ಹಾಸನ, ಏ.4: ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಹಾಸನದ ಜಿಲ್ಲಾ ಕಾರಾಗೃಹದಲ್ಲಿರುವ ಕಾರಾಗೃಹ ವಾಸಿಗಳಿಗಾಗಿ ಸುಮಾರು ₹30 ಸಾವಿರ ವೆಚ್ಚದಲ್ಲಿ ರೇಡಿಯೋ ಸಾಧನ ಹಾಗೂ ಸ್ಪೀಕರ್ಗಳನ್ನು ಅಳವಡಿಸಿ ನೀಡಲಾಯಿತು.
ಶನಿವಾರ ನಡೆದ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಗೌರವಾನ್ವಿತ ಜಿಲ್ಲಾಧಿಕಾರಿಗಳಾದ ಶ್ರೀಮತಿ ಲತಾ ಕುಮಾರಿ ಅವರು ಈ ಸಾಧನಗಳನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಕೈಗೊಂಡಿರುವ ಈ ಸಮಾಜಮುಖಿ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದರು.
ಕಾರಾಗೃಹ ವಾಸಿಗಳು ಈ ವ್ಯವಸ್ಥೆಯ ಮೂಲಕ ಆಕಾಶವಾಣಿಯ ವಿವಿಧ ಉಪಯುಕ್ತ ಕಾರ್ಯಕ್ರಮಗಳನ್ನು ಆಲಿಸಿ ಮನಪರಿವರ್ತನೆ ಹೊಂದಿ, ಸ್ವಸ್ಥ ಸಮಾಜದ ಭಾಗವಾಗಬೇಕು ಎಂದು ಅವರು ಆಶಿಸಿದರು. ಅಲ್ಲದೇ, ಸಮಯವನ್ನು ಸದುಪಯೋಗಪಡಿಸಿಕೊಂಡು ಆಕಾಶವಾಣಿಯಲ್ಲಿ ಬಿತ್ತರವಾಗುವ ಪ್ರೇರಣಾದಾಯಕ ಹಾಗೂ ಜ್ಞಾನವರ್ಧಕ ಕಾರ್ಯಕ್ರಮಗಳನ್ನು ಆಲಿಸಿ, ಬಿಡುಗಡೆಯ ನಂತರ ತಮ್ಮ ಜೀವನಕ್ರಮದಲ್ಲಿ ಅಳವಡಿಸಿಕೊಳ್ಳುವ ಮೂಲಕ ಈ ಕಾರ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಕಾರ್ಯಕ್ರಮವನ್ನು ಜಿಲ್ಲಾ ಕಾರಾಗೃಹ ಮತ್ತು ಹಾಸನ ಆಕಾಶವಾಣಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಜೋನ್-9ರ ಎಜಿ ಜೆ.ಎನ್. ಮಂಜುನಾಥ್, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಅಧ್ಯಕ್ಷ ರೋ. ವಜ್ರಕುಮಾರ್ ಎಚ್.ಡಿ., ಕಾರ್ಯದರ್ಶಿ ರೋ. ಯೋಗೇಶ್ ಕೆ.ಎಸ್., ಹಾಸನ ಆಕಾಶವಾಣಿಯ ಕಾರ್ಯನಿರ್ವಹಕರಾದ ಅರಕಲಗೂಡು ವಿ. ಮಧುಸೂದನ್, ಕಾರ್ಯಕ್ರಮ ಮುಖ್ಯಸ್ಥೆ ಶ್ರೀಮತಿ ಸುಜಾತಾ ಈ ತಳವಾರ್, ಪತ್ರಕರ್ತ ಉದಯಕುಮಾರ್, ಕ್ಲಬ್ ನಿರ್ದೇಶಕರಾದ ರೋ. ಭುವನೇಶ್, ರೋ. ಸಿದ್ದ ನಂಜಪ್ಪ, ರೋ. ರಾಜೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಪ್ರಸನ್ನ ಆರ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೊತೆಗೆ ಕಾರಾಗೃಹದ ಎಲ್ಲಾ ಸಿಬ್ಬಂದಿ ಹಾಗೂ 250ಕ್ಕೂ ಹೆಚ್ಚು ಕಾರಾಗೃಹ ವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಟೀಮ್ ಸನ್ ರೈಸ್ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು.
