ಬೆಂಗಳೂರು: ಭಾರತ – ಪಾಕ್ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಸುರಕ್ಷತೆ ಕೈಗೊಂಡಿದ್ದೇವೆ. ಪ್ರತಿಯೊಂದು ನಗರ, ಪಟ್ಟಣದಲ್ಲಿ ಜಾಗೃತಿ ವಹಿಸಿದ್ದೇವೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಗಿಂತ ಹೆಚ್ಚಾಗಿ, ಯುದ್ಧ ಭೀತಿ ಇದೆ. ಗಡಿ ಪ್ರದೇಶದಲ್ಲಿ ಆಗುತ್ತಿರುವ ಚಟುವಟಿಕೆಗಳು, ಉಗ್ರರ ವಿರುದ್ಧ ಸೇನಾ ಪಡೆ ಕ್ರಮ ತೆಗೆದುಕೊಂಡಿದೆ. ಈ ಪರಿಸ್ಥಿತಿ ಹೆಚ್ಚಾದರೆ ಯುದ್ದದ ಪರಿಸ್ಥಿತಿ ಬರಬಹುದು ಎಂಬುದನ್ನು ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗೆ ಕೆಲವು ಸೂಚನೆಗಳನ್ನು ನೀಡಿದೆ. ಅದರ ಹಿನ್ನೆಲೆಯಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.
ಈ ಸಂಬಂಧ ಮುಖ್ಯಮಂತ್ರಿಗಳು ಇಂದು ಸಂಜೆ 4 ಗಂಟೆಗೆ ಸಭೆ ಕರೆದಿದ್ದಾರೆ. ಗೃಹ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುತ್ತಾರೆ. ನಿನ್ನೆಯಿಂದ ಈಚೆಗೆ ಕೇಂದ್ರ ಸರ್ಕಾರದಿಂದ ಯಾವುದಾದರೂ ಸೂಚನೆಗಳು ಬಂದಿದ್ದರೆ, ಅದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಸನ್ನಿವೇಶ ಎದುರಾಗುವ ಮುನ್ನ ಅಗತ್ಯ ತಯಾರಿ ಮಾಡಿಕೊಂಡಿದ್ದೇವೆ. ಆಹಾರ ಧಾನ್ಯ, ನೀರು, ಆಸ್ಪತ್ರೆಗಳನ್ನು ಸಜ್ಜು ಮಾಡಿಕೊಂಡಿದ್ದೇವೆ. ಅಂತಹ ಘಟನೆಗಳು ನಡೆದರೆ ಎದುರಿಸಲು ನಾವು ಸಿದ್ಧವಾಗಿರಬೇಕು ಎಂಬುದನ್ನು ಹೊರತುಪಡಿಸಿದರೆ, ಅಂತಹ ಸನ್ನಿವೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪೊಲೀಸರಿಗೆ ರಜೆ ಇಲ್ಲ: ಪೊಲೀಸರಿಗೆ ರಜೆ ಕೊಡುವುದಿಲ್ಲ. ಸೂಕ್ಷ್ಮ ಸನ್ನಿವೇಶ ಇರುವುದರಿಂದ ಪೊಲೀಸರಿಗೆ ರಜೆ ಮಂಜೂರು ಮಾಡುವುದಕ್ಕೆ ಹೋಗುವುದಿಲ್ಲ. ಸದ್ಯಕ್ಕೆ ಯಾವುದೇ ರಜೆ ಇಲ್ಲ. ಪರಿಸ್ಥಿತಿ ಸಾಮಾನ್ಯಕ್ಕೆ ಬಂದಿರುವುದನ್ನು ಕೇಂದ್ರ ಸರ್ಕಾರ ನಮಗೆ ತಿಳಿಸುತ್ತದೆ. ಅಲ್ಲಿಯವರೆಗೂ ನಾವು ಸೂಕ್ಷ್ಮವಾಗಿರಬೇಕು ಎಂದರು.
ಕರಾವಳಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗುತ್ತದೆ. ಕರಾವಳಿಯಲ್ಲಿ ಬಿಗಿ ಭದ್ರತೆ ವಹಿಸಿದ್ದೇವೆ. ಮಂಗಳೂರು, ಉತ್ತರ ಕನ್ನಡದಲ್ಲಿ ನಿಗಾ ವಹಿಸಲಾಗಿದೆ. ಪೊಲೀಸ್ ಇಲಾಖೆ ಎಲ್ಲಾ ಕ್ರಮ ವಹಿಸಿದೆ. ನೇವಿ ಅವರು ಕೂಡ ಭದ್ರತೆ ವಹಿಸಿದ್ದಾರೆ. ನಮ್ಮ ಬಾರ್ಡರ್ ಒಳಗೆ ಸೆಕ್ಯೂರಿಟಿ ಇದೆ. ಆ ಮಾಹಿತಿ ನಮಗೆ ಬಂದಿಲ್ಲ. ಕೇಂದ್ರದವರು ಏನಾದರೂ ಇದ್ದರೆ ಹೇಳುತ್ತಾರೆ ಎಂದರು.
ಫೇಕ್ನ್ಯೂಸ್ ತಡೆಗಟ್ಟಲು ಕ್ರಮ: ರಾಜ್ಯದಲ್ಲಿ ಫೇಕ್ ನ್ಯೂಸ್ ಹೆಚ್ಚಾಗಿ ಹರಡುತ್ತಿರುವ ಕುರಿತಂತೆ ಐಎಸ್ಡಿಯೊಂದಿಗೆ ಮಧ್ಯಾಹ್ನ ಸಭೆ ಕರೆದಿದ್ದೇನೆ. ಐಟಿ ಇಲಾಖೆಯ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಭಾಗವಹಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಫೇಕ್ ನ್ಯೂಸ್ ಹೆಚ್ಚಾಗಿ ಹರಿದಾಡುತ್ತಿವೆ. ಹಳೇ ವಿಡಿಯೋಗಳನ್ನು ತೆಗೆದು ಪೋಸ್ಟ್ ಮಾಡಲಾಗುತ್ತಿದೆ. ಪ್ರಚೋದನಾಕಾರಿ ವಿಷಯಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಸುಳ್ಳು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ತಾಂತ್ರಿಕವಾಗಿ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಚರ್ಚಿಸಲಾಗುವುದು ಎಂದು ತಿಳಿಸಿದರು.
