ಹಾಸನ: ಕನ್ನಡ ಸಾಹಿತ್ಯದ ಮಹಿಮೆ, ಪರಂಪರೆ ಮತ್ತು ಅದರ ತಾತ್ತ್ವಿಕ ಗೌರವವನ್ನು ಅರ್ಥಮಾಡಿಕೊಳ್ಳದೇ, ಯಾವುದೇ ಸಾಹಿತ್ಯ ಸತ್ವವಿಲ್ಲದ ಕೆಲ ರಾಜಕಾರಣಿಗಳಿಂದ ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು ನಡೆಯುತ್ತಿರುವುದು ವಿಷಾದನೀಯ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್ ಉಪ್ಪಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಭವನದ ಸಭಾಂಗಣದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು – ಹಾಸನ ತಾಲೂಕು ಘಟಕದ ವತಿಯಿಂದ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ವಿವಿಧ ಕ್ಷೇತ್ರಗಳ ಹತ್ತು ಮಂದಿ ಗಣ್ಯ ಸಾಧಕರಿಗೆ “ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕೊಟ್ರೇಶ್ ಎಸ್ ಉಪ್ಪಾರ್, ಸಮಾರಂಭವನ್ನುದ್ದೇಶಿಸಿ ಮಾತನಾಡಿ—
“ಕನ್ನಡದಲ್ಲಿ ಅಘಾದವಾದ ಸಾಹಿತ್ಯದ ಬಂಡಾರವಿದೆ. ಇಡೀ ವಿಶ್ವದ ಯಾವುದೇ ಭಾಷೆಯಲ್ಲೂ ಕನ್ನಡಕ್ಕೆ ಸಾಟಿ ಕಂಡುಬರುವುದಿಲ್ಲ. ಪರಂಪರೆ, ಇತಿಹಾಸ, ಜ್ಞಾನಸಂಪತ್ತಿನ ಮಹಾ ಹೊಳೆ ನಮ್ಮ ಕನ್ನಡ. ಆದರೆ ಈ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ದುರಂತವೆಂದರೆ—ಸಾಹಿತ್ಯ ಪರಂಪರೆ, ಮೌಲ್ಯಗಳ ಅರಿವು ಇಲ್ಲದ ಕೆಲವರನ್ನು ನೇತೃತ್ವಕ್ಕೆ ತಂದುಕೊಳ್ಳುವುದು ಮತ್ತು ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದ ರಾಜ್ಯಾಧ್ಯಕ್ಷನೇ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿರುವುದು,” ಎಂದು ಬೇಸರ ವ್ಯಕ್ತಪಡಿಸಿದರು.

“ರಾಜಕಾರಣಿಗಳಿಗೆ ಸಾಹಿತ್ಯದ ಸತ್ವವೇ ಗೊತ್ತಿಲ್ಲ. ಸಾಹಿತ್ಯ ಎಂದರೇನು, ಅದರ ಪರಂಪರೆ ಏನು ಎಂಬುದರ ಅರಿವು ಇರಲೇ ಬೇಕಾದ ಸಂದರ್ಭದಲ್ಲಿ, ಅಂತಹವರಿಂದಲೇ ರಾಜ್ಯೋತ್ಸವ ಪ್ರಶಸ್ತಿ ಶಿಫಾರಸ್ಸು ನಡೆಯುತ್ತಿರುವುದು ನೋವಿನ ಸಂಗತಿ. ನಾವು ನಡೆಸುತ್ತಿರುವ ಸಾಹಿತ್ಯ ಸೇವೆಗೆ ಕೇಂದ್ರ ಸಮಿತಿಯಿಂದ ಒಂದು ಪೈಸೆಯೂ ಸಹಾಯ ಬಂದಿಲ್ಲ. ಆದರೆ ಸಾಹಿತ್ಯ ಉಳಿಸಿ ಬೆಳೆಸಬೇಕು ಎಂಬ ಉದ್ದೇಶದಿಂದಲೇ ನಾವು ನಿಂತಿದ್ದೇವೆ. ಆಸಕ್ತಿ ಮತ್ತು ಮನಸ್ಸು ಇದ್ದರೆ ಸಾಹಿತ್ಯ ಸೇವೆ ಸಾಧ್ಯ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿದ ನಾಗರಾಜು ಹೆತ್ತೂರ್, “ಕನ್ನಡ ರಾಜ್ಯೋತ್ಸವವು ಕೇವಲ ಒಂದು ದಿನಕ್ಕೆ ಸೀಮಿತವಾಗದೇ, ವರ್ಷವಿಡೀ ಕನ್ನಡ ಚೇತನ ಜೀವಂತವಾಗಿರಬೇಕು. ರಾಜ್ಯೋತ್ಸವ ಅವಾರ್ಡುಗಳು ನಿಜವಾಗಿಯೂ ಅರ್ಹರಿಗೆ, ಸಾಧಕರಿಗೆ ಸಿಗಬೇಕು,” ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜು ದೊಡ್ಡಮನಿ ಪ್ರಾಸ್ತಾವಿಕ ಭಾಷಣದಲ್ಲಿ, “ಕನ್ನಡಕ್ಕೆ 2300 ವರ್ಷಗಳ ಇತಿಹಾಸವಿದೆ. ಇಂತಹ ಹಿರಿಮೆ ಹೊಂದಿದ ಭಾಷೆಗೆ ಗೌರವ ತರುವ ಕಾರ್ಯಗಳು ಮುಂದುವರಿಯಬೇಕು. ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಉಳಿಯಲು ನಮ್ಮ ವೇದಿಕೆ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ,” ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕವಿಗಳು ತಮ್ಮದೇ ಸಾಹಿತ್ಯ ಕೃತಿಗಳನ್ನು ವಾಚಿಸಿದರು. ನಂತರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಧಕರಿಗೆ ಗೌರವ ಸಮರ್ಪಿಸಲಾಯಿತು.
ಈ ಕಾರ್ಯಕ್ರಮವು ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸುವ ದೃಷ್ಟಿಯಿಂದ ಮಹತ್ವದ ವೇದಿಕೆಯಾಗಿ ಪರಿಣಮಿಸಿತು.
ಸಾಹಿತಿ ಶೈಲಜಾ ಹಾಸನ್, ಸಾಹಿತಿ ಹಾಗೂ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಕೆ. ಭರತ್, ಸಮಾಜ ಸೇವಕ ಡಾ. ವಿಜಯಕುಮಾರ್, ಕೆ.ಪಿ. ಪುಟ್ಟಸ್ವಾಮಿ ಶೆಟ್ಟಿ, ಕಾವ್ಯ ಶ್ರೀ, ಕಾಂಚನಾ ಮಾಲಾ ಮತ್ತು ಹಲವಾರು ಗಣ್ಯ ಅತಿಥಿಗಳು ಉಪಸ್ಥಿತರಿದ್ದರು. ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ ಪ್ರಾರ್ಥಿಸಿದರು. ಸಾಹಿತಿ ವಾಸು ಸ್ವಾಗತಿಸಿದರು.
