ನವದೆಹಲಿ: ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಸಮಗ್ರ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ನೀತಿ (National Counter-Terrorism Policy) ರೂಪುಗೊಳ್ಳುವ ಹಂತದಲ್ಲಿದ್ದು, 2026ರ ಆರಂಭಕ್ಕೆ ಇದು ದೇಶಕ್ಕೆ ಲಭ್ಯವಾಗುವ ಸಾಧ್ಯತೆ ಇದೆ. ಇದುವರೆಗೂ ವಿವಿಧ ಕಾನೂನುಗಳು ಹಾಗೂ ಸಂಸ್ಥೆಗಳ ಮೂಲಕ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದ್ರೂ, ಏಕೀಕೃತ ರಾಷ್ಟ್ರೀಯ ಮಟ್ಟದ ನೀತಿ ಇರಲಿಲ್ಲ ಎಂಬ ಕೊರತೆಯನ್ನು ಈ ಹೊಸ ನೀತಿ ತುಂಬಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನವೆಂಬರ್ 2024ರಲ್ಲಿ ಈ ನೀತಿಯನ್ನು ಶೀಘ್ರವಾಗಿ ಪರಿಚಯಿಸಲಾಗುವುದಾಗಿ ಘೋಷಿಸಿದ್ದರು. ಪ್ರಸ್ತುತ ಗೃಹ ಸಚಿವಾಲಯ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೇರಿದಂತೆ ಭದ್ರತಾ ಸಂಸ್ಥೆಗಳ ಸಹಕಾರದೊಂದಿಗೆ ನೀತಿಯ ಕರಡು ಅಂತಿಮ ಹಂತದಲ್ಲಿದೆ.
ಬಿಡುಗಡೆ ಸಾಧ್ಯತೆ:-
2025ರ ಡಿಸೆಂಬರ್ 26–27ರಂದು NIA ಆಯೋಜಿಸಲಿರುವ ರಾಷ್ಟ್ರೀಯ ಭಯೋತ್ಪಾದನಾ ಸಮ್ಮೇಳನದಲ್ಲಿ ಈ ನೀತಿಯ ಪ್ರಮುಖ ಅಂಶಗಳನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ. ಹಲವು ವರದಿಗಳ ಪ್ರಕಾರ, ನೀತಿ ಶೀಘ್ರದಲ್ಲೇ ಅಧಿಕೃತವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಏಕೆ ಇದು ಮೊದಲನೆಯದು?
ಇದುವರೆಗೆ ಭಾರತದಲ್ಲಿ
- UAPA, NIA Act, BNS ಸೇರಿದಂತೆ ಹಲವು ಕಾನೂನುಗಳು
- NSG, NIA, IB ಮೊದಲಾದ ಸಂಸ್ಥೆಗಳು
ಇದ್ದರೂ, ಭಯೋತ್ಪಾದನೆ ವಿರುದ್ಧದ ಒಂದು ಸಮಗ್ರ ರಾಷ್ಟ್ರೀಯ ನೀತಿ ಡಾಕ್ಯುಮೆಂಟ್ ಇರಲಿಲ್ಲ. 2015ರಲ್ಲಿ ಎಡಪಂಥೀಯ ಉಗ್ರವಾದಕ್ಕೆ ಸಂಬಂಧಿಸಿದ ನೀತಿ ಹೊರತುಪಡಿಸಿ, ಸಮಗ್ರ ಭಯೋತ್ಪಾದನಾ ವಿರೋಧಿ ನೀತಿ ಇದೇ ಮೊಟ್ಟಮೊದಲಾಗಿದೆ.
ಇದನ್ನು ಓದಿ: ಭಾರತದ ಗ್ರ್ಯಾಂಡ್ ಕ್ಯಾನಿಯನ್ ಎಂದೇ ಖ್ಯಾತ ಗಂಡಿಕೋಟ ಕಣಿವೆ
ನೀತಿಯ ಪ್ರಮುಖ ಗಮನಾರ್ಹ ಅಂಶಗಳು
ಚರ್ಚೆಯಲ್ಲಿರುವ ಮಾಹಿತಿಯ ಪ್ರಕಾರ, ಈ ನೀತಿಯಲ್ಲಿ
- ಆನ್ಲೈನ್ ಮೂಲಕ ನಡೆಯುವ ಡಿಜಿಟಲ್ ರ್ಯಾಡಿಕಲೈಸೇಶನ್ ವಿರುದ್ಧ ಕಠಿಣ ಕ್ರಮ
- ವಿದೇಶಿ ನಿಧಿಯಿಂದ ನಡೆಯುವ ಅಕ್ರಮ ಜಾಲಗಳು ಮತ್ತು ಧರ್ಮಾಂತರಣ ಚಟುವಟಿಕೆಗಳ ಮೇಲೆ ನಿಗಾ
- ತೆರೆದ ಗಡಿಗಳ ದುರುಪಯೋಗ, ವಿಶೇಷವಾಗಿ ನೇಪಾಳ ಗಡಿಯಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ
- ಗುಪ್ತಚರ ಮಾಹಿತಿ ಹಂಚಿಕೆ ಹಾಗೂ ಕೇಂದ್ರ–ರಾಜ್ಯಗಳ ನಡುವೆ ಉತ್ತಮ ಸಮನ್ವಯ
- ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ಮೂಲಗಳನ್ನು ಸಂಪೂರ್ಣವಾಗಿ ನಿಲ್ಲಿಸುವ ಕ್ರಮ
- ಪ್ರತಿಕ್ರಿಯಾ ಆಧಾರಿತ ಕ್ರಮಗಳಿಂದ ಹೊರಬಂದು ಪೂರ್ವಾನುಮಾನ ಹಾಗೂ ತಡೆಗಟ್ಟುವಿಕೆ ಆಧಾರಿತ ಭದ್ರತಾ ವ್ಯವಸ್ಥೆ ರೂಪಿಸುವುದು
ಮುಖ್ಯ ಅಂಶಗಳಾಗಿರಲಿವೆ.
ಒಟ್ಟಾರೆ, ಜನವರಿ 2026ರ ವೇಳೆಗೆ ಭಾರತದ ಮೊದಲ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ನೀತಿ ಜಾರಿಗೆ ಬರುವ ಸಾಧ್ಯತೆ ಬಲವಾಗಿದ್ದು, ಇದು ದೇಶದ ಆಂತರಿಕ ಭದ್ರತೆ ಮತ್ತು ಉಗ್ರವಾದ ವಿರೋಧಿ ಹೋರಾಟದಲ್ಲಿ ಒಂದು ಮಹತ್ವದ ಹಾಗೂ ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
