ಬೆಂಗಳೂರು: ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ಸಂಭವಿಸಿರುವ ಹೃದಯಾಘಾತದ ಸರಣಿ ಪ್ರಕರಣಗಳು ರಾಜ್ಯದ ಆರೋಗ್ಯ ತಜ್ಞರು ಹಾಗೂ ಜನಪ್ರತಿನಿಧಿಗಳ ಮಧ್ಯೆ ಗಂಭೀರ ಚರ್ಚೆಗೆ ಕಾರಣವಾಗಿವೆ. ಹಾಸನ ಜಿಲ್ಲೆಯೊಂದರಲ್ಲೇ ಕಳೆದ 39 ದಿನಗಳಲ್ಲಿ 18 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಸಂಸದ ಹಾಗೂ ಖ್ಯಾತ ಹೃದಯ ತಜ್ಞ ಡಾ. ಸಿ. ಮಂಜುನಾಥ್ ಅವರು ತೀವ್ರವಾಗಿ ಚಿಂತೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತರಲು ತೀರ್ಮಾನಿಸಿದ್ದಾರೆ.
ಡಾ. ಮಂಜುನಾಥ್ ಅವರು ಈಗಾಗಲೇ ಪ್ರಧಾನಿ ಕಾರ್ಯಾಲಯಕ್ಕೆ ಭೇಟಿಗೆ ಅರ್ಜಿ ಸಲ್ಲಿಸಿದ್ದು, ಸದ್ಯದಲ್ಲೇ ಅವರಿಗೆ ಭೇಟಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಈ ಸಂದರ್ಭ ಹಾಸನ ಜಿಲ್ಲೆಯಲ್ಲಿನ ಆತಂಕಕಾರಿ ಸ್ಥಿತಿಗತಿಗಳು ಹಾಗೂ ತುರ್ತು ಚಿಕಿತ್ಸೆ ವ್ಯವಸ್ಥೆ–ಸ್ಟೆಮಿ ಯೋಜನೆ ಕುರಿತು ಮುಖ್ಯ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಸ್ಟೆಮಿ ಯೋಜನೆ ಎಂದರೇನು?
ಸ್ಟೆಮಿ (STEMI) ಯೋಜನೆ ಎಂದರೆ ಹಬ್ ಆ್ಯಂಡ್ spoke ಮಾದರಿಯ ತುರ್ತು ಹೃದಯ ಚಿಕಿತ್ಸೆ ವ್ಯವಸ್ಥೆ. ಇದು ತ್ವರಿತ ವೈದ್ಯಕೀಯ ನೆರವು ನೀಡುವ ಮೂಲಕ ಜೀವ ಉಳಿಸುವುದಕ್ಕೆ ಮಾರ್ಗವಾಗಿದೆ.
ಈ ಯೋಜನೆಯ ವೈಶಿಷ್ಟ್ಯತೆಗಳು:
-
ಇಸಿಜಿ ತಕ್ಷಣ ಲಭ್ಯ: ಎದೆನೋವು ಕಂಡುಬಂದ ತಕ್ಷಣಲೇ ಇಸಿಜಿ ಮಾಡಲಾಗುತ್ತದೆ.
-
ಆನ್ಲೈನ್ ನಿಖರ ಮೌಲ್ಯಮಾಪನೆ: ಈ ರಿಪೋರ್ಟ್ ನೇರವಾಗಿ ಜಯದೇವ ಹೃದ್ರೋಗ ತಜ್ಞರಿಗೆ ಆನ್ಲೈನ್ ಮೂಲಕ ಕಳುಹಿಸಲಾಗುತ್ತದೆ.
-
ತಜ್ಞರ ಮಾರ್ಗದರ್ಶನ: ತಜ್ಞರು ತಕ್ಷಣ ಪ್ರತಿಕ್ರಿಯೆ ನೀಡುತ್ತಾರೆ ಮತ್ತು ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತದೆ.
-
ಮರು ರವಾನೆ ವ್ಯವಸ್ಥೆ: ತುರ್ತು ಪರಿಸ್ಥಿತಿಗಳಲ್ಲಿ ರೋಗಿಯನ್ನು ಜಯದೇವ ಆಸ್ಪತ್ರೆಗೆ ರವಾನಿಸಲಾಗುತ್ತದೆ.
ಸದ್ಯ ರಾಜ್ಯದ 86 ತಾಲೂಕು ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ. ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋಲಜಿಯ ಸಹಯೋಗದಲ್ಲಿ ಯೋಜನೆಯು ಯಶಸ್ವಿಯಾಗಿ ನಿರ್ವಹಣೆಯಲ್ಲಿದೆ.
ಇದನ್ನು ಓದಿ: SHOCKING : ಮಕ್ಕಳಲ್ಲಿ ‘ಹೃದಯಾಘಾತ’ ಹೆಚ್ಚಳಕ್ಕೆ ‘ಮೊಬೈಲ್’ ಬಳಕೆ ಕಾರಣ : ಆಘಾತಕಾರಿ ಅಂಶ ಬೆಳಕಿಗೆ!
ಮಹತ್ವದ ನಿರೀಕ್ಷೆ: ರಾಜ್ಯಮಟ್ಟದ ವಿಸ್ತರಣೆ
ಡಾ. ಮಂಜುನಾಥ್ ಅವರ ಪ್ರಸ್ತಾವನೆಯು ಪ್ರಧಾನಿಯವರ ಒಪ್ಪಿಗೆ ಪಡೆಯುವುದಾದರೆ, ಹಾಸನದ ಎಲ್ಲಾ ತಾಲೂಕುಗಳು ಸೇರಿದಂತೆ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಸ್ಟೆಮಿ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ. ಇದರಿಂದ ಹೃದಯಾಘಾತದ ಮರಣದರ ಕಡಿಮೆಯಾಗುವುದು ಮಾತ್ರವಲ್ಲ, ಆರೋಗ್ಯ ವ್ಯವಸ್ಥೆಯ ಕಾರ್ಯಕ್ಷಮತೆ ಹೆಚ್ಚುವುದು ಖಚಿತ.
