ನವದೆಹಲಿ: ಕೃಷಿ ಪರಂಪರೆ ಮತ್ತು ರೈತರ ಹಕ್ಕುಗಳನ್ನು ಉಳಿಸುವ ದిశೆಯಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಮಾದರಿಯಾದ ದೇಶವಾಗಿ ಹೊರಹೊಮ್ಮಿದೆ. ರೈತರ ಹಕ್ಕುಗಳನ್ನು ಸ್ವತಂತ್ರ ಕಾನೂನಾಗಿ ಗುರುತಿಸಿದ ವಿಶ್ವದ ಮೊದಲ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತ, 2001ರಲ್ಲಿ ಜಾರಿಗೆ ತಂದ ಸಸ್ಯ ತಳಿಗಳು ಮತ್ತು ರೈತರ ಹಕ್ಕುಗಳ ರಕ್ಷಣಾ ಕಾಯಿದೆ (PPV&FRA) ಮೂಲಕ ಈ ಮಹತ್ವದ ಹೆಜ್ಜೆಯನ್ನು ಇಟ್ಟಿತು.
ಸಾಮಾನ್ಯವಾಗಿ ಬೀಜಗಳ ಹಕ್ಕುಗಳನ್ನು ಬೃಹತ್ ಕಂಪನಿಗಳ ಪೇಟೆಂಟ್ಗಳ ಒಳಗೆ ಸೀಮಿತಗೊಳಿಸುವ ಜಾಗತಿಕ ಕ್ರಮಗಳಿಗೆ ಬದಲಿ, ಭಾರತವು ರೈತನನ್ನೇ ತನ್ನ ಕಾಯ್ದೆಯ ಕೇಂದ್ರಬಿಂದುವಾಗಿಸಿದೆ. ಕೃಷಿಯ ಮಣ್ಣಿನಿಂದಲೇ ಬೆಳೆದ ಈ ವಿಶೇಷ ಕಾನೂನು, ರೈತನಿಗೆ ಮೂರು ಪ್ರಮುಖ ಹಕ್ಕುಗಳನ್ನು ನೀಡಿದೆ:
✦ ಸಂರಕ್ಷಣೆ: ರೈತನು ತನ್ನದೇ ಸಸ್ಯ ತಳಿಯನ್ನು ನೋಂದಾಯಿಸಿ ಹಕ್ಕು ಪಡೆಯುವ ಅವಕಾಶ.
✦ ಉತ್ಪಾದನೆ ಮತ್ತು ಪುನರುತ್ಪಾದನೆ: ಕಂಪನಿಯ ಪೇಟೆಂಟ್ ಇದ್ದರೂ ರೈತನು ಬೀಜವನ್ನು ಉಳಿಸಿಕೊಂಡು ಮತ್ತೆ ಬಿತ್ತುವ ಹಕ್ಕು.
✦ ಮಾರಾಟ: ರೈತನು ಬೀಜವನ್ನು ಮಾರಾಟ ಮಾಡಬಹುದು, ಆದರೆ ಯಾವುದೇ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ನಿಷೇಧ.
“ರೈತನೇ ಬೀಜದ ನಿಜವಾದ ಸೃಷ್ಟಿಕರ್ತ” ಎಂಬ ತತ್ವವನ್ನು ಪ್ರತಿಷ್ಠಾಪಿಸಿದ ಈ ಕಾಯ್ದೆಯ ಮೂಲಕ, ಭಾರತವು ಬೀಜ ಸ್ವಾಯತ್ತತೆಯ ಕ್ಷೇತ್ರದಲ್ಲಿ ಜಗತ್ತಿಗೆ ಹೊಸ ದಾರಿಯನ್ನು ತೋರಿಸಿದೆ. ಅನೇಕ ದೇಶಗಳು ಇನ್ನೂ ಸಮತೋಲನ ಕಾಯ್ದುಕೊಳ್ಳಲು ಹೋರಾಡುತ್ತಿದ್ದರೂ, ಭಾರತವು ಎರಡು ದಶಕಗಳ ಹಿಂದೆಯೇ ಈ ಮೌಲಿಕ ಹಕ್ಕುಗಳನ್ನು ಕಾನೂನಿನ ಪುಟಗಳಲ್ಲಿ ಬಿತ್ತಿರುವುದು ಗಮನಾರ್ಹ.