ಹಾಸನ, ಏ.7: ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿ ಪಾಠಗಳನ್ನು ಗಮನವಿಟ್ಟು ಕಲಿಯುವುದರ ಜೊತೆಗೆ ಪ್ರಾಯೋಗಿಕ ಜ್ಞಾನ ಮತ್ತು ಉದ್ಯಮೋನ್ಮುಖ ಕೌಶಲ್ಯಗಳನ್ನು ಸಹ ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ (MTES) ಅಧ್ಯಕ್ಷ ಆರ್.ಟಿ. ದ್ಯಾವೇಗೌಡ ಹೇಳಿದರು.
ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗವು ಸ್ಕಿಲ್ ಮತ್ತು ಕನ್ಸಲ್ಟನ್ಸಿ ಸೆಂಟರ್ ಸಹಯೋಗದಲ್ಲಿ ಆಯೋಜಿಸಿದ್ದ ಐದು ದಿನಗಳ “ಪ್ರಾಕ್ಟಿಕಲ್ ಅಂಡ್ ಟ್ರೈನಿಂಗ್ ಆನ್ ಎಲೆಕ್ಟ್ರಿಕಲ್ ಸ್ವಿಚ್ ಗಿಯರ್ ಸಿಸ್ಟಮ್ಸ್, ಪ್ರೊಟೆಕ್ಷನ್ ಟೆಕ್ನಿಕ್ಸ್ ಅಂಡ್ ಅಪ್ಲಿಕೇಶನ್ಸ್” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯಾಭ್ಯಾಸದ ಜೊತೆಗೆ ವಾಸ್ತವಿಕ ಜೀವನದಲ್ಲಿ ಬಳಸುವ ತಾಂತ್ರಿಕ ಜ್ಞಾನವನ್ನು ತಿಳಿದುಕೊಳ್ಳುವುದು ಅಗತ್ಯ. ಇಂತಹ ತರಬೇತಿ ಶಿಬಿರಗಳು ಪ್ರಾಯೋಗಿಕ ಅಂಶಗಳನ್ನು ಪರಿಚಯಿಸುವುದರ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಅತ್ಯಂತ ಪ್ರಮುಖ ಕ್ಷೇತ್ರವಾಗಿದ್ದು, ಇದು ಕೇವಲ ಉದ್ಯೋಗ ಪಡೆಯುವ ಕೋರ್ಸ್ ಮಾತ್ರವಲ್ಲ, ಉದ್ಯೋಗ ನೀಡುವ ವೃತ್ತಿಪರ ಕೋರ್ಸ್ ಆಗಿಯೂ ಪರಿಣಮಿಸಬಹುದು. ಈ ವಿಭಾಗದಲ್ಲಿ ಅಭ್ಯಾಸ ಮಾಡಿದವರು ನಿರುದ್ಯೋಗಿಗಳಾಗದೇ, ಸ್ವಯಂ ಉದ್ಯೋಗದಲ್ಲೂ ತೊಡಗಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಲ್ನಾಡ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚೌಡಳ್ಳಿ ಜಗದೀಶ್, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಸ್ಥೆ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ನುರಿತ ವಿಷಯ ತಜ್ಞರಿಂದ ವಿದ್ಯಾರ್ಥಿಗಳಿಗೆ ಆಳವಾದ ಮಾಹಿತಿಯನ್ನು ನೀಡಲಾಗುತ್ತದೆ. ಇಂತಹ ತರಬೇತಿ ಶಿಬಿರಗಳು ವಿದ್ಯಾರ್ಥಿಗಳ ಕಲಿಕೆ ಮತ್ತು ಅಧ್ಯಯನಕ್ಕೆ ಹೆಚ್ಚಿನ ನೆರವಾಗಲಿವೆ ಎಂದರು.

Dobson ತರಬೇತಿ ವಿಭಾಗದ ನಿರ್ದೇಶಕ ಡಿ.ವಿ. ಶಿವಾನಂದ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಕೆಲಸದ ಅನುಭವವೂ ಇರಬೇಕಾದದ್ದು ಅನಿವಾರ್ಯ. ಪಾಠ ಕೇಳುವುದು ಮತ್ತು ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುವುದು ಎರಡೂ ಸಮಾನವಾಗಿ ಮುಖ್ಯವಾಗಿದ್ದು, ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನಲ್ಗಳ ತಯಾರಿಕೆ, ಡಿಸೈನ್, ಎರೆಕ್ಷನ್ ಸೇರಿದಂತೆ ವಿವಿಧ ತಾಂತ್ರಿಕ ವಿಷಯಗಳಲ್ಲಿ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗದ ದಾರಿಯೂ ತೆರೆದಿಡಬಹುದು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಜೆ. ಅಮರೇಂದ್ರ, ಕಾಲೇಜಿನ ಎಲ್ಲಾ ವಿಭಾಗಗಳಲ್ಲಿಯೂ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಜ್ಞಾನ, ಮನೋಸ್ಥೈರ್ಯ ಮತ್ತು ವೃತ್ತಿಪರ ಕೌಶಲ್ಯ ಹೆಚ್ಚಿಸುವ ಉದ್ದೇಶದಿಂದ ನಿರಂತರವಾಗಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೆ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ. ರಾಜಣ್ಣ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಲ್ನಾಡ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ಖಜಾಂಚಿ ಎಚ್.ಡಿ. ಪಾಶನಾಥ್, ಸ್ಕಿಲ್ ಮತ್ತು ಕನ್ಸಲ್ಟನ್ಸಿ ಸೆಂಟರ್ ಮುಖ್ಯಸ್ಥ ಡಾ. ಎ.ಜೆ. ಕೃಷ್ಣಯ್ಯ, ತರಬೇತಿ ನಿರ್ದೇಶಕರುಗಳಾದ ಬಸವೇಶ್ ಶೆಟ್ಟಿ ಎಸ್., ರಾಜೇಶ್ವರಿ ಬಿ.ಎಸ್., ಡಾ. ರಾಘವೇಂದ್ರ ಪ್ರಸಾದ್ ದೇಶಪಾಂಡೆ, ಕಾರ್ಯಕ್ರಮದ ಸಂಯೋಜಕರಾದ ಸಹ ಪ್ರಾಧ್ಯಾಪಕರು ಡಾ. ಆರ್.ಕೆ. ಧವಳ, ಎಸ್.ಕೆ. ಯೋಗಿತಾ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಇಂದ್ರ ಬಹದ್ದೂರ್, ಸಿವಿಲ್ ವಿಭಾಗದ ಮುಖ್ಯಸ್ಥ ಸುಮನಾ ಜಯಂತ್, ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
– ಕಟ್ಟಾಯ ಶಿವಕುಮಾರ್
