ಇತ್ತೀಚಿನ ದಿನಗಳಲ್ಲಿ ಜೀವನದ ದುಬಾರಿತನ, ಸಮಯದ ಕೊರತೆ ಮತ್ತು ಬದಲಾಗುತ್ತಿರುವ ಕುಟುಂಬ ವ್ಯವಸ್ಥೆ ಪೋಷಕರನ್ನು ಹೋರಾಟದ ದಾರಿಗೆ ಒಯ್ಯುತ್ತಿದೆ. ಗಂಡು-ಹೆಣ್ಣು ಇಬ್ಬರೂ ಸಮಾನವಾಗಿ ದುಡಿಯುತ್ತಿರುವ ಈ ಕಾಲದಲ್ಲಿ, ಮಕ್ಕಳನ್ನು ಹೆತ್ತು, ಸಲಹಿ ಅವರ ಖುಷಿಗಾಗಿ ದುಬಾರಿ ಆಟಿಕೆಗಳನ್ನು ತಂದು ಕೊಟ್ಟು ಅವರನ್ನು ಖುಷಿಪಡಿಸಿದರೆ ಸಾಕೇ ? ಆಟಿಕೆಗಳು ಮಕ್ಕಳ ಬೆಳವಣಿಗೆಗೆ ಪೂರಕವೇ ? ಪೋಷಕರಾಗಿ ನಾವುಗಳು ಕೇವಲ ಹಣದಿಂದ ತಂದು ಕೊಡುವ ಉಡುಗೊರೆಗಳೇ ಮಕ್ಕಳಿಗೆ ಎಲ್ಲ ರೀತಿಯ ಖುಷಿಯನ್ನು ಕೊಡುತ್ತದೆ ಎಂದು ತಿಳಿದುಕೊಂಡಿದ್ದರೇ ಅದು ನಿಜಕ್ಕೂ ನಮ್ಮ ಮೂರ್ಖತನವೇ ಸರಿ….! ಹಾಗದರೇ ಹಣದಿಂದ ಖರೀದಿಸಲಾಗದ ಉಡುಗೊರೆಯೊಂದು ಇದೆಯೇ ? ಖಂಡಿತ ಇದೆ.
” ಪರಿಪೂರ್ಣ ಉಡುಗೊರೆ ಎಂದರೆ ಬಣ್ಣಬಣ್ಣದ ಕಾಗದದಲ್ಲಿ ಹುದುಗಿಸಿ, ಬೊಟ್ಟಿಯಿಂದ ಅಲಂಕೃತಗೊಂಡಿರುತ್ತೆ… ತುಂಬಾ ಚಂದವಾದ ಉಡುಪುಗಳು, ಬಣ್ಣ ಬಣ್ಣದ ಆಟಿಕೆಗಳು, ತಾನು ಹೇಳಿದಂತೆ ಕೇಳುವ ಗೊಂಬೆಗಳು, ರಿಮೋಟ್ ನಿಯಂತ್ರಣದ ಕಾರುಗಳು, ಈ ಕಾಲದ ಎಲೆಕ್ಟ್ರಾನಿಕ್ ಉಪಕರಣಗಳಾದ ಟ್ಯಾಬ್ಲೆಟ್ ಅಥವಾ ಹಾಟ್-ಫೇವರಿಟ್ ಗ್ಯಾಜೆಟ್. ಈ ಮುಂತಾದ ಬೆಲೆ ಬಾಳುವ ವಸ್ತುಗಳೇ, ಉತ್ತಮ ಉಡುಗೊರೆಗಳು ಎಂದು ಇತ್ತೀಚಿನವರೆಗೂ ನಾನು ಭಾವಿಸಿದ್ದೆ.
ಆದರೆ ವರ್ಷಗಳು ಕಳೆದಂತೆ, ಅವರು ಬೆಳೆಯುವುದು, ಅವರು ಜಾರುವುದು, ಅವರ ಪ್ರತಿಕ್ರಿಯೆಗಳು, ಅವರ ಅನಿಸಿಕೆಗಳು, ಅವರ ಆಲೋಚನೆಗಳು, ನನ್ನನ್ನು ಅಚ್ಚರಿಗೊಳ್ಳುವಂತೆ ಮಾಡಿತು ಹಾಗೂ ನನ್ನ ಅಂತರಂಗದಲ್ಲಿ ಹೊಸ ಅರಿವೊಂದು ಮೂಡಿತು.
ನಾನು ನನ್ನ ಮಕ್ಕಳಿಗೆ ನೀಡಿರುವ ಅತಿ ಅರ್ಥಪೂರ್ಣ ಉಡುಗೊರೆಗಳು ಎಂದಿಗೂ ಅಂಗಡಿಯಿಂದ ಬಂದಿಲ್ಲ. ಅವು ನನ್ನಿಂದ ಬಂದಿವೆ – ನನ್ನ ಸಮಯದಿಂದ, ನನ್ನ ಗಮನದಿಂದ, ಮತ್ತು ಅವರ ಗೊಂದಲಭರಿತವಾದ, ಅಂದದ ಬಾಲ್ಯ ಪಯಣದ ನಡುವೆ ನಾನು ಕೊಡುತ್ತಿರುವ ಆ ಶ್ರದ್ಧೆಯ ಸಾನ್ನಿಧ್ಯದಿಂದ.
ಹೌದು.. “ಪರಿಪೂರ್ಣ ಉಡುಗೊರೆ” – ನಮಲ್ಲಿ ಇಲ್ಲದಿರುವುದೇನೋ ಅಲ್ಲ. ನಾವು ಪ್ರತಿಯೊಬ್ಬರೂ ಅದನ್ನು ನೀಡಬಲ್ಲೆವು. ಅವುಗಳೆಂದರೇ…
1. “ಉಪಸ್ಥಿತಿಯ ಉಡುಗೊರೆ”
ಒಂದು ರಾತ್ರಿ ನನ್ನ ಮಗ ನಿದ್ರೆ ಬಾರದೆ ಚಡಪಡಿಸುತ್ತಿದ್ದುದ್ದನ್ನು ನೋಡಿದೆ. ಅವನ ಮೆದುಳಲ್ಲಿ ಏನೋ ಚಿಂತೆ ಓಡಾಡುತ್ತಿತ್ತು – ಅವನಿಗೂ ಅದು ಸ್ಪಷ್ಟವಾಗಿರಲಿಲ್ಲ. ನಾನು ಅವನ ಹಾಸಿಗೆಯ ಪಕ್ಕದಲ್ಲಿ ಕುಳಿತುಕೊಂಡೆ. ಅವನ ತಲೆಯನ್ನು ಸವರುತ್ತಾ ಏನೂ ಹೇಳದೆ ಸುಮ್ಮನೆ ಕುಳಿತುಬಿಟ್ಟೆ. ಅಲ್ಲಿ ಅವನಿಗೆ ಅಷ್ಟೇ ಸಾಕಾಗಿತ್ತು. ಅಂದಿನ ರಾತ್ರಿ ನಾನು ಅವನಿಗೆ ಏನು ಸಲಹೆ ನೀಡಲಿಲ್ಲ. ಬರಿ ನನ್ನ ಉಪಸ್ಥಿತಿಯನ್ನು ಮಾತ್ರ ನೀಡಿದೆ. ಅಂದರೆ ಆ ಸಂದರ್ಭದಲ್ಲಿ ಅವನಿಗೆ ಬೇಕಾದದ್ದು ಕೂಡ ಅದೇ.
ಮಕ್ಕಳಿಗೆ ಯಾವಾಗಲೂ ಉತ್ತರ ಬೇಕಾಗಿಲ್ಲ ಅವರಿಗೆ ಬೇಕಾದದ್ದು ನಾವು ಮಾತ್ರ. ಶಾಂತವಾಗಿ ಗಮನಹರಿಸುವ ಮತ್ತು ಅವರ ಸಂಕಷ್ಟಗಳಲ್ಲಿ ಜೊತೆಗಿರಬೇಕು.
2.”ಅಭಿವ್ಯಕ್ತಿಗೆ ಅವಕಾಶ ನೀಡುವ ಉಡುಗೊರೆ”
ಒಂದು ದಿನ ನನ್ನ ಮಗ ಕೋಪದಿಂದ ಕಣ್ಣೀರು ಹಾಕುತ್ತಿದ್ದ. ನನಗೆ ಅದು ಸಣ್ಣ ವಿಚಾರವಾಗಿ ತೋರಿತ್ತಾದರೂ, ಅವನಿಗೆ ಅದು ದೊಡ್ಡದಾಗಿತ್ತು. “ಇದು ಅಷ್ಟು ಮಹತ್ವದ್ದೇನು ಅಲ್ಲ” ಎಂದು ಹೇಳಲು ಹೋದ ನಾನು, ಅಲ್ಲಿಯೇ ನಿಲ್ಲಿಸಿಬಿಟ್ಟೆ. ಬದಲಿಗೆ ಅವನನ್ನೇ, ಕೇಳಿದೆ “ನೀನು ತುಂಬಾ ಕೋಪಗೊಂಡಿರುವಂತೆ ತೋರುತ್ತಿದೆ. ಏನಾಯ್ತು ?” ಎಂದೇ, ಅವನು ತಲೆ ಕೆಳಗೆ ಮಾಡಿ, ಮುಂದೆ ಮಾತಿನ ಹೊಳೆಯನ್ನೇ ಹರಿಸಿಬಿಟ್ಟ. ಅವನ ಭಾವನೆಗಳನ್ನು ತಳ್ಳಿಹಾಕದೇ, ಖಂಡನೆ ಮಾಡದೇ, ಕೇಳಿದಾಗ ಅವನು ನಿಸ್ಸಂಕೋಚವಾಗಿ ಬಿಚ್ಚಿಟ್ಟ.
ಮಕ್ಕಳ ಭಾವನೆಗಳನ್ನು ತಳ್ಳಿ ಹಾಕದೆ, ಅವುಗಳನ್ನು ಅಂಗೀಕರಿಸಬೇಕು. ಅದು ಅವರ ಆತ್ಮವಿಶ್ವಾಸಕ್ಕೆ ನಾವು ಹಾಕುವ ತಳಪಾಯ.
3. ಪ್ರೀತಿಯಿಂದ “ಇಲ್ಲ” ಎನ್ನುವ ಉಡುಗೊರೆ
ಮಕ್ಕಳು ಕೇಳಿದ್ದನ್ನು ಬಯಸಿದ್ದನ್ನು ಆಲೋಚಿಸಿದ್ದನ್ನು ಪೂರ್ಣವಾಗಿ ಪುರಸ್ಕರಿಸಬೇಕೆ, ? ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡುತ್ತದೆ. ಇಲ್ಲಿ ಕೇಳಿದ ಎಲ್ಲವನ್ನು ಅವರಿಗೆ ನೀಡಲು ಸಾಧ್ಯವಿಲ್ಲ. ಆದರೆ ಅದು ಏಕೆ ಸಾಧ್ಯವಿಲ್ಲ? ಎಂಬುದನ್ನು ಮೃದುವಾದ ಶಬ್ದದಲ್ಲಿ ತಿಳಿಸಿ ಹೇಳಬೇಕು. “ಇಲ್ಲ” ಎನ್ನುವ ಅರ್ಥಪೂರ್ಣವಾದ ನಿರಾಕರಣೆ ಇರಬೇಕು. ಅಂದರೆ “ಮಿತಿ ಎನ್ನುವುದು ಶಿಕ್ಷೆಯಲ್ಲ ಬದಲಾಗಿ ರಕ್ಷಣೆ” ಎಂಬುದನ್ನು ಅವರಿಗೆ ಮನವರಿಕೆ ಮಾಡಬೇಕು.
ಮಕ್ಕಳಿಗೆ ಗಡಿಗಳು ಬೇಕೆ ಹೊರತು ಕಠಿಣ ನಿಯಮಗಳಲ್ಲ. ನಾವು ಪ್ರೀತಿಯಿಂದ ಕಟ್ಟಿದ ನಿರಂತರ ದಿಕ್ಕು ತೋರಿಸುವ ಗಡಿಗಳು ಅದರಿಂದ ಅವರು ಭದ್ರತೆಯನ್ನು ಅನುಭವಿಸುತ್ತಾರೆ.
4. “ಸ್ವತಂತ್ರತೆಯ ಸಣ್ಣ ಉಡುಗೊರೆ”
ನನ್ನ ಮಗಳು ಒಂದು ದಿನ ತನ್ನ ‘ಶೂ’ ಲೇಸ್ ನ್ನು ಕಟ್ಟಿಕೊಳ್ಳಲೂ ಆಗದೆ, ಸರಿ ಮಾಡಿಕೊಳ್ಳಲು ಆಗದೆ, ತುಂಬಾ ಕಷ್ಟ ಪಡುತ್ತಿದ್ದಳು. ನಾನು ಆ ಕೆಲಸದಲ್ಲಿ ಕೈಜೋಡಿಸಲು, ಆಲೋಚಿಸಿ ಸುಮ್ಮನಾದೆ. ನಂತರ ಅವಳು ಏನು ಮಾಡಬೇಕು ಎಂದಷ್ಟೇ ತಿಳಿಸಿದೆ, ಹಾಗೂ ಅದನ್ನು ಸರಿಪಡಿಸಿಕೊಳ್ಳಲು, ಸ್ವಾತಂತ್ರ್ಯ ಅವಕಾಶ ಹಾಗೂ ಸಮಯವನ್ನೂ ನೀಡಿದೆ. ಅವಳು ಪ್ರಯತ್ನಸಿ, ಕೊನೆಗೆ ಸರಿಯಾಗಿ ಶೂ’ ಲೇಸ್ ನ್ನು ಕಟ್ಟಿಕೊಂಡಳು. ನಾನು ಮಾಡಿದ್ದಿಷ್ಟೇ ಇಲ್ಲಿ, “ನಿನ್ನ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ” ಎಂಬ ಮೌನ ಸಂದೇಶವನ್ನು ನೀಡಿದ್ದು.
“ಮಕ್ಕಳ ಸ್ವತಂತ್ರ ಪ್ರಯತ್ನಗಳಿಂದ ಅವರಿಗೆ ಪ್ರಜ್ಞೆ ,ಆತ್ಮವಿಶ್ವಾಸ ಹಾಗೂ ಜವಾಬ್ದಾರಿತನ ಮೂಡಿ ಸಂತೋಷವನ್ನು ಉಂಟು ಮಾಡುತ್ತದೆ ಮತ್ತು ತಿದ್ದುಕೊಳ್ಳುವ ಶಕ್ತಿಯನ್ನು ಬೆಳೆಸುತ್ತದೆ.
5. “ಆಟದ ಉಡುಗೊರೆ”
ನಾನು ಕೊಡುವ, ಮತ್ತೊಂದು ಕಡಿಮೆ ಮೌಲ್ಯಮಾಡಲಾದ, ಆದರೆ ಅತ್ಯಂತ ಅಮೂಲ್ಯ ಉಡುಗೊರೆ ಎಂದರೆ – ಆಟ. ಯೋಜಿತ ಚಟುವಟಿಕೆಗಳು ಅಥವಾ “ಉತ್ಪಾದಕ” ಹವ್ಯಾಸಗಳು ಅಲ್ಲ; ಬದಲಿಗೆ ನಿಯಮವಿಲ್ಲದ, ನಿರ್ಬಂಧವಿಲ್ಲದ, ಹಾಸ್ಯಭರಿತ ಆಟ.
ಅದರಲ್ಲಿ ಸಮಯದ ಅಸ್ತಿತ್ವವಿಲ್ಲದಂತೆ ಅನಿಸುತ್ತದೆ. ಮನೆಯ drawing room ಅರಣ್ಯವಾಗುತ್ತದೆ ಅಥವಾ ರಾಕೆಟ್ಶಿಪ್ ಆಗಿ ಪರಿವರ್ತನೆಯಾಗುತ್ತದೆ. ನಾನು ಅವರ ಜೊತೆಗೆ—even ಹತ್ತು ನಿಮಿಷದ ಮಟ್ಟಿಗೆ—ಆಟಕ್ಕೆ ಸೇರುವಾಗ, ನನ್ನ ಅಂತರಾಳದಲ್ಲಿ ಏನೋ ಹೊಳಪು ಮೂಡುತ್ತದೆ.
ಬಾಲ್ಯ ಎಷ್ಟು ಖುಷಿಯುಂದ ತುಂಬಿರುತ್ತದೆ, ಎಂಬುದನ್ನು ಮರೆತು ಹೋಗಿದ್ದ ನೆನಪುಗಳೆಲ್ಲ ಮರುಜೀವ ಪಡೆಯುತ್ತವೆ. ಅಂಥಾ ಆನಂದ – ಅದು ಮಗುಗೇ ಮಾತ್ರವಲ್ಲ, ನನಗೂ ಔಷಧವಾಗಿ ಪರಿಣಮಿಸುತ್ತದೆ.
6. ಒಟ್ಟಾರೆಯಾಗಿ ನಿಜವಾದ ಉಡುಗೊರೆ ಎಂದರೇನು ?
ದಿನದ ಅಂತ್ಯದ ವೇಳೆಗೆ, ನಮ್ಮ ಮಕ್ಕಳು ಬಹುಶಃ ನಾವು ಕೊಟ್ಟ ಅತಿ ಕಿಂಚಿತ್ತಾದ ಆಟಿಕೆಗಳನ್ನು ನೆನಪಿಟ್ಟುಕೊಳ್ಳುವುದಿಲ್ಲ.
ಆದರೆ, ನಾನು ನಗುತ್ತಿದ್ದಾಗ ಅವರ ಮುಖದಲ್ಲಿದ್ದ ಮಂದಹಾಸ… ಅವರು ಭಯಪಟ್ಟಾಗ ನನ್ನ ಕಣ್ಣುಗಳಲ್ಲಿ ಕಾಣಿಸಿದ್ದ ಭರವಸೆ… ರಾತ್ರಿ ಮೌನವಾಗಿ ಹಾಸಿಗೆಯ ಪಕ್ಕದಲ್ಲಿ ನಾನು ಕುಳಿತುಕೊಂಡಿದ್ದ ಸನ್ನಿವೇಶಗಳಲ್ಲಿ. ಅಂದರೆ ನಮ್ಮ ನಗು,ನಮ್ಮ ಸ್ಪರ್ಶದ ಬಿಸಿ, ಅವರೊಂದಿಗೆ ಪಾಠವಿಲ್ಲದ ಮೌನ ಹಾಗೂ ನಮ್ಮ ಮಮತೆ, ಇವೆಲ್ಲ ನಿಜವಾದ ಉಡುಗೊರೆಗಳಾಗಿ, ಅವರು ತಾವು ಯಾರು ಎಂಬುದರಿಂದಲೇ ಅವರಿಗೆ ಮೌಲ್ಯವಿದೆ ಎಂಬ ಭಾವನೆ ಮೂಡುತ್ತದೆ. ಇದೇ ಅಲ್ಲವೇ ಜೀವನದ ಶ್ರೇಷ್ಠ ಉಡುಗೊರೆ.
ಇಂದಿನ ಉದ್ದೋಗಸ್ಥ ಪೋಷಕರು ಇಲ್ಲಿ ಎಡವುತ್ತಿದ್ದಾರೆ, ತಮ್ಮ ಉಪಸ್ಥಿತಿಯನ್ನು ಬಿಟ್ಟು ಬೇರೆಲ್ಲವನ್ನು ಕೊಡುತ್ತಿದ್ದಾರೆ. ದುಡ್ಡು ಎಲ್ಲವನ್ನು ಕೊಳ್ಳಲು ಸಾಧ್ಯವಿಲ್ಲವೆನ್ನುವ ಅಂಶ ತಿಳಿದಿದ್ದರು, ಕೆಲಸ, ದುಡ್ಡು ದುಡಿಮೆ ಎನ್ನುವ ಹೊರೆಯಲ್ಲಿ ತಮ್ಮ ಮಕ್ಕಳಿಗೆ ಮುಖ್ಯವಾಗಿ ಬೇಕಾಗಿರುವಂತ ನಮ್ಮ ಉಪಸ್ಥಿತಿಯ ಉಡುಗೊರೆಯನ್ನು ಕೊಡುವುದನ್ನೇ ಮರೆಯುತ್ತಿದ್ದಾರೆ ಎಂದರೆ ತಪ್ಪಿಲ್ಲ.
ಹಾಗೆ ನೋಡಿದರೆ ಪರಿಪೂರ್ಣ ಉಡುಗೊರೆ ಅಂಗಡಿಯಲ್ಲಿ ಅಥವಾ ಬಾಹ್ಯ ಪ್ರಪಂಚದಲ್ಲಿ ಸಿಗುವುದಿಲ್ಲ ಅದು ಆಳ ಸಮುದ್ರದಲ್ಲಿ ಸಿಗುವ ಮುತ್ತಿನಂತೆ ಅಂತರಂಗದ ಮನಸ್ಸಿನಲ್ಲಿರುತ್ತದೆ ಅದುವೇ ನಮ್ಮ ಪ್ರೀತಿ,ಮಮತೆ, ಕಾಳಜಿಯಲ್ಲಿ ಇರುತ್ತದೆ ಇದನ್ನು ನಾವು ಪ್ರತಿದಿನ ಪ್ರತಿ ಕ್ಷಣ ಹೊರ ತಂದು ಹಂಚಬೇಕು ಅಷ್ಟೇ…
- ಪ್ರೀತಿ ಮನು ನಾಗೇಶ್ .

