006ರ ಆದೇಶದನ್ವಯ ದಿನಾಂಕ 1/4/2006ರಿಂದ ಜಾರಿಗೊಳಿಸಲಾದ ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಯೋಜನಾ ವ್ಯಾಪ್ತಿಯಿಂದ ಸಡಿಲಿಕೆಯನ್ನು ನೀಡಿ, ಕೆಲವೊಂದು ಷರತ್ತುಗಳಿಗೊಳಪಡಿಸಿ, ಹಿಂದಿನ ಡಿಫೈನ್ಡ್ ಪಿಂಚಣಿ ವ್ಯಾಪ್ತಿಗೆ ಒಳಪಡಿಸಲು ಸರ್ಕಾರವು ಆದೇಶಿಸಿದೆ.
ಸರ್ಕಾರಿ ಆದೇಶದಲ್ಲಿ ದಿನಾಂಕ 1/4/2006ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗಾಗಿ ಹೊರಡಿಸಿದ ನೇಮಕಾತಿ ಅಧಿಸೂಚನೆಗಳ ಮೇರೆಗೆ ಆಯ್ಕೆ ಹೊಂದಿ ದಿನಾಂಕ 1/4/2006 ರಂದು ಅಥವಾ ಆ ದಿನಾಂಕದ ನಂತರ ಸೇವೆಗೆ ಸೇರಿರುವ ಕಾರಣದಿಂದ ನೂತನ ಅಂಶದಾಯಿ ಕೊಡುಗೆ ಯೋಜನೆಯ (ರಾಷ್ಟ್ರೀಯ ಪಿಂಚಣಿ ಯೋಜನೆ) ವ್ಯಾಪ್ತಿಗೊಳಪಟ್ಟಿರುವ ಸರ್ಕಾರಿ ನೌಕರರನ್ನು ಸರ್ಕಾರವು ಅವರ ಅಭಿಮತದ ಮೇರೆಗೆ ಕೆಳಕಂಡ ಷರತ್ತುಗಳಿಗೊಳಪಟ್ಟು ಒಂದು ಬಾರಿಯ ಕ್ರಮವಾಗಿ ಹಿಂದಿನ ಡಿಫೈನ್ಡ್ ಪಿಂಚಣಿ ಯೋಜನೆ ವ್ಯಾಪ್ತಿಗೊಳಪಡಿಸಲು ಒಪ್ಪಿಗೆ ನೀಡಿದೆ.
ಪ್ರಸ್ತುತ ಸರ್ಕಾರ ಮೇಲೆ ನಮೂದಿಸಿದ ದಿನಾಂಕ 17/2/2021 ಹಾಗೂ ದಿನಾಂಕ 24/1/2024ರ ಸರ್ಕಾರಿ ಆದೇಶಗಳ ಮೂಲಕ OPS ಯೋಜನೆಯ ವ್ಯಾಪ್ತಿಗೊಳಪಟ್ಟ ನೌಕರರಿಗೆ OPS ಯೋಜನೆಯ ಎಲ್ಲ ಸೌಲಭ್ಯಗಳನ್ನು ವಿಸ್ತರಿಸಲು ತೀರ್ಮಾನಿಸಿ ಆದೇಶಿಸಿದೆ.
ಸರ್ಕಾರದ ಆದೇಶ:
ಪ್ರಸ್ತಾವನೆಯಲ್ಲಿ ವಿವರಿಸಲಾಗಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ಆದೇಶ ದಿನಾಂಕ 17/2/2021 ಹಾಗೂ ಸರ್ಕಾರಿ ಆದೇಶ ದಿನಾಂಕ 24/1/2024ರ ಉಪಬಂಧಗಳನ್ವಯ ಹಿಂದಿನ ಡಿಫೈನ್ಡ್ ಪಿಂಚಿಣಿ ಯೋಜನೆಗೆ ಯೋಜನೆಯನ್ನು ವಿಸ್ತರಿಸಲ್ಪಟ್ಟ ಸರ್ಕಾರಿ ನೌಕರರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 2-C ಅನ್ವಯವಾಗತಕ್ಕದ್ದಲ್ಲವೆಂದು ಮತ್ತು ಈ ನೌಕರರಿಗೆ ಅದೇ ನಿಯಮಾವಳಿಯ ನಾಲ್ಕನೇ ಭಾಗದಲ್ಲಿನ ಎಲ್ಲ ಉಪಬಂಧಗಳು ಅನ್ವಯವಾಗತಕ್ಕದ್ದೆಂದು ಆದೇಶಿಸಿದೆ. ಈ ಕುರಿತು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗೆ ಅಗತ್ಯ ತಿದ್ದುಪಡಿಯನ್ನು ಮಾಡಲಾಗುವುದು ಎಂದು ಹೇಳಿದೆ.
