ಬೆಂಗಳೂರು: RCB ತಂಡವು 18 ವರ್ಷಗಳ ನಂತರ ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಹ್ವಾನದ ಮೇರೆಗೆ ನಡೆದ ವಿಜಯೋತ್ಸವ ಕಾರ್ಯಕ್ರಮ ಭಾರೀ ಅನಿಷ್ಟಕ್ಕೆ ಕಾರಣವಾಯಿತು. ಸರಿಯಾದ ವ್ಯವಸ್ಥೆಯಿಲ್ಲದ ಕಾರ್ಯಕ್ರಮದಲ್ಲಿ ನಡೆದ ನೂಕುನುಗ್ಗಲಿನ ಕಾರಣದಿಂದ 11 ಮಂದಿ ಪ್ರಾಣ ಕಳೆದುಕೊಂಡಿದ್ದು, 47 ಮಂದಿ ಗಾಯಗೊಂಡಿದ್ದಾರೆ.
ಈ ಘಟನೆಯ ಸಂಬಂಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವಂತೆ ಪತ್ರದ ಮೂಲಕ ಆಗ್ರಹಿಸಲಾಗಿದೆ. ಪತ್ರದಲ್ಲಿ, “ಖಾಸಗಿ ಕ್ರಿಕೆಟ್ ಸಂಸ್ಥೆಯಾದ RCB ತಂಡದ ಜಯೋತ್ಸವವನ್ನು ಸರಕಾರ ಸರ್ವಜನಿಕ ಕಾರ್ಯಕ್ರಮವನ್ನಾಗಿ ಮಾಡಿ, ಸ್ವತಃ ಮುಖ್ಯಮಂತ್ರಿಯವರು ಆಹ್ವಾನ ನೀಡಿದರು. ಆದರೆ ಯಾವುದೇ ಪೂರ್ವಸಿದ್ಧತೆ ಇಲ್ಲದೇ, ವ್ಯವಸ್ಥೆಯಿಲ್ಲದೆ ನಡೆದ ಕಾರ್ಯಕ್ರಮ ದುರಂತಕ್ಕೆ ಕಾರಣವಾಯಿತು,” ಎಂದು ಆರೋಪಿಸಲಾಗಿದೆ.
ಘಟನೆ ನಡೆದ ದಿನಾಂಕ 4 ಜೂನ್ 2025 ರಂದು, ಸಾಮಾಜಿಕ ಜಾಲತಾಣದ ಮೂಲಕ ಸಿಎಂ ಆಹ್ವಾನಿತ ಸಂದೇಶ ಹರಡಿದ್ದು, ಸಾವಿರಾರು ಜನರು ವಿಧಾನಸೌಧದ ಬಳಿ ಸೇರಿದರು. ಬಳಿಕ ಕಾರ್ಯಕ್ರಮ ಸ್ಥಳವನ್ನು ಏಕಾಏಕಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬದಲಾಯಿಸಿ, ಕೆಲವೇ ಗೇಟ್ಗಳನ್ನು ತೆರೆಯಲಾಗಿದೆ. ಇದರಿಂದಾಗಿ ನೂಕುನುಗ್ಗಲು ಉಂಟಾಗಿ ಜನತೆ ಹತಾಹತಿಯಾಗಿ ಸಾವನ್ನಪ್ಪಿದ್ದಾರೆ.
ಪತ್ರದಲ್ಲಿ, “ಈ ಕಾರ್ಯಕ್ರಮಕ್ಕೆ ಪೂರ್ವ ತಯಾರಿ, ಭದ್ರತಾ ವ್ಯವಸ್ಥೆ, ಜನಸಮುದಾಯ ನಿರ್ವಹಣೆ ಮತ್ತು ತುರ್ತು ಸೇವೆಗಳ ತಕ್ಷಣದ ಲಭ್ಯತೆ ಇಲ್ಲದೆ ನಡೆದಿದ್ದು, ಈ ಎಲ್ಲಾ ಅಸಡ್ಡೆಯ ಬೆಲೆ ಅಮಾಯಕರ ಜೀವದಿಂದ ಪಾವತಿಸಲಾಯಿತು,” ಎಂದು ದೂರಲಾಗಿದೆ.
ಆಸಕ್ತಿಯ ಸಂಗತಿಯೆಂದರೆ, ಇಂತಹ ಘಟನೆ ಖಾಸಗಿ ಸಂಸ್ಥೆಯಿಂದ ನಡೆಯುತ್ತಿದ್ದರೆ, ಆಯೋಜಕರ ವಿರುದ್ಧ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತಿತ್ತು. ಆದರೆ ಈ ಬಾರಿ ಸರಕಾರದ ಅಧಿಕೃತ ಆಹ್ವಾನ ಮತ್ತು ಭಾಗವಹಿಸುವಿಕೆಯ ಬಳಿಕ, ಮಾತ್ರ ಕೆಲವೇ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ, ಕೇಂದ್ರ ತನಿಖಾ ಸಂಸ್ಥೆಯ ನೇತೃತ್ವದಲ್ಲಿ ಹಾಗೂ ಉನ್ನತ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಯ ನಿರೀಕ್ಷಣೆಯಲ್ಲಿನ ನ್ಯಾಯಸಮ್ಮತ ತನಿಖೆ ನಡೆಯಬೇಕು ಎಂಬುದು ಪತ್ರದ ಆಶಯವಾಗಿದೆ. ಮುಖ್ಯಮಂತ್ರಿಗಳ ಮುಂದಾಲೋಚನೆಯಿಲ್ಲದ ನಿರ್ಧಾರವೇ ಈ ದುರಂತಕ್ಕೆ ಕಾರಣವೆಂದು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
“ಅಮಾಯಕರ ಸಾವಿಗೆ ನೈತಿಕವಾಗಿ ಹಾಗೂ ಕಾನೂನುಬದ್ಧವಾಗಿ ಜವಾಬ್ದಾರರಾಗಿರುವ ಮಾನ್ಯ ಸಿದ್ದರಾಮಯ್ಯನವರ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು,” ಎಂಬ ಒತ್ತಾಯಿಸಲಾಗಿದೆ.