ಹಾಸನ, ಮಾ.18: ರೈಲ್ವೆ ಇಲಾಖೆಯ ವಿವಿಧ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡದೆ ಕನ್ನಡಿಗರಿಗೆ ನಿರಂತರ ಅನ್ಯಾಯ ಮಾಡಲಾಗುತ್ತಿದೆ ಎಂದು ಕದಂಬ ಸೈನ್ಯ ತೀವ್ರ ವಿಷಾದ ವ್ಯಕ್ತಪಡಿಸಿದೆ.
ರೈಲ್ವೆ ಇಲಾಖೆಯ ಪರೀಕ್ಷೆಗಳು ನಡೆಯುವ ಪ್ರತಿ ಬಾರಿಯೂ ಕನ್ನಡ ಪರ ಸಂಘಟನೆಗಳು ಕನ್ನಡ ಭಾಷೆಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದರೂ, ಕೇಂದ್ರ ರೈಲ್ವೆ ಸಚಿವರು ಹಾಗೂ ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಕದಂಬ ಸೈನ್ಯ ಆರೋಪಿಸಿದೆ.
ಸಂಘಟನೆಯ ಪ್ರಕಾರ, 1992ರಿಂದಲೇ ಆಯಾ ರಾಜ್ಯದ ಭಾಷೆಗಳಲ್ಲಿ ರೈಲ್ವೆ ಪರೀಕ್ಷೆ ನಡೆಸಬೇಕು ಎಂಬ ನಿಯಮ ಇದ್ದರೂ, ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿಭಾಗ ಮಟ್ಟದ ಎಲ್ಲ ಪರೀಕ್ಷೆಗಳಲ್ಲಿ ಹಿಂದಿ, ಇಂಗ್ಲಿಷ್ ಹಾಗೂ ರಾಜ್ಯ ಭಾಷೆಯಲ್ಲಿ ಪ್ರಶ್ನೆಪತ್ರಿಕೆ ಇರಬೇಕು ಎಂಬ ನಿಯಮವಿದ್ದರೂ, ಕನ್ನಡಕ್ಕೆ ಅವಕಾಶ ಕಲ್ಪಿಸದಿರುವುದು ಕನ್ನಡಿಗರ ಮೇಲೆ ನಡೆಯುತ್ತಿರುವ ಅನ್ಯಾಯದ ಉದಾಹರಣೆಯಾಗಿದೆ ಎಂದು ತಿಳಿಸಿದೆ.
ರೈಲ್ವೆಯಂತಹ ಮಹತ್ವದ ಕೇಂದ್ರೀಯ ಪರೀಕ್ಷೆಗಳಲ್ಲಿ ಕನ್ನಡಿಗರನ್ನು ಕಡೆಗಣಿಸಿ, ಕನ್ನಡೇತರರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕರ್ನಾಟಕದ ರೈಲ್ವೆ ನಿಲ್ದಾಣಗಳು ಮತ್ತು ಕಚೇರಿಗಳಲ್ಲಿಯೂ ಬಹುತೇಕ ಕನ್ನಡೇತರ ಸಿಬ್ಬಂದಿಯೇ ಹೆಚ್ಚಿರುವುದು ನೋವುಂಟು ಮಾಡುತ್ತಿದೆ. ಉನ್ನತ ಹುದ್ದೆಗಳಲ್ಲಿಯೂ ಕನ್ನಡಿಗರ ಪ್ರಮಾಣ ಕಡಿಮೆಯಿದ್ದು, ಟೆಂಡರ್ ಹಾಗೂ ಗುತ್ತಿಗೆ ಕಾಮಗಾರಿಗಳಲ್ಲಿಯೂ ಕನ್ನಡೇತರರಿಗೆ ಹೆಚ್ಚು ಅವಕಾಶ ಸಿಗುತ್ತಿದೆ ಎಂದು ಕದಂಬ ಸೈನ್ಯ ಅಸಮಾಧಾನ ವ್ಯಕ್ತಪಡಿಸಿದೆ.
ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯದ ಎಲ್ಲಾ ಪಕ್ಷಗಳ ಸಂಸದರು ಒಗ್ಗಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ಕನ್ನಡಿಗರಿಗೆ ಕನ್ನಡದಲ್ಲೇ ರೈಲ್ವೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಕದಂಬ ಸೈನ್ಯ ಆಗ್ರಹಿಸಿದೆ.
ಈ ಸಂಬಂಧ, ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ, ಹಾಸನ ಜಿಲ್ಲಾಧಿಕಾರಿಗಳ ಮುಖಾಂತರ, ಕದಂಬ ಸೈನ್ಯ ಜಿಲ್ಲಾ ಘಟಕದಿಂದ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಅಧ್ಯಕ್ಷ ಪ್ರೊ. ಎ.ಹೆಚ್. ಗಣೇಶ್ ಅಂಕಾಪುರ, ಅರಕಲಗೂಡು ತಾಲೂಕು ಅಧ್ಯಕ್ಷ ಬೇಕ್ರಿ ರಾಜೇಗೌಡ, ಹೊಳೇನರಸೀಪುರ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿಗೌಡ, ಆಲೂರು ತಾಲೂಕು ಅಧ್ಯಕ್ಷ ವೆಂಕಟೇಗೌಡ ಪಟ್ನ, ಸಕಲೇಶಪುರ ತಾಲೂಕು ಅಧ್ಯಕ್ಷ ವಿಶ್ವಾಸ್ ಡಿ. ಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೆಚ್.ಎಸ್. ಪ್ರತಿಮಾ ಹಾಸನ್, ಕುಮಾರ್ ಅಂಕಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
