ನವದೆಹಲಿ: ಭದ್ರತಾ ಕ್ಷೇತ್ರದಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಜಪಾನ್ನ ರಕ್ಷಣಾ ಸಚಿವ ಜೆನ್ ನಕಟಾನಿ ಅವರು ಮಂಗಳವಾರ ನವದೆಹಲಿಯಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಭಯೋತ್ಪಾದನೆಯ ವಿರುದ್ಧ ಉಭಯ ರಾಷ್ಟ್ರಗಳು ಗಟ್ಟಿಯಾದ ನಿಲುವು ತಾಳಿದ್ದು, ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ಎದುರಿಸಲು ಸಹಕಾರ ಅಗತ್ಯವಿದೆ ಎಂಬುದರಲ್ಲಿ ಒಪ್ಪಿಗೆ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ಮಾತಾನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಪಾಕಿಸ್ತಾನದಿಂದ ನಡೆಯುತ್ತಿರುವ ಗಡಿಪಾರ ಭಯೋತ್ಪಾದನೆ ಹಾಗೂ ಪಾಕಿಸ್ತಾನ ರಾಜ್ಯ ಮತ್ತು ಅರಾಜಕೀಯ ಅಂಶಗಳ ಮೂಲಕ ಭಾರತದ ಮೇಲೆ ನಡೆಸಲಾಗುತ್ತಿರುವ ಉಗ್ರ ದಾಳಿಗಳನ್ನು ಕಠಿಣವಾಗಿ ಖಂಡಿಸಿದರು. ಇಂತಹ ದಾಳಿಗಳು ಕೇವಲ ಭಾರತದವಷ್ಟೇ ಅಲ್ಲ, ಸಂಪೂರ್ಣ ದಕ್ಷಿಣ ಏಷ್ಯಾ ಪ್ರದೇಶದ ಶಾಂತಿ ಮತ್ತು ಸ್ಥಿರತೆಯನ್ನು ಧಕ್ಕೆಗೆಳ್ಳುತ್ತವೆ ಎಂಬುದನ್ನು ಅವರು ಎತ್ತಿ ತೋರಿಸಿದರು.

“ಭಯೋತ್ಪಾದನೆ ಪೋಷಣೆ ಮಾಡುವ ರಾಜ್ಯಗಳಿಗೆ ತಕ್ಷಣದ ಮತ್ತು ಗಟ್ಟಿಯಾದ ಪ್ರತಿಕ್ರಿಯೆ ಅಗತ್ಯ. ಅಂತಾರಾಷ್ಟ್ರೀಯ ಸಮುದಾಯ ಈ ವಿಷಯದಲ್ಲಿ ಒಂದಾಗಿ ನಿಲ್ಲಬೇಕು,” ಎಂದು ಅವರು ಹೌಕಾಗಿ ಹೇಳಿದರು.
ಪಹಲ್ಗಾಮ್ ಉಗ್ರ ದಾಳೆಯಲ್ಲಿ 25 ಮಂದಿ ಭಾರತೀಯರು ಮತ್ತು ಒಬ್ಬ ನೇಪಾಳಿ ನಾಗರಿಕರು ಬಲಿಯಾಗಿದ್ದ ಕುರಿತು ಸಂತಾಪ ವ್ಯಕ್ತಪಡಿಸಿದ ಜಪಾನ್ ರಕ್ಷಣಾ ಸಚಿವ ಜೆನ್ ನಕಟಾನಿ, ಈ ಕ್ರೂರ ಕೃತ್ಯವನ್ನು ಖಂಡಿಸುತ್ತಾ, ಭಾರತಕ್ಕೆ ಸಂಪೂರ್ಣ ಬೆಂಬಲವಿದೆ ಎಂಬುದನ್ನು ಪುನರುಚ್ಚರಿಸಿದರು. “ಭಯೋತ್ಪಾದನೆ ವಿರುದ್ಧದ ನಿಮ್ಮ ಹೋರಾಟದಲ್ಲಿ ಜಪಾನ್ ನಿಮ್ಮೊಂದಿಗಿದೆ,” ಎಂದು ಅವರು ಸ್ಪಷ್ಟಪಡಿಸಿದರು.
ಭದ್ರತಾ ಸಹಕಾರ, ದೇಶದ ಸ್ಥಿರತೆ, ಸಮುದ್ರ ಭದ್ರತೆ ಮತ್ತು ರಕ್ಷಣಾ ತಂತ್ರಜ್ಞಾನ ಹಂಚಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಉಭಯ ದೇಶಗಳು ಚರ್ಚೆ ನಡೆಸಿದ ಈ ಸಭೆಯು, ಭಾರತ-ಜಪಾನ್ ಸ್ನೇಹಕ್ಕೆ ಮತ್ತಷ್ಟು ಬಲ ನೀಡಿದಂತೆ ರೂಪುಗೊಂಡಿದೆ.
