ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದ ಎರಡು ವಾರಗಳ ಅಮೆರಿಕ–ಇರಾನ್ ಕದನ ವಿರಾಮ 24 ಗಂಟೆಗೂ ಕಡಿಮೆ ಅವಧಿಯಲ್ಲೇ ಅಲುಗಾಡಿದ ಬೆಳವಣಿಗೆಯಲ್ಲಿ, ಇರಾನ್ ಬುಧವಾರ ಮತ್ತೆ ವಿಶ್ವದ ಅತ್ಯಂತ ಪ್ರಮುಖ ತೈಲ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದುದಾಗಿ ರಾಜ್ಯ ಮಾಧ್ಯಮಗಳು ವರದಿ ಮಾಡಿವೆ.
ಇದಕ್ಕೂ ಮುನ್ನ, ಇಸ್ರೇಲ್ ಲೆಬನಾನ್ನ ಬೈರುತ್, ಬೆಕಾ ಕಣಿವೆ ಹಾಗೂ ದಕ್ಷಿಣ ಭಾಗಗಳಲ್ಲಿ 100 ಕ್ಕೂ ಹೆಚ್ಚು ಹೆಜ್ಬುಲ್ಲಾ ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ. ಲೆಬನಾನ್ ಆರೋಗ್ಯ ಅಧಿಕಾರಿಗಳ ಪ್ರಕಾರ, ಈ ದಾಳಿಯಲ್ಲಿ ಕನಿಷ್ಠ 254 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲ್, “ಲೆಬನಾನ್ ಅಮೆರಿಕ–ಇರಾನ್ ಕದನ ವಿರಾಮ ಒಪ್ಪಂದದ ಭಾಗವಲ್ಲ” ಎಂದು ಸ್ಪಷ್ಟಪಡಿಸಿದರೆ, ಇರಾನ್ ಈ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. “ಲೆಬನಾನ್ ಮೇಲಿನ ದಾಳಿ ಕದನ ವಿರಾಮದ ಆತ್ಮವನ್ನೇ ಉಲ್ಲಂಘಿಸಿದೆ” ಎಂದು ಇರಾನ್ ವಾದಿಸಿದೆ.
ಇದರ ಬೆನ್ನಲ್ಲೇ, ಹೊರ್ಮುಜ್ ಮೂಲಕ ತೈಲ ಟ್ಯಾಂಕರ್ಗಳ ಸಂಚಾರವನ್ನು ಸ್ಥಗಿತಗೊಳಿಸಿರುವುದಾಗಿ ಇರಾನ್ ಪರ ಮಾಧ್ಯಮಗಳು ತಿಳಿಸಿವೆ. ಈ ಕ್ರಮದ ನಂತರ, ವೈಟ್ ಹೌಸ್ ತಕ್ಷಣವೇ ಹೊರ್ಮುಜ್ ಜಲಸಂಧಿಯನ್ನು ತೆರೆಯಬೇಕು ಎಂದು ಒತ್ತಾಯಿಸಿದೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತೆ ತಾರಕಕ್ಕೇರಿರುವುದರಿಂದ ಜಾಗತಿಕ ತೈಲ ಮಾರುಕಟ್ಟೆ, ಸಾಗಾಣಿಕೆ ಹಾಗೂ ಭದ್ರತಾ ಪರಿಸ್ಥಿತಿಯ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ
