ವಾಷಿಂಗ್ಟನ್: ಭಾರತ–ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಸಂಬಂಧ ಟ್ರಂಪ್ ಆಡಳಿತವು ಮಂಗಳವಾರ ಪರಿಷ್ಕೃತ ಫ್ಯಾಕ್ಟ್ಶೀಟ್ ಪ್ರಕಟಿಸಿದೆ. ಹೊಸ ದಾಖಲೆಗಳಲ್ಲಿ ಸುಂಕ ಕಡಿತ ಅಥವಾ ಸುಂಕ ರಹಿತವಾಗಿ ಭಾರತ ಆಮದು ಮಾಡಿಕೊಳ್ಳಲಿದೆ ಎಂದು ಹಿಂದೆ ಉಲ್ಲೇಖಿಸಿದ್ದ ‘ದ್ವಿದಳ ಧಾನ್ಯ’ವನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಫೆಬ್ರುವರಿ 9ರಂದು ಶ್ವೇತಭವನ ಪ್ರಕಟಿಸಿದ್ದ ಫ್ಯಾಕ್ಟ್ಶೀಟ್ನಲ್ಲಿ ಅಮೆರಿಕದಿಂದ ಭಾರತ ಮಾರುಕಟ್ಟೆಗೆ ಸುಂಕ ಕಡಿತ ಅಥವಾ ರಹಿತವಾಗಿ ಪ್ರವೇಶಿಸಲಿರುವ ಕೃಷಿ ಉತ್ಪನ್ನಗಳಲ್ಲಿ ‘ದ್ವಿದಳ ಧಾನ್ಯ’ವನ್ನು ಸೇರಿಸಲಾಗಿತ್ತು. ಆದರೆ ಪರಿಷ್ಕೃತ ಆವೃತ್ತಿಯಲ್ಲಿ ಡಿಸ್ಟಿಲರ್ಸ್ ಧಾನ್ಯಗಳು (ಡಿಡಿಜಿಎಸ್), ಕೆಂಪು ಜೋಳ, ಡ್ರೈಫ್ರೂಟ್ಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಮದ್ಯವನ್ನು ಉಳಿಸಿಕೊಂಡು ‘ದ್ವಿದಳ ಧಾನ್ಯ’ ಹಾಗೂ ‘ಇತರ ಕೃಷಿ ಉತ್ಪನ್ನ’ಗಳನ್ನು ತೆಗೆದುಹಾಕಲಾಗಿದೆ.
ಜತೆಗೆ, ಈ ಉತ್ಪನ್ನಗಳನ್ನು ಖರೀದಿಸಲು ಭಾರತ ‘ಬದ್ಧ’ವಾಗಿದೆ ಎಂಬ ಪದಬಳಕೆಯನ್ನು ಕೈಬಿಟ್ಟು, ಖರೀದಿಸಲು ‘ಬಯಸಿದೆ’ ಎಂದು ಪರಿಷ್ಕರಿಸಲಾಗಿದೆ.
ಭಾರತ–ಅಮೆರಿಕ ಮಧ್ಯಂತರ ವ್ಯಾಪಾರ ಚೌಕಟ್ಟು ರೂಪುಗೊಂಡ ನಂತರವೇ ಫ್ಯಾಕ್ಟ್ಶೀಟ್ ಪ್ರಕಟಿಸಲಾಗಿತ್ತು. ಉಭಯ ದೇಶಗಳ ಜಂಟಿ ಪ್ರಕಟಣೆಯ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಇಂಧನ, ವಿಮಾನ ಮತ್ತು ಬಿಡಿಭಾಗಗಳು, ಅಮೂಲ್ಯ ಲೋಹಗಳು, ಸಾಫ್ಟ್ವೇರ್, ಹಾರ್ಡ್ವೇರ್, ಡಿಜಿಟಲ್ ಉಪಕರಣಗಳು ಹಾಗೂ ಕಲ್ಲಿದ್ದಲು ಸೇರಿದಂತೆ ಹಲವು ವಲಯಗಳಲ್ಲಿ ವ್ಯಾಪಾರ ವಿಸ್ತರಣೆ ನಿರೀಕ್ಷಿಸಲಾಗಿದೆ.
ಪರಿಷ್ಕೃತ ಫ್ಯಾಕ್ಟ್ಶೀಟ್ನಲ್ಲಿ ಅಮೆರಿಕದಿಂದ ಇಂಧನ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ, ಕಲ್ಲಿದ್ದಲು, ಕೃಷಿ ಸೇರಿದಂತೆ ವಿವಿಧ ವಲಯಗಳ ಉತ್ಪನ್ನಗಳನ್ನು ಒಟ್ಟು 500 ಬಿಲಿಯನ್ ಡಾಲರ್ಗಿಂತ (ಸುಮಾರು ₹45.28 ಲಕ್ಷ ಕೋಟಿ) ಹೆಚ್ಚಿನ ಮೌಲ್ಯದಲ್ಲಿ ಖರೀದಿಸಲು ಭಾರತ ಉದ್ದೇಶಿಸಿದೆ ಎಂದು ಉಲ್ಲೇಖಿಸಲಾಗಿದೆ. ಕೈಗಾರಿಕಾ ಸರಕುಗಳು ಹಾಗೂ ವಿಶಾಲ ಶ್ರೇಣಿಯ ಆಹಾರ–ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ಭಾರತ ಕಡಿಮೆ ಮಾಡಬಹುದು ಅಥವಾ ತೆಗೆದುಹಾಕಬಹುದು ಎಂದೂ ಹೇಳಲಾಗಿದೆ. ಅಂತಿಮ ಒಪ್ಪಂದದಲ್ಲಿ ಅಮೆರಿಕಕ್ಕೆ ಸುಂಕ ರಹಿತ ರಫ್ತು ಮಾಡುವ ಸರಕುಗಳ ಪಟ್ಟಿಯನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, “ಅಮೆರಿಕದ ಕೃಷಿ ಉತ್ಪನ್ನಗಳ ಭಾರತ ಮಾರುಕಟ್ಟೆ ಪ್ರವೇಶವನ್ನು ಸೀಮಿತಗೊಳಿಸಲಾಗುತ್ತದೆ. ಸುಂಕ ನಿರ್ಧಾರದಲ್ಲಿ ನಮ್ಮದೇ ಕಾರ್ಯವಿಧಾನ ಅನುಸರಿಸಲಾಗುವುದು. ಇದರಿಂದ ಭಾರತೀಯ ರೈತರಿಗೆ ಹಾನಿಯಾಗುವುದಿಲ್ಲ,” ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ. ಅಂತಿಮ ವ್ಯಾಪಾರ ಒಪ್ಪಂದಕ್ಕೆ ಮಾರ್ಚ್ ಅಂತ್ಯದ ವೇಳೆಗೆ ಸಹಿ ಬೀಳುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.
ಯುಎಸ್ಟಿಆರ್ ಪೋಸ್ಟ್ನಿಂದ ನಕ್ಷೆ ಅಳಿಕೆ
ಇದಕ್ಕೂ ಮಧ್ಯೆ, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಹಾಗೂ ಅಕ್ಸಾಯ್ ಚಿನ್ ಸೇರಿ ಜಮ್ಮು–ಕಾಶ್ಮೀರದ ಸಂಪೂರ್ಣ ಪ್ರದೇಶವನ್ನು ಭಾರತದ ಭಾಗವಾಗಿ ತೋರಿಸಿದ್ದ ನಕ್ಷೆಯನ್ನು ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ (ಯುಎಸ್ಟಿಆರ್) ತನ್ನ ‘ಎಕ್ಸ್’ ಖಾತೆಯಿಂದ ತೆಗೆದುಹಾಕಿದೆ. ಮಧ್ಯಂತರ ಚೌಕಟ್ಟು ರೂಪುಗೊಂಡ ನಂತರ ಈ ನಕ್ಷೆಯೊಂದಿಗೆ ಒಪ್ಪಂದದ ಮಾಹಿತಿ ಹಂಚಿಕೊಂಡಿದ್ದ ಯುಎಸ್ಟಿಆರ್, ಇದೀಗ ಆ ಪೋಸ್ಟ್ ಅಳಿಸಿದೆ. ಹಿಂದೆ ಪಿಒಕೆ ಮತ್ತು ಅಕ್ಸಾಯ್ ಚಿನ್ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸುವ ರೀತಿಯ ನಕ್ಷೆಗಳನ್ನು ಪ್ರಕಟಿಸಲಾಗುತ್ತಿತ್ತು.
