ನವದೆಹಲಿ, ಸೆಪ್ಟೆಂಬರ್ 2: ಭಾರತವು ವಿಶ್ವದ ಮುಂದಿನ ದೊಡ್ಡ ಮ್ಯಾನುಫ್ಯಾಕ್ಚರಿಂಗ್ ಕೇಂದ್ರವಾಗಿ ಹೊರಹೊಮ್ಮಲು ಅಪರೂಪದ ಅವಕಾಶ ಸಿಕ್ಕಿದೆ ಎಂದು ಜಾಗತಿಕ ಸರಬರಾಜು ಸರಪಳಿ ಪರಿಣತಿ ಕ್ಯಾಮರಾನ್ ಜಾನ್ಸನ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಚೀನಾ ಜೊತೆ ಬೆಲೆ ಸಮರ ನಡೆಸುವ ಬದಲು, ಭಾರತವು ಪ್ರಬಲವಾದ ಇಡೀ ಇಕೋಸಿಸ್ಟಂ ನಿರ್ಮಾಣದತ್ತ ಗಮನ ಹರಿಸಬೇಕು ಎಂದು ಅವರು ಎಚ್ಚರಿಸಿದ್ದಾರೆ.
ಎಲಾರಾ ಇಂಡಿಯಾ ಸಂವಾದ – ಅಶ್ವಮೇಧ 2025 ಕಾರ್ಯಕ್ರಮದಲ್ಲಿ ಮಾತನಾಡಿದ ಜಾನ್ಸನ್, ಭಾರತದ ಮ್ಯಾನುಫ್ಯಾಕ್ಚರಿಂಗ್ ಭವಿಷ್ಯಕ್ಕಾಗಿ ಐದು ಪ್ರಮುಖ ಅಂಶಗಳ ಫ್ರೇಮ್ವರ್ಕ್ನ್ನು ಸೂಚಿಸಿದರು:
- ಸುಧಾರಿತ ಮೂಲಸೌಕರ್ಯ
- ಕೌಶಲ್ಯವಂತ ಪ್ರತಿಭೆ ಮತ್ತು ಶಿಕ್ಷಣ
- ಸರ್ಕಾರಿ ಬೆಂಬಲ
- ಕಚ್ಚಾ ಸಾಮಗ್ರಿಗಳ ಸಂಸ್ಕರಣೆ
- ತಂತ್ರಜ್ಞಾನ ಅಳವಡಿಕೆ
ಜಾಗತಿಕ ಸಪ್ಲೈ ಚೈನ್ ವ್ಯವಸ್ಥೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಬೃಹತ್ ಬದಲಾವಣೆಗಳು ಸಂಭವಿಸಿವೆ. ಚೀನಾದ ಮೇಲೆ ಅವಲಂಬನೆ ಕಡಿಮೆ ಮಾಡುವುದು, ರಾಷ್ಟ್ರೀಯ ಭದ್ರತೆ ಸಂಬಂಧಿತ ಆತಂಕಗಳು ಮತ್ತು ವ್ಯಾಪಾರ ವ್ಯವಸ್ಥೆಯ ಕುಸಿತ – ಇವು ಭಾರತಕ್ಕೆ ಹೊಸ ಅವಕಾಶಗಳನ್ನು ಒದಗಿಸುತ್ತಿವೆ. ಆದರೆ ಇದೇ ವೇಳೆ ಅಮೆರಿಕ ವಿಧಿಸಿರುವ ಟ್ಯಾರಿಫ್ಗಳು ಭಾರತದ ರಫ್ತು ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದು ಜಾನ್ಸನ್ ಎಚ್ಚರಿಸಿದರು. 2030ರೊಳಗೆ ಭಾರತದಿಂದ ಅಮೆರಿಕಕ್ಕೆ ರಫ್ತಿನಲ್ಲಿ 30–40 ಬಿಲಿಯನ್ ಡಾಲರ್ ಕುಸಿತವಾಗುವ ಸಾಧ್ಯತೆ ಇದೆ.
ಆದರೆ, ಎಂಜಿನಿಯರುಗಳ ಅಧಿಕ ಸಂಖ್ಯೆ, ಇಂಗ್ಲೀಷ್ ಜ್ಞಾನವುಳ್ಳ ಮಾನವ ಸಂಪನ್ಮೂಲ, ಪಾಶ್ಚಾತ್ಯ ಮಾದರಿಯ ಕಾನೂನು ವ್ಯವಸ್ಥೆ, ಸ್ಪರ್ಧಾತ್ಮಕ ವೆಚ್ಚ, ಹಾಗೂ ಸರ್ಕಾರದಿಂದ ಸಿಗುತ್ತಿರುವ ಉತ್ತೇಜನ – ಇವು ಭಾರತಕ್ಕೆ ರಚನಾತ್ಮಕವಾದ ಅನುಕೂಲಗಳಾಗಿವೆ ಎಂದು ಅವರು ಹೇಳಿದರು.
“ಹಳೆಯ ನಾಯಕರಾದ ಜಪಾನ್, ಕೊರಿಯಾ, ಅಮೆರಿಕಾ ಮತ್ತು ಯೂರೋಪ್ ತಮ್ಮ ವೈಭವ ಕಳೆದುಕೊಂಡಿವೆ. ಚೀನಾ ಹೊರತುಪಡಿಸಿ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಮಾಡುವ ಸಾಮರ್ಥ್ಯ ಈಗ ಭಾರತಕ್ಕಿದೆ. ಆದರೆ ಈ ಅವಕಾಶ ಶಾಶ್ವತವಾಗಿರುವುದಿಲ್ಲ” ಎಂದು ಟೈಡಲ್ವೇವ್ ಸಲ್ಯೂಶನ್ಸ್ನ ಪಾಲುದಾರರಾದ ಜಾನ್ಸನ್ ಸ್ಪಷ್ಟಪಡಿಸಿದರು.
