ಬೆಂಗಳೂರು, ಫೆ.23: ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಪರಿಚಯವಾದ ಯುವತಿ ಮದುವೆಯಾಗುವುದಾಗಿ ನಂಬಿಸಿ, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿಸುವ ನೆಪದಲ್ಲಿ ಯುವಕನೊಬ್ಬರಿಂದ ₹21.22 ಲಕ್ಷ ವಂಚಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಟಿ. ದಾಸರಹಳ್ಳಿ ನಿವಾಸಿ ರಾಕೇಶ್ ವಂಚನೆಗೆ ಒಳಗಾದವರು. ಮ್ಯಾಟ್ರಿಮೋನಿ ಸೈಟ್ನಲ್ಲಿ ಶಿರೀಷ ಎಂಬ ಹೆಸರಿನಲ್ಲಿ ಪರಿಚಯವಾದ ಯುವತಿ, ಆರಂಭದಲ್ಲಿ ಸ್ನೇಹ ಬೆಳೆಸಿ ಬಳಿಕ ಮದುವೆಯಾಗುವ ಆಸೆ ತೋರಿಸಿದ್ದಾಳೆ ಎನ್ನಲಾಗಿದೆ. ನಂತರ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ದೊರೆಯುತ್ತದೆ ಎಂದು ನಂಬಿಸಿ, ತನ್ನಿಂದ ನೀಡಿದ ವೆಬ್ಸೈಟ್ ಲಿಂಕ್ ಮತ್ತು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು ಹೇಳಿದ್ದಾಳೆ.
ಆರಂಭದಲ್ಲಿ ಲಾಭ ಬರುತ್ತಿರುವಂತೆ ತೋರಿಸಿದ ಯುವತಿ, ಬಳಿಕ ಹಣ ವಿತ್ಡ್ರಾ ಮಾಡಲು ‘ಕಮಿಷನ್’ ಪಾವತಿಸಬೇಕು ಎಂದು ಹೇಳಿ ಹಂತ ಹಂತವಾಗಿ ಒಟ್ಟು ₹21.22 ಲಕ್ಷ ಹಾಕಿಸಿಕೊಂಡಿದ್ದಾಳೆ. ನಂತರ ಹೂಡಿಕೆ ಮಾಡಿದ ಹಣವೂ ಸಿಗದೆ, ಯುವತಿಯೂ ಸಂಪರ್ಕಕ್ಕೆ ಸಿಗದಿದ್ದಾಗ ಮೋಸ ನಡೆದಿರುವುದು ರಾಕೇಶ್ ಅವರಿಗೆ ತಿಳಿದುಬಂದಿದೆ.
ಈ ಸಂಬಂಧ ರಾಕೇಶ್ ಅವರು ಸಿಇಎನ್ ಪೊಲೀಸ್ ಠಾಣೆ ಉತ್ತರ ವಿಭಾಗದಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಮ್ಯಾಟ್ರಿಮೋನಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದವರು ಹಣ ಹೂಡಿಕೆ ಮಾಡಲು ಒತ್ತಾಯಿಸಿದರೆ ಜಾಗರೂಕರಾಗಬೇಕು. ಡಿಜಿಟಲ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದ್ದಾರೆ.