ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಇತಿಹಾಸದಲ್ಲೇ ದೊಡ್ಡ ಮಟ್ಟದ ಕುಸಿತ ಕಂಡುಬಂದಿದೆ. 1971ರ ಸ್ಥಿತಿಗೆ ಹೋಲಿಸಿದರೆ ಶೇ.80ರಷ್ಟು ಸುಧಾರಣೆ ಕಂಡು ಬಂದಿದೆ ಎಂದು ಇತ್ತೀಚಿನ ರಾಷ್ಟ್ರೀಯ ಆರೋಗ್ಯ ವರದಿ ತಿಳಿಸಿದೆ.
ಶಿಶು ಮರಣ ಪ್ರಮಾಣ (IMR) ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಸೂಚಕವಾಗಿದ್ದು, ಒಂದು ವರ್ಷದೊಳಗಿನ 1,000 ಜೀವಂತ ಜನನಗಳಿಗೆ ಮಕ್ಕಳ ಸಾವಿನ ಸಂಖ್ಯೆಯನ್ನು ಸೂಚಿಸುತ್ತದೆ. ಈ ಪ್ರಮಾಣ ಕಡಿಮೆಯಾಗುವುದು ಆರೋಗ್ಯ ಕ್ಷೇತ್ರದಲ್ಲಿ ಆದ ಪ್ರಗತಿ ಮತ್ತು ಜನರಲ್ಲಿ ಹೆಚ್ಚಿದ ಅರಿವಿನ ಪ್ರತೀಕ ಎಂದು ತಜ್ಞರು ಹೇಳಿದ್ದಾರೆ.
ವರದಿ ಪ್ರಕಾರ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ಉತ್ತರ ಪ್ರದೇಶ ರಾಜ್ಯಗಳು ದೇಶದಲ್ಲಿ ಅತ್ಯಧಿಕ ಶಿಶು ಮರಣ ಪ್ರಮಾಣವನ್ನು ದಾಖಲಿಸಿವೆ. ಈ ರಾಜ್ಯಗಳಲ್ಲಿ ಪ್ರತಿ 1,000 ಜನನಗಳಿಗೆ 37 ಮಕ್ಕಳ ಸಾವಿನ ಪ್ರಮಾಣ ದಾಖಲಾಗಿದೆ.
ಅತ್ಯಂತ ಕಡಿಮೆ ಶಿಶು ಮರಣ ಪ್ರಮಾಣ ಹೊಂದಿರುವ ರಾಜ್ಯಗಳಲ್ಲಿ ಮಣಿಪುರ ಮುಂಚೂಣಿಯಲ್ಲಿದ್ದು, ಶೇ.3ರಷ್ಟು ಪ್ರಮಾಣ ಹೊಂದಿದೆ. ಕೇರಳ ಶೇ.5ರಷ್ಟು ಶಿಶು ಮರಣ ಪ್ರಮಾಣದೊಂದಿಗೆ ಎರಡನೇ ಸ್ಥಾನದಲ್ಲಿದೆ.
ಆರೋಗ್ಯ ತಜ್ಞರು, “ದೇಶದಲ್ಲಿ ಆರೋಗ್ಯ ಸೇವೆಗಳ ವಿಸ್ತರಣೆ, ಜನರಲ್ಲಿ ಶಿಶು ಆರೈಕೆ ಕುರಿತು ಹೆಚ್ಚಿದ ಅರಿವು, ತಾಯಿ ಮತ್ತು ಶಿಶು ಪೋಷಣೆಗೆ ನೀಡಿದ ವಿಶೇಷ ಗಮನವೇ ಶಿಶು ಮರಣ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣ” ಎಂದು ಹೇಳಿದ್ದಾರೆ.
ಈ ಸಾಧನೆಯಿಂದ ದೇಶದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ಕಂಡುಬಂದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
