ಚಾಮರಾಜನಗರ:- ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನ ಅರ್ಥಮಾಡಿಕೊಳ್ಳುವುದರಲ್ಲಿ ನಾವು ಸಂಪೂರ್ಣ ವಿಫಲರಾಗಿದ್ದು, ಕೇವಲ ಸಂಘಕ್ಕೆ, ಹೋರಾಟಕ್ಕೆ, ಜಯಂತಿಗೆ ಸೀಮಿತವಾಗದೆ ಅವರು ತೋರಿಸಿದ ರಾಜಕೀಯ ಚಳುವಳಿ ಮತ್ತು ದಮ್ಮ ಮಾರ್ಗದಿಂದ ಮಾತ್ರ ವಿಮೋಚನೆ ಸಾಧ್ಯ ಎಂದು ತಿಳಿಸಿದರು.
ನಗರದ ಹೌಸಿಂಗ್ ಬೋರ್ಡ್ ನ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನವನದಲ್ಲಿ ಡಾ.ಭೀಮರಾವ್ ಅಂಬೇಡ್ಕರ್ ಕ್ಷೇಮಾಭಿವೃದ್ದಿ ಸಂಘ ಶನಿವಾರ ಆಯೋಜಿಸಿದ್ದ ಅಂಬೇಡ್ಕರ್ ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ವಿಶ್ವದ ರಾಷ್ಟ್ರಗಳು ಅಂಬೇಡ್ಕರ್ ರವರ ಮಾರ್ಗವನ್ನ ಅನುಸರಿಸುವ ಮೂಲಕ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಪರಿಹಾರವನ್ನ ಕಂಡುಕೊಂಡಿದ್ದಾರೆ. ಆದರೆ ದೇಶದ ಶೋಷಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿ, ಬದುಕಿನುದ್ದಕ್ಕೂ ಪಂಚಶೀಲವನ್ನ ಮೈಗೂಡಿಸಿಕೊಂಡು ನಿಸ್ವಾರ್ಥ ಸೇವೆಗೈದ ಬಾಬಾ ಸಾಹೇಬರನ್ನ ಅನುಸರಿಸಲು ವಿಫಲವಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಂಶುಪಾಲರು ಹಾಗೂ ಚಿಂತಕರು ಡಾ.ಚೌಡಯ್ಯ ಕಟ್ನವಾಡಿ ಮಾತನಾಡಿ, ಡಾ.ಬಾಬಾ ಸಾಹೇಬರು ಜ್ಞಾನದ ಸಂಕೇತ, ಅವರ ಭಾಷಣ ಕೇಳಲು ಬ್ರಿಟೀಷರು ತದೇಕಚಿತ್ತರಾಗಿ ಕಾಯುತ್ತಿದ್ದರು ಅವರಿಗೆ ಮೆರವಣಿಗೆಯ ಮೂಲಕ ಅಲ್ಲ ಬರವಣಿಗೆಯ ಮೂಲಕ ಗೌರವ ಸಲ್ಲಿಸಬೇಕು, ಯಾಕೆಂದರೆ ಅವರು ಭಾರತದ ಭಾಗ್ಯವಿಧಾತ ಎಂದು ತಿಳಿಸಿದರು.
ಇದೇ ವೇಳೆ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಮೂಲಕ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಕುಮುದಾಕೇಶವಮೂರ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಡಾ.ರೇಣುಕಾದೇವಿ, ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಸ್.ಮಹದೇವಯ್ಯ, ಭೀಮ್ ರಾವ್ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಮಹದೇವಯ್ಯ, ಗೌರವಾಧ್ಯಕ್ಷ ಕೃಷ್ಣರಾಜು, ಉಪಾಧ್ಯಕ್ಷರಾದ ಯಶೋಧರ.ಪಿ, ಶಿವಕುಮಾರ್ ಸೇರಿದಂತೆ ಇತರರಿದ್ದರು..
(((( ನನ್ನ ಸೋಲು ಒಂದು ಓಟಿನ ಮಹತ್ವವನ್ನ ತಿಳಿಸಿದೆ ))))
ಅಂಬೇಡ್ಕರ್ ಕೊಟ್ಟಂತಹ ಒಂದು ಓಟಿನ ಮಹತ್ವ ನನ್ನ ಸೋಲಿನಿಂದ ಇಡೀ ಪ್ರಪಂಚಕ್ಕೆ ಗೊತ್ತಾಯಿತು. ಗೆದ್ದವರು ಪ್ರಚಲಿತಕ್ಕೆ ಬಂದರೋ ಇಲ್ವೋ ಗೊತ್ತಿಲ್ಲ ಆದರೆ ಸೋತ ನಾನು ಮಾತ್ರ ಎಲ್ಲರಿಗೂ ಚಿರಪರಿಚಿತನಾದೆ. ಆಗ ಸೋತಿದ್ದು ೧೯ ವರ್ಷಗಳ ನಂತರ ಗೆಲುವು ಕಾಣುವಂತಾಯಿತು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅವರವರ ಸಮುದಾಯದ ಏಳಿಗೆಗಾಗಿ ಹಲವಾರು ಜನ ಹೋರಾಟ ಮಾಡುತಿದ್ದಾರೆ, ಆದ್ರೆ ಅಂಬೇಡ್ಕರ್ ಮಕ್ಕಳಾದ ನಾವು ಸಮುದಾಯದ ಏಳಿಗೆಗಾಗಿ ಹೋರಾಟ ಮಾಡುವುದರಲ್ಲಿ ತಪ್ಪೇನಿದೆ. ಮನೆ ಮನೆ ಜಾತಿ ಸಮೀಕ್ಷೆ ನಡೆಯುತಿದ್ದು ನಮ್ಮ ತನಕ್ಕಾಗಿ ಸಮುದಾಯದ ಎಲ್ಲರು ನಿಲುವನ್ನ ತಾಳಬೇಕು ಎಂದು ಎಚ್ಚರಿಸಿದ್ರು.
-ಶ್ರೀ ಸಾಯಿ ಎಸ್ ಮಂಜು
