ಬೆಂಗಳೂರು: ಭಾರತದಿಂದ ಅಮೆರಿಕಕ್ಕೆ ಆಮದು ಆಗುವ ಸರಕುಗಳ ಮೇಲೆ ವಿಧಿಸಲಾಗುತ್ತಿದ್ದ ಶೇ.25ರಷ್ಟು ಸುಂಕವನ್ನು ಶೇ.18ಕ್ಕೆ ಇಳಿಸುವ ಮಹತ್ವದ ನಿರ್ಧಾರವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡಿದ್ದಾರೆ. ಈ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದು, ಭಾರತ–ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಈ ಒಪ್ಪಂದದಿಂದ ಭಾರತ–ಅಮೆರಿಕ ನಡುವಿನ ಒಟ್ಟು ವ್ಯಾಪಾರದ ಮೌಲ್ಯವು ₹45 ಲಕ್ಷ ಕೋಟಿಗೆ ಏರುವ ಸಾಧ್ಯತೆ ಇದೆ. ಅದರಲ್ಲೂ ಎಲೆಕ್ಟ್ರಾನಿಕ್ಸ್ ಉದ್ಯಮದ ವ್ಯಾಪಾರದ ಗಾತ್ರ ಮಾತ್ರವೇ ₹9 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆ ವ್ಯಕ್ತವಾಗಿದೆ.
ಸದ್ಯ 2024–25ರ ಹಣಕಾಸು ವರ್ಷದಲ್ಲಿ ಭಾರತ–ಅಮೆರಿಕ ನಡುವಿನ ಎಲೆಕ್ಟ್ರಾನಿಕ್ಸ್ ವ್ಯಾಪಾರವು ₹3.27 ಲಕ್ಷ ಕೋಟಿಗೆ ಏರಿಕೆಯಾಗಿದೆ. ಹೊಸ ವ್ಯಾಪಾರ ಒಪ್ಪಂದ ಜಾರಿಗೆ ಬಂದ ಬಳಿಕ ಈ ಮೊತ್ತವು ಮೂರರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಚೀನಾದ ನಂತರ ಭಾರತವು ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಪ್ರಮುಖ ಹಬ್ ಆಗಿ ವೇಗವಾಗಿ ರೂಪುಗೊಳ್ಳುತ್ತಿದ್ದು, ಈ ಕ್ಷೇತ್ರದ ಉತ್ಪನ್ನಗಳಿಗೆ ಅಮೆರಿಕವೇ ಭಾರತದ ಅಗ್ರಗಣ್ಯ ಗ್ರಾಹಕ ರಾಷ್ಟ್ರವಾಗಿದೆ. ಯೂರೋಪಿಯನ್ ಯೂನಿಯನ್ ಜೊತೆ ‘ಮದರ್ ಆಫ್ ಆಲ್ ಡೀಲ್ಸ್’ ಎಂದು ಕರೆಸಿಕೊಂಡ ಒಪ್ಪಂದದ ಬಳಿಕ ಭಾರತ–ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವೂ ಅಂತಿಮಗೊಂಡಿರುವುದು ದೇಶದ ಆರ್ಥಿಕ ಪ್ರಗತಿಗೆ ಮತ್ತೊಂದು ಬಲ ನೀಡಿದೆ.
ಫೆಬ್ರವರಿ 1ರಂದು ಮಂಡಿಸಲಾದ ಕೇಂದ್ರ ಬಜೆಟ್ನ ಆಶಯಗಳೂ ಈ ವ್ಯಾಪಾರ ಒಪ್ಪಂದದೊಂದಿಗೆ ಹೊಂದಾಣಿಕೆಯಾಗಿದ್ದು, ಭಾರತದ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡಿವೆ.
ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯವು ಈಗಾಗಲೇ ನೇರವಾಗಿ 20 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ. ಹೊಸ ವ್ಯಾಪಾರ ಒಪ್ಪಂದಗಳ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಉದ್ಯೋಗಾವಕಾಶಗಳು ಇನ್ನಷ್ಟು ಹೆಚ್ಚಾಗಲಿವೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಸುಂಕದ ಬೆದರಿಕೆಗಳಿಂದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯ ಆತಂಕಕ್ಕೆ ಒಳಗಾಗಿತ್ತು. ಆದರೆ ಇತ್ತೀಚಿನ ನಿರ್ಧಾರದಿಂದ ಈ ವಲಯದ ಮೇಲೆ ಆವರಿಸಿದ್ದ ಕರಾಳ ಛಾಯೆ ದೂರವಾಗಿದೆ ಎನ್ನಲಾಗಿದೆ.
ವಿಶೇಷವಾಗಿ ಭಾರತದಲ್ಲಿ ಐಫೋನ್ ತಯಾರಿಕಾ ಚಟುವಟಿಕೆಗೆ ಎದುರಾಗಿದ್ದ ಆತಂಕ ನಿವಾರಣೆಯಾಗಿದೆ. ಈ ಮೊದಲು ಭಾರತದಲ್ಲಿ ತಯಾರಿಸಿದ ಐಫೋನ್ಗಳನ್ನು ಅಮೆರಿಕಕ್ಕೆ ರಫ್ತು ಮಾಡಿದರೆ ಶೇ.50ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು. ಈಗಿನ ಒಪ್ಪಂದದಿಂದ ಆ ಆತಂಕ ಸಂಪೂರ್ಣವಾಗಿ ನಿವಾರಣೆಯಾಗಿದೆ.
ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಉತ್ಪಾದನೆಯಾಗುವ ಒಟ್ಟು ಐಫೋನ್ಗಳ ಪೈಕಿ ಶೇ.25ರಷ್ಟು ಭಾರತದಲ್ಲೇ ತಯಾರಾಗುತ್ತಿರುವುದು ದೇಶದ ಎಲೆಕ್ಟ್ರಾನಿಕ್ಸ್ ವಲಯದ ಬೆಳವಣಿಗೆಯನ್ನು ಸ್ಪಷ್ಟಪಡಿಸುತ್ತದೆ.
