ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಪ್ರತಿಷ್ಠಿತ ಐಐಎಂಎನಲ್ಲಿ ಓದುವ ಜಾಣ ವಿದ್ಯಾರ್ಥಿಗಳಿಗೆ 20 ವರ್ಷದ ಸ್ಕಾಲರ್ಶಿಪ್ ಸ್ಕೀಮ್ವೊಂದನ್ನು ಘೋಷಿಸಿದ್ದಾರೆ. ಬಹಳ ದುಬಾರಿ ಎನಿಸುವ ಐಐಎಂಎ ಓದಿನ ವೆಚ್ಚವನ್ನು ಮೂರ್ತಿಗಳೇ ಪೂರ್ಣವಾಗಿ ಭರಿಸಲಿದ್ದಾರೆ. ತಮ್ಮ ಕುಟುಂಬದ ಹೂಡಿಕೆ ಸಂಸ್ಥೆಯಾದ ಕಟಮರನ್ ವೆಂಚರ್ಸ್ ಮೂಲಕ ಅವರು ಈ ಸ್ಕೀಮ್ ನಡೆಸಲಿದ್ದಾರೆ. ಮೊದಲಿಗೆ ಅವರು ಇದಕ್ಕಾಗಿ 12 ಕೋಟಿ ರೂ ತೆಗೆದಿರಿಸಲು ಬದ್ಧವಾಗಿದ್ದಾರೆ.
ಏನಿದು ನಾರಾಯಣಮೂರ್ತಿ ಅವರ ಈ ಐಐಎಂಎ ಸ್ಕಾಲರ್ಶಿಪ್ ಸ್ಕೀಮ್?
ಅಹ್ಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಎಂಬಿಎ ಓದುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಸ್ಕೀಮ್ಗೆ ಪ್ರೊಫೆಸರ್ ಜಸ್ವಂತ್ ಜಿ ಕೃಷ್ಣಯ್ಯ ಮೆರಿಟ್ ಸ್ಕಾಲರ್ಶಿಪ್ ಎಂದು ಹೆಸರಿಡಲಾಗಿದೆ. ನಾರಾಯಣಮೂರ್ತಿ ಅವರು ಐಐಎಂಎನಲ್ಲಿ ಮುಖ್ಯ ಸಿಸ್ಟಂ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾಗ ಅವರಿಗೆ ಮಾರ್ಗದರ್ಶಕರಂತಿದ್ದವರು ಪ್ರೊ. ಜೆಜಿ ಕೃಷ್ಣಯ್ಯ ಅವರೆಯೇ. ಅವರ ಸ್ಮರಣಾರ್ಥವಾಗಿ ಅವರ ಹೆಸರಿನಲ್ಲಿ ಸ್ಕಾಲರ್ಶಿಪ್ ನಡೆಸಲಾಗುತ್ತಿದೆ.
ಈ ಯೋಜನೆಯಲ್ಲಿ ಎಂಬಿಎ ಕೋರ್ಸ್ನ ಮೊದಲ ವರ್ಷದಲ್ಲಿ ಪೋಸ್ಟ್ ಗ್ರಾಜುಯೇಟ್ ಪ್ರೋಗ್ರಾಮ್ನಲ್ಲಿ ಮೊದಲ ಸ್ಥಾನ ಪಡೆಯುವ ವಿದ್ಯಾರ್ಥಿಗೆ ಸ್ಕಾಲರ್ಶಿಪ್ ಸಿಗುತ್ತದೆ. ಎರಡು ವರ್ಷದ ಕೋರ್ಸ್ ಓದಲು ವಿದ್ಯಾರ್ಥಿಗೆ ಆಗುವ ಎಲ್ಲಾ ವೆಚ್ಚವನ್ನೂ ಈ ಪ್ರೋಗ್ರಾಮ್ನಲ್ಲಿ ಭರಿಸಲಾಗುತ್ತದೆ. ಎಲ್ಲಾ ವೆಚ್ಚ ಎಂದರೆ, ತರಗತಿ, ಹಾಸ್ಟೆಲ್, ಊಟ, ಕೋರ್ಸ್ ಮೆಟೀರಿಯಲ್, ಜೀವನ ವೆಚ್ಚ ಇತ್ಯಾದಿ ಎಲ್ಲವೂ ಒಳಗೊಂಡಿರುತ್ತದೆ.
20 ವರ್ಷ ಕಾಲ ನಾರಾಯಣಮೂರ್ತಿ ಅವರು ಈ ಸ್ಕಾಲರ್ಶಿಪ್ ಪ್ರೋಗ್ರಾಮ್ ನಡೆಸಲು ಉದ್ದೇಶಿಸಿದ್ದಾರೆ. ಈ ಸ್ಕೀಮ್ಗೆ 12 ಕೋಟಿ ರೂ ನೀಡಲು ಬದ್ಧರಾಗಿದ್ದಾರೆ. ಸದ್ಯ ಐಐಎಂಎನಲ್ಲಿ ಎರಡು ವರ್ಷದ ಎಂಬಿಎ ಪಿಡಿಪಿ ಕೋರ್ಸ್ ಓದಲು 28 ಲಕ್ಷ ರೂ ವೆಚ್ಚವಾಗುತ್ತದೆ. ಮುಂದಿನ ದಿನಗಳಲ್ಲಿ ಕೋರ್ಸ್ ವೆಚ್ಚ ಏರುತ್ತಲೇ ಇರಬಹುದು. 20 ವರ್ಷದ ಬಳಿಕ ಕೋರ್ಸ್ ವೆಚ್ಚ ಒಂದು ಕೋಟಿ ಆಗುವ ನಿರೀಕ್ಷೆ ಇದೆ. ವೆಚ್ಚ ಎಷ್ಟಿದ್ದರೂ ಸ್ಕಾಲರ್ಶಿಪ್ ಸ್ಕೀಮ್ನಲ್ಲಿ ಎಲ್ಲವನ್ನೂ ಭರಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ಸಂಡೂರಿನಲ್ಲಿ ಸಿಕ್ಕಿಬಿದ್ದ ಕಾಮುಕ: 13 ಸಾವಿರಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ಫೋಟೋ, ವಿಡಿಯೋ ಪತ್ತೆ
