ರಾಮನಾಥಪುರ, ಮಾ.6 (RNP):ಶ್ರೀಮದ್ ಕಾಶಿ ಪೀಠದ ನೂತನ ಜಗದ್ಗುರುಗಳವರ ವೈಭವೋಪೇತ ಪುರಪ್ರವೇಶೋತ್ಸವ ಹಾಗೂ ಸಂಗೀತಯುಕ್ತ ಇಷ್ಠಲಿಂಗ ಮಹಾಪೂಜೆ ಕಾರ್ಯಕ್ರಮವು ರಾಮನಾಥಪುರ ಹೋಬಳಿ ಬಸವಪಟ್ಟಣದ ಸಮೃದ್ಧಿ ನಿವಾಸದ ಸಭಾಂಗಣದಲ್ಲಿ ಮಾರ್ಚ್ 8 ಮತ್ತು 9ರಂದು ಎರಡು ದಿನಗಳ ಕಾಲ ಭಕ್ತಿ ಭಾವದಿಂದ ನಡೆಯಲಿದೆ ಎಂದು ಶರಣ ಬಿ.ಎಂ. ಮಲ್ಲಪ್ಪ (ಸ್ವಾಮಿ) ತಿಳಿಸಿದ್ದಾರೆ.
ಮಾರ್ಚ್ 8ರಂದು ಭಾನುವಾರ ಸಂಜೆ 4 ಗಂಟೆಗೆ ಬಸವಪಟ್ಟಣದ ಶಾಲಾ ಮೈದಾನದ ಪಕ್ಕದಲ್ಲಿರುವ ಹಳೆಯ ಕಾಶೀಸ್ವಾಮಿ ಮಠದ ಆವರಣದಿಂದ ನೂತನ ಜಗದ್ಗುರುಗಳವರ ಪುರಪ್ರವೇಶ ನಡೆಯಲಿದೆ. ಪೂರ್ಣಕುಂಭ, ವೀರಗಾಸೆ ನೃತ್ಯ ಹಾಗೂ ಮಂಗಳವಾದ್ಯಗಳೊಂದಿಗೆ ಗ್ರಾಮದ ಮುಖ್ಯ ರಸ್ತೆ ಮೂಲಕ ಮೆರವಣಿಗೆ ನಡೆಸಿ ಜಗದ್ಗುರುಗಳನ್ನು ಗೌರವಪೂರ್ವಕವಾಗಿ ಪುರಪ್ರವೇಶ ಮಾಡಲಾಗುವುದು.
ಮಾರ್ಚ್ 9ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ಸಮೃದ್ಧಿ ನಿವಾಸದ ಆವರಣದಲ್ಲಿ ಶ್ರೀಮದ್ ಕಾಶಿ ಪೀಠದ ನೂತನ ಜಗದ್ಗುರುಗಳವರ ವೈಭವೋಪೇತ ಸಂಗೀತಯುಕ್ತ ಇಷ್ಠಲಿಂಗ ಮಹಾಪೂಜೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ.
ಈ ಕಾರ್ಯಕ್ರಮವು ಉತ್ತರ ಪ್ರದೇಶದ ವಾರಾಣಸಿಯ ಶ್ರೀ ಜಗದ್ಗುರು ಕಾಶೀಜ್ಞಾನ ಸಿಂಹಾಸನ ಮಹಾ ಸಂಸ್ಥಾನ ಪೀಠ ಜಂಗಮವಾಡಿ ಮಠದ ಶ್ರೀಮದ್ ಕಾಶೀಜ್ಞಾನ ಸಿಂಹಾಸನಾಧೀಶ್ವರ, ಶ್ರೀ 1008 ನೂತನ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ.

ನುಗ್ಗೆಹಳ್ಳಿ ಪುರವರ್ಗ ಹಿರೇಮಠದ ಶ್ರೀ ಡಾ. ಮಹೇಶ್ವರ ಶಿವಚಾರ್ಯ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ ಮೈಸೂರು ಶ್ರೀ ಕೆಂಪಮ್ಮ ಹಾಗೂ ಕೊಲ್ಲಾಪುರದಮ್ಮ ಆಂಜನೇಯಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿ ಶ್ರೀ ಅಭಿನಂದನ್, ಮೈಸೂರು ಆಗಮಿಕರು ಹಾಗೂ ಧಾರ್ಮಿಕ ಚಿಂತಕ ಕೆ.ಎಸ್. ದಿನೇಶ್ ಶಾಸ್ತ್ರಿಗಳು, ಶರಣೆ ಬಿ.ಎಸ್. ಲೋಕಮಾತಮಲ್ಲಪ್ಪ, ಜಿ.ಎ. ಅಪೂರ್ವಶ್ರೀಮೂರ್ತಿ ಸೇರಿದಂತೆ ಅನೇಕ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ.
ಈ ಸಹಸ್ರ ಚಂದ್ರದರ್ಶನ ಶಾಂತಿ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಮಾಜಸೇವಕ ಶ್ರೀ ಸೋಮಣ್ಣ ಮನವಿ ಮಾಡಿದ್ದಾರೆ.
ವರದಿ- ಕುಮಾರಸ್ವಾಮಿ
