ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇಡೀ ಜಗತ್ತಿಗೆ ಆತಂಕ ತಂದಿದೆ. ದಿನಂಪ್ರತಿ ನಡೆಯುತ್ತಿರುವ ದಾಳಿ, ಪ್ರತಿದಾಳಿಗಳು ಒಂದೆಡೆಯಾದರೆ, ಇನ್ನೊಂದೆಡೆ ತೈಲ ಸರಬರಾಜಿನ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿವೆ. ಈ ಮಧ್ಯೆ ಕೊಲ್ಲಿ ಪ್ರದೇಶಗಳ ಜೀವನಾಡಿಯಾದ ಹೊರ್ಮುಜ್ ಜಲಮಾರ್ಗವನ್ನು ಇರಾನ್ ಮುಚ್ಚುವುದಾಗಿ ಬೆದರಿಕೆ ಹಾಕುತ್ತಿರುವುದು ತೈಲಕ್ಕಾಗಿ ಕೊಲ್ಲಿ ರಾಷ್ಟ್ರಗಳನ್ನೇ ನೆಚ್ಚಿಕೊಂಡಿರುವ ದೇಶಗಳ ಆತಂಕಕ್ಕೆ ಕಾರಣವಾಗಿದೆ.
ಹಾಗಾದರೆ ಹೊರ್ಮುಜ್ ಜಲಸಂಧಿಯ ಮಹತ್ವವೇನು? ಜಗತ್ತಿನ ತೈಲ ಪೂರೈಕೆಯಲ್ಲಿ ಇದರ ಪಾತ್ರವೇನು? ಪರಿಣಾಮಗಳೇನು?
ಬೆದರಿಕೆ ಒಡ್ಡಿದ ಇರಾನ್
ಇರಾನ್ ತನ್ನ ಮಿತ್ರರಾದ ಪ್ಯಾಲೆಸ್ತೀನ್ನ ಹಮಾಸ್, ಲೆಬನಾನ್ನ ಹೆಜ್ಬುಲ್ಲಾ, ಸಿರಿಯಾದ ಅಲ್ ಬಶರ್ ಪ್ರಭುತ್ವ (ಈಗಿಲ್ಲ), ಯೆಮನ್ನ ಹೌತಿಗಳು ಮತ್ತು ಇರಾಕ್ನ ಶಿಯಾ ಪ್ರಾಬಲ್ಯದ ಆಯಕ್ಸಿಸ್ ಆಫ್ ರೆಸಿಸ್ಟೆನ್ಸ್ ಮಟ್ಟ ಹಾಕಿರುವ ಇಸ್ರೇಲ್ ಈಗ ಇರಾನ್ ಮೇಲೆ ಮುಗಿಬಿದ್ದಿದೆ. ಒಂದೇ ರಾತ್ರಿ ಹಲವಾರು ಸೇನಾ ನಾಯಕರು ಮತ್ತು ಅಣು ವಿಜ್ಞಾನಿಗಳು ಹತ್ಯೆಗೈದು ಇರಾನ್ ದೇಶದ ಇಡೀ ವಾಯುಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇಸ್ರೇಲ್ ಪೆಟ್ಟಿನಿಂದ ಸುಧಾರಿಸಿಕೊಂಡು ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವಲ್ಲಿ ಕೂಡ ಇರಾನ್ ಒಂದು ಮಟ್ಟಿಗೆ ಯಶಸ್ವಿಯಾಗಿದೆ.

ಜೊತೆಗೆ ಇಸ್ರೇಲ್ನನ್ನು ಬೆಂಬಲಿಸುತ್ತಿರುವ ಜಗತ್ತಿನ ಪ್ರಮುಖ ದೇಶಗಳಿಗೆ ಬಿಸಿ ಮುಟ್ಟಿಸಲು ವಿಶ್ವದ 5ನೇ ಒಂದು ಭಾಗ ತೈಲ, ಅನಿಲ ಸಾಗಣೆ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಮುಚ್ಚಲು ಮುಂದಾಗಿದೆ. ಇದು ಜಗತ್ತಿನಲ್ಲಿ ತೈಲಾತಂಕಕ್ಕೆ ಕಾರಣವಾಗಿದೆ. ಇರಾನ್ನ ಈ ಆಲೋಚನೆ, ತಮ್ಮ ನಿತ್ಯದ ಬಳಕೆಯ ತೈಲ ಮತ್ತು ಅನಿಲಕ್ಕಾಗಿ ಕೊಲ್ಲಿ ರಾಷ್ಟ್ರಗಳನ್ನೇ ನೆಚ್ಚಿಕೊಂಡಿರುವ ಭಾರತ ಸೇರಿದಂತೆ ಜಗತ್ತಿನ ಪ್ರಮುಖ ರಾಷ್ಟ್ರಗಳ ತಲ್ಲಣಕ್ಕೆ ಕಾರಣವಾಗಿದೆ.
ಎಲ್ಲಿದೆ ಹೊರ್ಮುಜ್ ಜಲಸಂಧಿ?
ಪರ್ಶಿಯನ್ ಕೊಲ್ಲಿಗೆ ಹೊರ್ಮುಜ್ ಜಲಸಂಧಿ ಏಕೈಕ ಮಾರ್ಗವಾಗಿದೆ. ಈ ಜಲಸಂಧಿಯ ಒಂದು ಕಡೆ ಇರಾನ್, ಮತ್ತೂಂದೆಡೆ ಒಮಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಹರಡಿಕೊಂಡಿವೆ. ಇದು ಪರ್ಶಿ ಯನ್ ಕೊಲ್ಲಿಯನ್ನು ಒಮಾನ್ ಕೊಲ್ಲಿಗೆ ಮತ್ತು ಹಿಂದೂ ಮಹಾಸಾಗರದಲ್ಲಿ ಅರಬಿ ಸಮುದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದು ಕೇವಲ 33 ಕಿಲೋ ಮೀಟರ್ ಅಗಲದ ಅತಿ ಕಿರಿದಾದ ಜಲಸಂಧಿಯಾಗಿದೆ. ಆದರೆ ಜಲಮಾರ್ಗದ ಹಡಗು ಮಾರ್ಗಗಳು ಇನ್ನೂ ಕಿರಿದಾ ಗಿದೆ. ಒಂದು ಆಗಮನ ಮತ್ತು ನಿರ್ಗಮನ ಮಾರ್ಗ ಗಳಿದ್ದು ಅವೂ ಕೇವಲ 3 ಕಿಲೋ ಮೀಟರ್ ಮಾತ್ರ ಅಗಲ ವಾಗಿವೆ. ಹಾಗಾಗಿ ಇದು ದಾಳಿಗಳ ಮತ್ತು ಮುಚ್ಚುವ ಬೆದರಿಕೆಗಳಿಗೆ ಸದಾಕಾಲ ಗುರಿಯಾಗುತ್ತಲೇ ಇರುತ್ತದೆ.
ಹೊರ್ಮುಜ್ ಜಲಸಂಧಿ ಮುಚ್ಚಿದರೆ ಏನಾಗುತ್ತದೆ?
ಒಂದು ವೇಳೆ ಇರಾನ್ ಹೊರ್ಮುಜ್ ಜಲಸಂಧಿ ಮುಚ್ಚುವ ದುಸ್ಸಾಹಸಕ್ಕೆ ಇಳಿದರೆ ಜಗತ್ತಿನ ಶೇ.20ರಷ್ಟು ತೈಲ ಪೂರೈಕೆ ಸ್ಥಗಿತಗೊಳ್ಳುತ್ತದೆ. ಪರ್ಶಿಯನ್ ಕೊಲ್ಲಿ ತೀರದಲ್ಲಿರುವ ಸೌದಿ ಅರೇಬಿಯಾ, ಯುಎಇ, ಒಮಾನ್, ಬಹ್ರೈನ್, ಕತಾರ್, ಕುವೈಟ್, ಇರಾಕ್, ಇರಾನ್ನ ದೇಶಗಳಿದ್ದು ಈ ಮಾರ್ಗದ ಮೂಲಕವೇ ಜಗತ್ತಿನ ವಿವಿಧ ದೇಶಗಳಿಗೆ ಶೇ.90ರಷ್ಟು ತೈಲ ಸರಬರಾಜಾಗುತ್ತಿದ್ದು ಇದು ಬಂದ್ ಆಗುತ್ತದೆ. ಜಗತ್ತಿನ 2ನೇ ದೊಡ್ಡ ಆರ್ಥಿಕತೆಯಾದ ಚೀನ ಇಲ್ಲಿನ ಶೇ.50ರಷ್ಟು ತೈಲದ ಮೇಲೆ ಅವಲಂಬಿತವಾಗಿದೆ. ಜಪಾನ್ ಶೇ.95 ಮತ್ತು ದಕ್ಷಿಣ ಕೊರಿಯಾ ಶೇ.71ರಷ್ಟು ಇಲ್ಲಿನ ತೈಲವನ್ನೇ ನೆಚ್ಚಿಕೊಂಡಿದೆ. ಜಗತ್ತಿನ ಬಳಕೆಯ ಶೇ.6ರಷ್ಟು ತೈಲ ಉತ್ಪಾದಿಸುವ ತೈಲಾಗಾರ ಸೌದಿ ಅರೇಬಿಯಾದಲ್ಲಿದೆ. ಇರಾನ್ ವಿಶ್ವದಲ್ಲೇ ಅತೀ ಹೆಚ್ಚು ತೈಲ ನಿಕ್ಷೇಪವನ್ನು ಹೊಂದಿದೆ. ಜಗತ್ತಿನ ಅತ್ಯಧಿಕ ಧ್ರುವೀಕೃತ ಅನಿಲವನ್ನು ಕತಾರ್ ಉತ್ಪಾದಿಸುತ್ತದೆ.
ಜಗತ್ತಿನ ತೈಲಾತಂಕವೇನು?
ಇರಾನ್-ಇಸ್ರೇಲ್ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ಜಗತ್ತಿನ ತೈಲ ಮಾರು ಕಟ್ಟೆ ಗಳು ಭಯಭೀತವಾಗಿವೆ. ಇರಾನ್ ಮಿಲಿಟರಿ ಮತ್ತು ಪರಮಾಣು ನೆಲೆಗಳ ಮೇಲೆ ಇಸ್ರೇಲ್ ನಡೆಸಿದ ದಾಳಿ ಮತ್ತು ಇರಾನ್ ಪ್ರತೀಕಾರವು ಈಗಾಗಲೇ ಹದಗೆಟ್ಟಿರುವ ಜಾಗತಿಕ ಪೂರೈಕೆ ಸರಪಳಿಗಳನ್ನು ಅಲುಗಾಡಿಸಿದೆ. ಹೊರ್ಮುಜ್ ಜಲಸಂಧಿಯಂತಹ ಪ್ರಮುಖ ವ್ಯಾಪಾರ ಮಾರ್ಗಗಳು ಘರ್ಷಣೆಯಲ್ಲಿ ಸಿಲುಕಿಕೊಳ್ಳ ಬಹುದೆಂಬ ಆತಂಕ ಹೆಚ್ಚುತ್ತಿರುವ ನಡುವೆಯೇ ತೈಲ ಕಂಪೆನಿಗಳು, ಹಡಗು ಸಂಸ್ಥೆಗಳ ಮತ್ತು ನಿಯಂತ್ರಕ ಸಂಸ್ಥೆಗಳು ಪರದಾಡುತ್ತಿವೆ. ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಆತಂಕದ ಅಲೆಗಳು ಸೃಷ್ಟಿಯಾಗಿದ್ದು ತೈಲದ ಬೆಲೆಯೂ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾನದಂಡವೆಂದು ಪರಿಗಣಿಸಲಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು ಶೇ.5ಕ್ಕೂ ಹೆಚ್ಚಾಗಿದೆ. ಇದು ಜಾಗತಿಕವಾಗಿ, ವಿಶೇಷವಾಗಿ ಹಣದುಬ್ಬರದ ಒತ್ತಡವನ್ನು ಹೆಚ್ಚಿಸಬಹುದು. ಈಗಾಗಲೇ ಜಗತ್ತಿನ ಷೇರು ಮಾರುಕಟ್ಟೆಗಳು ಸತತವಾಗಿ ಕುಸಿಯತ್ತಿವೆ. ಗಲ್ಫ್ ತೈಲದ ಮೇಲೆ ಅವಲಂಬಿತವಲ್ಲದ ದೇಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಇರಾನ್ ಜಾಗತಿಕ ತೈಲ ಪೂರೈಕೆಯ ಮಹತ್ವದ ಭಾಗವಾಗಿರುವುದರಿಂದ ಪೆಟ್ರೋಲಿಯಂ ಮತ್ತು ಅದರ ಇತರ ಉತ್ಪನ್ನಗಳ ಬಳಕೆಯ ಮೇಲೆ ಜಗತ್ತಿನಾದ್ಯಂತ ಪರಿಣಾಮ ಬೀರುತ್ತದೆ. ಆದರೆ ಇರಾನ್ನ ತೈಲ ಮೂಲ ಸೌಕರ್ಯದ ಮೇಲೆ ಯಾವುದೇ ತೀವ್ರ ತರದ ದಾಳಿ ಮಾಡುವುದರಿಂದ ಇಸ್ರೇಲ್ ದೂರವಿದೆ. ಒಂದು ವೇಳೆ ಈ ನಡೆ ಬದಲಾದರೆ ಜಗತ್ತಿನಾದ್ಯಂತ ನಾಟಕೀಯ ಪರಿಣಾಮ ಸ್ಪಷ್ಟವಾಗುತ್ತದೆ.
ಅಮೆರಿಕ ಏನು ಮಾಡುತ್ತದೆ?

ಇರಾನ್ನ ಕ್ಷಿಪಣಿಗಳನ್ನು ಹೊಡೆದುರುಳಿಸಲು ಅಮೆರಿಕ ಸಹಾಯ ಮಾಡಿದರೂ ಅಮೆರಿಕ ನೇರವಾಗಿ ಇರಾನ್ ಮೇಲೆ ದಾಳಿ ಮಾಡಿಲ್ಲ. ಇಸ್ರೇಲ್ನ ದಾಳಿಯಲ್ಲಿ ಅಮೆರಿಕ ಭಾಗವಾಗಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಒತ್ತಿ ಹೇಳಿದ್ದಾರೆ. ಇರಾನ್ ಕೂಡ ಮಧ್ಯ ಪ್ರಾಚ್ಯದಲ್ಲಿ ಅಮೆರಿಕನ್ ಪಡೆಗಳು ಅಥವಾ ಅದರ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ. ಆದರೂ ಹೊರ್ಮುಜ್ ಜಲಸಂಧಿ ಮುಚ್ಚುವುದು ಅಮೆರಿಕನ್ನರ ಆರ್ಥಿಕತೆಗೆ ಹೊಡೆತ ಕೊಡುತ್ತದೆ. ಇದು ಅಮೆರಿಕದ ಮಿಲಿಟರಿ ಪ್ರತಿಕ್ರಿಯೆಗೂ ಕೂಡ ಕಾರಣವಾಗಬಹುದು. ಅಮೆರಿಕ ಹೊರತುಪಡಿಸಿ ಅತಿ ಹೆಚ್ಚು ಅಮೆರಿಕದ ಸೇನಾಪಡೆಗಳು ಮಧ್ಯಪ್ರಾಚ್ಯದ ಕತಾರ್, ಜೋರ್ಡಾನ್, ಯುಎಇ, ಬಹ್ರೈನ್, ಕುವೈಟ್, ಇರಾಕ್ನಲ್ಲಿದ್ದು ಇರಾನ್ನ ಯಾವುದೇ ದುಡುಕು ನಿರ್ಧಾರ ಖಂಡಿತವಾಗಿಯೂ ಸೇನಾ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ. ಇರಾನ್ಗೆ ತನ್ನ ಬೆದರಿಕೆಯ ಹೊರತಾಗಿಯೂ ಹೊರ್ಮುಜ್ ಜಲಸಂಧಿಯನ್ನು ಮುಚ್ಚುವ ಸಾಮರ್ಥ್ಯ ಮತ್ತು ಇಚ್ಛೆಯನ್ನು ಆ ದೇಶ ಹೊಂದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಹಡಗಿಗೆ ಬೆದರಿಕೆ ಇಂದು-ನಿನ್ನೆಯದಲ್ಲ

ಸಂಘರ್ಷದ ಸಮಯದಲ್ಲಿ ಒತ್ತಡ ಹೇರಲು ಹಡಗು ಮಾರ್ಗಗಳ ಮೇಲೆ ದಾಳಿ ಮಾಡುವುದು ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಗಾಜಾದಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಯೆಮನ್ನ ಹೌತಿ ಉಗ್ರರು ಅರೇಬಿಯನ್ ಪರ್ಯಾಯ ದ್ವೀಪದ ಕೆಂಪು ಸಮುದ್ರಕ್ಕೆ ಪ್ರವೇಶ ದ್ವಾರವಾದ ಬಾಬ್ ಅಲ್-ಮಾಂಡೇಬ್ ಜಲಸಂಧಿಯ ಸುತ್ತಲಿನಪ್ರದೇಶದಲ್ಲಿ ಇಸ್ರೇಲ್ಗೆ ಸೇರಿದ ಮತ್ತು ಅವರನ್ನು ಬೆಂಬಲಿಸುವ ದೇಶಗಳ ಹಡಗುಗಳ ಮೇಲೆ ಸತತವಾಗಿ ದಾಳಿ ನಡೆಸಿದರು. ಹೌತಿ ಉಗ್ರ ಈ ದಾಳಿ ಜಾಗತಿಕ ವ್ಯಾಪಾರ-ವಹಿವಾಟಿನ ಮೇಲೆ ಪರಿಣಾಮ ಬೀರಿತು. ಇದರಿಂದ ಬೆದರಿದ ಜಾಗತಿಕ ನೌಕಾ ಸರಕು ಸಾಗಣೆ ಕಂಪೆನಿಗಳು ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಬಳಸಿ ಸಾಗುವ ಮೂಲಕ ಕೆಂಪು ಸಮುದ್ರವನ್ನು ತಪ್ಪಿಸಿ ನೌಕಾಯಾನ ನಡೆಸಿದವು. ಇದು ದೀರ್ಘಕಾಲ ಮತ್ತು ಸುರಕ್ಷಿತ ಪ್ರಯಾಣವಾಗಿತ್ತು. ಆದರೆ ಹೊರ್ಮುಜ್ ಜಲಸಂಧಿಯ ಮೂಲಕ ಹೋಗದೆ ಕೊಲ್ಲಿ ರಾಷ್ಟ್ರಗಳಿಂದ ಸಮುದ್ರ ಮೂಲಕ ಏನನ್ನೂ ಸಾಗಿಸಲು ಪರ್ಯಾಯ ಮಾರ್ಗವಿಲ್ಲ.
ಹೊರ್ಮುಜ್ನಲ್ಲಿ ಹಿಂದೆಯೂ ಹಡಗುಗಳಿಗೆ ದಾಳಿ

1980 ಮತ್ತು 1988ರ ನಡುವಿನ ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಎರಡೂ ಕಡೆ ಲಕ್ಷಾಂತರ ಜನರು ಸಾವನ್ನಪ್ಪಿದರು. ಕೊಲ್ಲಿಯಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ಅಪಾರ ಪ್ರಮಾಣದ ದಾಳಿಗಳು ನಡೆದವು. ಇದನ್ನು “ಟ್ಯಾಂಕರ್ ಯುದ್ಧ’ ಎಂದು ಕೂಡ ಕರೆಯಲಾಯಿತು. ಆದರೆ, ಎಂದಿಗೂ ಹೊರ್ಮುಜ್ ಜಲಸಂಧಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿರಲಿಲ್ಲ. 2019ರಲ್ಲಿ ಡೊನಾಲ್ಡ್ ಟ್ರಂಪ್ ಮೊದಲ ಅಧ್ಯಕ್ಷತೆಯ ಅವಧಿಯಲ್ಲಿ ಅಮೆರಿಕ-ಇರಾನ್ ಮಧ್ಯೆ ಉದ್ವಿಗ್ನತೆ ಉಂಟಾಗಿ ಯುಎಇಯ ಫುಜೈರಾ ಕರಾವಳಿಯ ಜಲಸಂಧಿಯ ಮೇಲೆ 4 ಹಡಗುಗಳ ಮೇಲೆ ದಾಳಿ ಮಾಡಲಾಯಿತು. ಇದಕ್ಕಾಗಿ ತನ್ನ ಮೇಲಿನ ಅಮೆರಿಕದ ದೂಷಣೆಯ ಆರೋಪಗಳನ್ನು ಇರಾನ್ ನಿರಾಕರಿಸಿತ್ತು. 2024ರ ಎಪ್ರಿಲ್ನಲ್ಲಿ ಸಿರಿಯಾದ ಡಮಾಸ್ಕಸ್ನಲ್ಲಿರುವ ಇರಾನ್ ದೂತಾವಾಸದ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಉದ್ವಿಗ್ನತೆಯ ನಡುವೆ ಇರಾನ್ನ ಸಶಸ್ತ್ರ ಪಡೆಗಳು ಕಂಟೇನರ್ ಹಡಗನ್ನು ವಶಪಡಿಸಿಕೊಂಡಿದ್ದವು.
