ಹೊಸದಿಲ್ಲಿ, ಆ.13: ಪಶ್ಚಿಮಾಭಿಮುಖವಾಗಿ ಹರಿಯುವ ಚೆನಾಬ್, ಝೀಲಂ ಹಾಗೂ ಸಿಂಧೂ ನದಿಗಳಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ನದಿ ಹರಿವಿನ ಜಲವಿದ್ಯುತ್ ಯೋಜನೆಗಳ ವಿನ್ಯಾಸ ಮಾನದಂಡಗಳನ್ನು ಕುರಿತು ಅಂತರರಾಷ್ಟ್ರೀಯ ನ್ಯಾಯಾಲಯ ನೀಡಿದ ತೀರ್ಪನ್ನು ಭಾರತ ತಿರಸ್ಕರಿಸಿದೆ. ಈ ತೀರ್ಪನ್ನು ಪಾಕಿಸ್ತಾನ ಸ್ವಾಗತಿಸಿದ್ದು, ತನ್ನ ನಿಲುವಿಗೆ ಬೆಂಬಲ ಸಿಕ್ಕಂತಾಗಿದೆ ಎಂದು ಹೇಳಿದೆ.
ಭಾರತವು ತಟಸ್ಥ ತಜ್ಞರ ಕಾರ್ಯವಿಧಾನವನ್ನೇ ಮಾನ್ಯವನ್ನಾಗಿ ಪರಿಗಣಿಸುತ್ತಿದ್ದು, ಹೈಡ್ರೋ ಎಲೆಕ್ಟ್ರಿಕ್ ಸ್ಥಾವರಗಳ ವಿನ್ಯಾಸಕ್ಕೆ ಒಪ್ಪಂದದಲ್ಲಿ ನಿಗದಿಪಡಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ನಿಲುವು ವ್ಯಕ್ತಪಡಿಸಿದೆ. ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯವು ಪಶ್ಚಿಮಾಭಿಮುಖ ನದಿಗಳ ನೀರನ್ನು ಪಾಕಿಸ್ತಾನಕ್ಕೆ ನಿರ್ಬಂಧವಿಲ್ಲದೆ ಹರಿಯಲು ಬಿಡಬೇಕು ಎಂದು ನಿರ್ಧರಿಸಿದ್ದರೂ, ಭಾರತ ಇದನ್ನು ಒಪ್ಪಿಲ್ಲ.
ಮೂಲಗಳ ಪ್ರಕಾರ, ಜಮ್ಮು-ಕಾಶ್ಮೀರದ ಕಿಶನ್ಗಂಗಾ ಮತ್ತು ರಾಟ್ಲೆ ಯೋಜನೆಗಳ ಕುರಿತ ದೀರ್ಘಕಾಲದ ವಿವಾದಗಳ ನಡುವೆಯೇ ಭಾರತವು ಐಡಬ್ಲ್ಯೂಟಿಯಲ್ಲಿ ತಿದ್ದುಪಡಿ ಅಗತ್ಯವಿದೆ ಎಂದು ಸೂಚಿಸಿತ್ತು. ಪಾಕಿಸ್ತಾನದ ಒತ್ತಾಯದ ಮೇರೆಗೆ ವಿಶ್ವಬ್ಯಾಂಕ್ ವಿವಾದ ಪರಿಹಾರ ಪ್ರಕ್ರಿಯೆಯಲ್ಲಿ ತಟಸ್ಥ ತಜ್ಞರು ಹಾಗೂ ಮಧ್ಯಸ್ಥಿಕೆ ನ್ಯಾಯಾಲಯವನ್ನು ನೇಮಿಸಿದ ನಿರ್ಧಾರವನ್ನೂ ಭಾರತ ವಿರೋಧಿಸಿತ್ತು.
2022ರ ಅಕ್ಟೋಬರ್ನಲ್ಲಿ ಭಾರತ ಎತ್ತಿದ್ದ ಏಕಕಾಲೀನ ಪ್ರಕ್ರಿಯೆಗಳ ಕಾನೂನು ಹಾಗೂ ಪ್ರಾಯೋಗಿಕ ಸವಾಲುಗಳ ಕುರಿತ ಕಳವಳವನ್ನು ವಿಶ್ವಬ್ಯಾಂಕ್ ಅಂಗೀಕರಿಸಿದ್ದರೂ, ಅಂತಿಮವಾಗಿ ಎರಡು ಪ್ರಕ್ರಿಯೆಗಳನ್ನೂ ಮುಂದುವರಿಸಿತು.
ಸೋಮವಾರದ ತೀರ್ಪಿನ ನಂತರ, ಪಾಕಿಸ್ತಾನ ಐಡಬ್ಲ್ಯೂಟಿಯನ್ನು ಜಾರಿಗೆ ತರುವ ಬದ್ಧತೆಯನ್ನು ಪುನರುಚ್ಚರಿಸಿ, ಭಾರತವು ಅದರ ಕಾರ್ಯವನ್ನು ಪುನರಾರಂಭಿಸಬೇಕೆಂದು ಒತ್ತಾಯಿಸಿದೆ. ಆದರೆ, ಪಾಕಿಸ್ತಾನ ಗಡಿಯಾಚೆಯ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಒಪ್ಪಂದ ಸ್ಥಗಿತವಾಗಿರುತ್ತದೆ ಎಂದು ಭಾರತ ಸ್ಪಷ್ಟಪಡಿಸಿದೆ.
