ನವದೆಹಲಿ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಇದು ದೇಶದ ಮಹತ್ವಾಕಾಂಕ್ಷೆ ಹಾಗೂ ಹೊಣೆಗಾರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಧಾನಿ ನವದೆಹಲಿಯಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್ಪೋವನ್ನು ಸೋಮವಾರ ಸಂಜೆ ಉದ್ಘಾಟಿಸಿದ ಪ್ರಧಾನಿ, ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವೀನ್ಯಕಾರರು, ಸಂಶೋಧಕರು ಮತ್ತು ತಂತ್ರಜ್ಞಾನ ಉತ್ಸಾಹಿಗಳ ಜೊತೆಗಿನ ಸಂವಾದವು ಭಾರತೀಯ ಪ್ರತಿಭೆ ಮತ್ತು ನಾವೀನ್ಯತೆಯ ಅಪಾರ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಹೇಳಿದರು.

ಭಾರತವು ಕೇವಲ ತನ್ನ ಅಗತ್ಯಗಳಿಗೆ ಮಾತ್ರವಲ್ಲದೆ ಜಗತ್ತಿಗೆ ಪರಿಹಾರಗಳನ್ನು ರೂಪಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಎಐ ಕುರಿತ ಚರ್ಚೆಗಾಗಿ ಜಗತ್ತಿನ ನಾಯಕರು, ಕೈಗಾರಿಕೋದ್ಯಮಿಗಳು, ನೀತಿ ನಿರೂಪಕರು ಮತ್ತು ಸಂಶೋಧಕರನ್ನು ಒಂದೇ ವೇದಿಕೆಗೆ ತರಲಾಗಿದೆ ಎಂದು ಹೇಳಿದರು.
“ಸರ್ವಜನ ಹಿತಾಯ: ಸರ್ವಜನ ಸುಖಾಯ:” ಎಂಬ ಧ್ಯೇಯವಾಕ್ಯದಡಿ ಆಯೋಜಿಸಿರುವ ಈ ಶೃಂಗಸಭೆ ಮಾನವಕೇಂದ್ರೀತ ಪ್ರಗತಿಗಾಗಿ ಎಐ ಬಳಕೆ ಮಾಡುವ ಬದ್ಧತೆಯ ಸಂಕೇತವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
