ಹಾಸನ ಮಾ.03(ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಭೂ ಸುರಕ್ಷಾ ಯೋಜನೆಯಡಿ ದಾಖಲೆಗಳ ಡಿಜಿಟಲೀಕರಣವನ್ನು ಕೂಡಲೇ ಪೂರ್ಣಗೊಳಿಸುವಂತೆ ಕಂದಾಯ ಇಲಾಖೆಯ ಹಾಗೂ ಮುಜರಾಯಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಮುಜರಾಯಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಪ್ರಗತಿ ಪರಿಶೀಲಿನಾ ಸಭೆ ನಡೆಸಿ ಮಾತನಾಡಿದರು.
ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ವೇಳೆಯಲ್ಲಿ ಎ.ಬಿ.ಸಿ.ಡಿ. ಯಾಗಿ ದಾಖಲೆಗಳನ್ನು ವರ್ಗೀಕರಿಸಿ ಸ್ಕ್ಯಾನ್ ಮಾಡಬೇಕು, ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿಕೊಂಡು ದಾಖಲೆಗಳನ್ನು ಡಿಜಿಟಲೀಕರಣ ಮಾಡಬೇಕು ಎಂದರು.
ಪೌತಿ ಖಾತೆ ಆಂದೋಲನದ ಸಮರ್ಪಕವಾಗಿ ಅನುಷ್ಠಾನ ಇದರಿಂದ ಸಾಮಾನ್ಯ ಜನರಿಗೆ ಅನುಕೂಲವಾಗುತ್ತದೆ ಹಾಗೂ ಜಿಲ್ಲೆಯಲ್ಲಿ ಬಾಕಿ ಇರುವ ಕಂದಾಯ ಗ್ರಾಮ ಗುರುತಿಸಿ ಕೂಡಲೇ ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದರು.
ಸರ್ಕಾರಿ ಜಮೀನು ಹಾಗೂ ಕೆರೆ ಒತ್ತುವರಿ ತೆರವಿಗೆ ಅಗತ್ಯ ಕ್ರಮವಹಿಸಬೇಕು, ತಾಲ್ಲೂಕುಗಳಿಗೆ ಅನುಮೋದನೆಯಾಗಿರುವ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆ ಹಾಗೂ ತಹಶೀಲ್ದಾರ್ ಕಚೇರಿಗೆ ಅನುಮೋದನೆಯಾಗಿರುವ ಹುದ್ದೆಗಳ ವಿವರ, ಖಾಲಿ ಇರುವ ಹುದ್ದೆಗಳ ವಿವರ ವರದಿಯನ್ನು ಸಲ್ಲಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿರುವ 2456 ದೇವಸ್ಥಾನಗಳ ಹೆಸರಿನಲ್ಲಿ ಅಧಿಸೂಚನೆ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಮುಜರಾಯಿ ಇಲಾಖೆ ಸೇರಿದ ದೇವಸ್ಥಾನ ಆಸ್ತಿಯನ್ನು ರಕ್ಷಣೆ ಮಾಡಬೇಕು ಎಂದು ತಿಳಿಸಿದರು.
ದೇವಸ್ಥಾನದ ಹೆಸರಿನಲ್ಲಿ ಅಧಿಸೂಚನೆ ಹೊರಡಿಸಲು ಪ್ರಸ್ತಾವನೆ ಸಲ್ಲಿಸುವ ಸಂದರ್ಭಗಳಲ್ಲಿ ಕಡ್ಡಾಯವಾಗಿ ದೇವಸ್ಥಾನದ ಹೆಸರು ಹಾಗೂ ವಿಳಾಸವನ್ನು ಪರಿಶೀಲಿಸಿ ಸಲ್ಲಿಸಬೇಕು ಹಾಗೂ ಅಧಿಸೂಚನೆ ಬಳಿಕವು ಪರಿಶೀಲಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನ ಆಸ್ತಿಗಳಿಗೆ ಇ-ಖಾತೆ ಹಾಗೂ ಜಮೀನು ಇದರೆ ಪಹಣಿ, ದೇವಸ್ಥಾನದ ಯಾವುದೇ ಆಸ್ತಿಗಳು ಒತ್ತುವರಿ ಆಗದಂತೆ ಅಧಿಕಾರಿ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು ಎಂದರು.
ಎಲ್ಲಾ ದೇವಸ್ಥಾನ ಹಾಗೂ ಆಸ್ತಿಗಳು ಸರ್ವೇ ಆಗಿರಬೇಕು, ಸರ್ವೇಯಾದ ನಂತರ ಒತ್ತುವರಿಯಾಗಿದ್ದರೇ ತೆರವು ಗೊಳಿಸಿ ತಂತಿ ಬೇಲಿ ಅಥವಾ ಕಾಂಪೌAಡ್ ನಿರ್ಮಾಣ ಮಾಡಿಕೊಳ್ಳುವಂತೆ ತಿಳಿಸಿದರು.
ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನಗಳಿಗೆ ಕಡ್ಡಾಯವಾಗಿ ದೇವಸ್ಥಾನ ಹೆಸರು, ವಿಳಾಸ ಯಾವ ದರ್ಜೆಯ ದೇವಸ್ಥಾನ ಎಂಬುದರ ನಾಮಫಲಕವನ್ನು ಅಳವಡಿಸಬೇಕು ಎಂದು ಸೂಚನೆ ನೀಡಿದರು.
ಮುಜರಾಯಿ ಇಲಾಖೆಯ ಆಯುಕ್ತರಾದ ಶರತ್ ಅವರು ಮಾತನಾಡಿ ಜಿಲ್ಲೆಯಲ್ಲಿ 6 ಎ ದರ್ಜೆಯ ದೇವಸ್ಥಾನ, 6 ಬಿ ದರ್ಜೆಯ ದೇವಸ್ಥಾನ ಹಾಗೂ 2,444 ಸಿ ದರ್ಜೆಯ ದೇವಸ್ಥಾನಗಳು ಇದ್ದು, 1,796 ದೇವಸ್ಥಾನಗಳು ಅಧಿಸೂಚನೆ ಹೊರಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಕೂಡಲೇ ಅಧಿಸೂಚನೆಗೆ ಕ್ರಮ ವಹಿಸಲಾಗುವುದು ಎಂದರು.
1562 ಮುಜರಾಯಿ ದೇವಸ್ಥಾನ ಹಾಗೂ ಆಸ್ತಿಗಳಲ್ಲಿ 691 ಪಹಣಿ, 808 ಗ್ರಾಮ ಠಾಣ ವ್ಯಾಪ್ತಿ ಹಾಗೂ 63 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಅವರು ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೇ ಮಾರ್ಚ್ ಅಂತ್ಯದೊಳಗೆ ಅರಕಲಗೂಡು,ಸಕಲೇಶಪುರ, ಆಲೂರು, ಅರಸೀಕೆರೆ ಹಾಗೂ ಹಾಸನ ಜಿಲ್ಲಾಧಿಕಾರಿಗಳ ಕಚೇರಿಯ ದಾಖಲೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 2308 ದೇವಸ್ಥಾನ ಹಾಗೂ ಆಸ್ತಿಗಳಿಗೆ ಖಾತೆ ಇದೆ 546 ಆಸ್ತಿಗಳ ಖಾತೆ ನಿರ್ವಹಣೆ ಬಾಕಿ ಇದೆ ಕೂಡಲೇ ಪೂರ್ಣ ಗೊಳಿಸಲಾಗುವುದು ಅದರಲ್ಲಿ 1562 ಮುಜರಾಯಿ ಸಂಸ್ಥೆ ದೇವಸ್ಥಾನ ಅಥವಾ ಆಸ್ತಿಗಳಿಗೆ ಧಾರ್ಮಿಕ ದತ್ತಿ ಇಲಾಖೆ ಎಂದು ನವೀಕರಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕರಾದ ಹೇಮಲತಾ ಹಾಗೂ ಎಲ್ಲಾ ತಹಸಿಲ್ದಾರ್ ಗಳು ಉಪಸ್ಥಿತರಿದ್ದರು
