ಲಕ್ನೋ: ನಿನ್ನೆ ( ಮೇ 23 ) ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 42 ರನ್ಗಳ ಹೀನಾಯ ಸೋಲನ್ನು ಕಾಣುವ ಮೂಲಕ ಅಗ್ರಸ್ಥಾನಕ್ಕೇರುವ ಅವಕಾಶವನ್ನು ಕೈತಪ್ಪಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿರುವ ಸನ್ರೈಸರ್ಸ್ ಹೈದಾರಾಬಾದ್ ಇಶಾನ್ ಕಿಶನ್ ಅಬ್ಬರದ ಆಟದ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 231 ರನ್ ಕಲೆಹಾಕಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 232 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19.5 ಓವರ್ಗಳಲ್ಲಿ 189 ರನ್ಗಳಿಗೆ ಆಲ್ಔಟ್ ಆಯಿತು.
ಇನ್ನು ಸನ್ರೈಸರ್ಸ್ ಹೈದರಾಬಾದ್ ನೀಡಿದ್ದ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಆರ್ಸಿಬಿಗೆ ಕೊಹ್ಲಿ ಹಾಗೂ ಸಾಲ್ಟ್ ಜೋಡಿ ಅತ್ಯುತ್ತಮ ಆರಂಭವನ್ನೇ ಕಟ್ಟಿಕೊಟ್ಟಿತು. 7 ಓವರ್ಗಳಲ್ಲಿ 80 ರನ್ಗಳ ಜತೆಯಾಟವನ್ನಾಡಿದರು. ತಂಡ 15 ಓವರ್ಗೆ 167 ರನ್ ಕಲೆಹಾಕಿ ಕೇವಲ 3 ವಿಕೆಟ್ ಕಳೆದುಕೊಂಡಿತ್ತು. ಕೊನೆಯ 30 ಎಸೆತಗಳಲ್ಲಿ ಗೆಲ್ಲಲು 65 ರನ್ಗಳ ಅಗತ್ಯವಿತ್ತು ಹಾಗೂ ಕೈನಲ್ಲಿ 7 ವಿಕೆಟ್ಗಳಿದ್ದವು. ಆದರೂ ಸಹ ತಂಡ ಪಂದ್ಯವನ್ನು ಹೀನಾಯವಾಗಿ ಸೋತಿದೆ.
ಬೃಹತ್ ಆರಂಭ, ಕೊನೆಗೆ ಸುಲಭವಾಗಿ ಗೆಲ್ಲಬಹುದಾದ ಅವಕಾಶ, ಅದೂ ಸಹ ಇನ್ನೂ ವಿಕೆಟ್ಗಳು ಕೈನಲ್ಲಿದ್ದರೂ ಆರ್ಸಿಬಿ ಸೋತಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಆರ್ಸಿಬಿ ಫ್ರಾಂಚೈಸಿ ಮಾಡಿದ ತಪ್ಪುಗಳನ್ನು ನೆಟ್ಟಿಗರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.
ಈ ಪೈಕಿ ಹೆಚ್ಚು ಸದ್ದು ಮಾಡುತ್ತಿರುವುದು ಟಿಮ್ ಡೇವಿಡ್ ಅವರನ್ನು ಕಣಕ್ಕಿಳಿಸಿದ್ದು, ಹೌದು, ಫೀಲ್ಡಿಂಗ್ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡ ಟಿಮ್ ಡೇವಿಡ್ ಅವರನ್ನು ಆರ್ಸಿಬಿ ಬ್ಯಾಟಿಂಗ್ ಮಾಡಲು ಎಂಟನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಯಿತು. ಜಿತೇಶ್ ಶರ್ಮಾ ಔಟ್ ಆದ ಬೆನ್ನಲ್ಲೇ ಕಣಕ್ಕಿಳಿದ ಟಿಮ್ ಡೇವಿಡ್ ಉನಾದ್ಕತ್ ಎಸೆದ ಮೊದಲ ಎಸೆತದಲ್ಲಿ ಒಂದು ರನ್ ಕಲೆಹಾಕಿದ ಟಿಮ್ ಡೇವಿಡ್ ನಂತರದ ಓವರ್ನಲ್ಲಿ ಇಶಾನ್ ಮಲಿಂಗ ಎಸೆದ ಮೂರು ಎಸೆತಗಳಿಗೆ ರನ್ ಗಳಿಸಲಾಗಲಿಲ್ಲ. ಒಮ್ಮೆ ರನ್ ಓಡಬಹುದಿತ್ತಾದರೂ ಕಾಲು ನೋವಿನ ಕಾರಣ ಟಿಮ್ ರನ್ ಓಡಲಿಲ್ಲ. ಹೀಗೆ 5 ಎಸೆತಗಳನ್ನು ಎದುರಿಸಿದ ಟಿಮ್ ಡೇವಿಡ್ ಕೇವಲ ಒಂದು ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು.
ಹೀಗೆ ರನ್ ಓಡುವುದಕ್ಕೂ ಸಹ ಕಷ್ಟಪಡುತ್ತಿದ್ದ ಆಟಗಾರನನ್ನು ಆರ್ಸಿಬಿ ಕಣಕ್ಕಿಳಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಂತಹ ನಿರ್ಧಾರ ತೆಗೆದುಕೊಂಡ ಆರ್ಸಿಬಿಗೆ ನಾಚಿಕೆ ಆಗಬೇಕು ಎಂದು ಟ್ವೀಟ್ ಮಾಡಿ ಟೀಕಿಸಿದ್ದಾರೆ. ಕೆಲವರು ಟಿಮ್ ಡೇವಿಡ್ ಗಾಯಕ್ಕೊಳಗಾಗಿದ್ದಾರೆ ಎಂದು ತಿಳಿದ ಕೂಡಲೇ ಜೇಕಬ್ ಬೆಥೆಲ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಬಹುದಿತ್ತು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ರಜತ್ ಪಟಿದಾರ್ ಕಡೆಯಿಂದ ಏನೂ ದೊಡ್ಡ ಕೊಡುಗೆ ಬರಲಿಲ್ಲವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
