ರಾಮನಾಥಪುರ/ಅರಕಲಗೂಡು: ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೇರಳಪುರ ಗ್ರಾಮದ ಶ್ರೀಯುತ ಜಗದೀಶ್ ಕೆ.ಟಿ ಅವರು ಸುಮಾರು 38 ವರ್ಷಗಳ ಸುದೀರ್ಘ ಸರ್ಕಾರಿ ಸೇವೆಯ ನಂತರ ವಯೋನಿವೃತ್ತಿ ಹೊಂದುತ್ತಿರುವ ಸಂದರ್ಭದಲ್ಲಿ, ಅವರ ಸೇವಾ ಪಯಣ ಇದೀಗ ಜನಮನದಲ್ಲಿ ಗೌರವದ ಅಧ್ಯಾಯವಾಗಿ ಗುರುತಿಸಿಕೊಂಡಿದೆ.
ಗ್ರಾಮೀಣ ನೆಲೆಯಿಂದ ಸಚಿವಾಲಯದವರೆಗೆ
1966ರ ಮಾರ್ಚ್ 8ರಂದು ಕೇರಳಪುರ ಗ್ರಾಮದಲ್ಲಿ ತಿಮ್ಮೇಗೌಡ ಹಾಗೂ ಸಣ್ಣಮ್ಮ ದಂಪತಿಗಳ ದ್ವಿತೀಯ ಪುತ್ರರಾಗಿ ಜನಿಸಿದ ಜಗದೀಶ್ ಕೆ.ಟಿ., ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗ್ರಾಮದ ಸರ್ಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಶ್ರೀವಿದ್ಯಾ ಗಣಪತಿ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು.
ಉದ್ಯೋಗದ ಕನಸನ್ನು ಹೊತ್ತು ಬಳಿಕ ಬೆಂಗಳೂರುಗೆ ಬಂದ ಅವರು, ಅಂದಿನ ಮಾಜಿ ನೀರಾವರಿ ಸಚಿವರು ಹಾಗೂ ಬಸವನಗುಡಿ ಕ್ಷೇತ್ರದ ಶಾಸಕರಾದ ಹೆಚ್.ಎನ್. ನಂಜೇಗೌಡರ ಆಪ್ತ ಸಹಾಯಕರಾಗಿ ತಮ್ಮ ಸೇವಾ ಜೀವನಕ್ಕೆ ಚಾಲನೆ ನೀಡಿದರು.
ಪ್ರಧಾನಿ ಕಚೇರಿಯಿಂದ ಮುಖ್ಯಮಂತ್ರಿಗಳ ಗೃಹ ಕಚೇರಿವರೆಗೆ
ಜಗದೀಶ್ ಕೆ.ಟಿ. ಅವರ ಸೇವಾ ಪಯಣ ಸಾಮಾನ್ಯವಲ್ಲ. ಹೆಚ್.ಡಿ. ದೇವೇಗೌಡರು ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಅವಧಿಯಲ್ಲಿ, ದೆಹಲಿಯ ಪ್ರಧಾನಿಯವರ ಗೃಹ ಕಚೇರಿಯಲ್ಲಿ ಅವರು ಕಾರ್ಯನಿರ್ವಹಿಸುವ ಅವಕಾಶ ಪಡೆದರು.
ನಂತರ 1989–92ರ ಅವಧಿಯಲ್ಲಿ, ಎಸ್.ಎಂ. ಕೃಷ್ಣ ಅವರು ಸ್ಪೀಕರ್ ಆಗಿದ್ದಾಗ, ದೆಹಲಿಯಿಂದ ಬೆಂಗಳೂರಿಗೆ ಕರೆಸಿ ಅವರ ಗೃಹ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಯಿತು.
ಮುಂದೆ 1999ರಲ್ಲಿ ಎಸ್.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ, ಜಗದೀಶ್ ಕೆ.ಟಿ. ಅವರು ಸಚಿವಾಲಯದ ನೌಕರರಾಗಿ ವಿಲೀನಗೊಂಡರು.

ಅನೇಕ ಮುಖ್ಯಮಂತ್ರಿಗಳ ಅವಧಿಯಲ್ಲಿ ಸೇವೆ
2006ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲೂ, ಬೆಂಗಳೂರಿನ ಗೃಹ ಕಚೇರಿಯಲ್ಲಿ ಕಾರ್ಯನಿರ್ವಹಿಸಿ, ಜನಸಾಮಾನ್ಯರ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಡುವಲ್ಲಿ ಪಾತ್ರವಹಿಸಿದರು.
ಉದ್ಯೋಗ ವಿಚಾರಗಳು, ದೇವಾಲಯಗಳ ಅಭಿವೃದ್ಧಿ, ನಗರ ಯೋಜನೆಗೆ ಸಂಬಂಧಿಸಿದ ಅನುದಾನಗಳ ವಿಷಯದಲ್ಲಿಯೂ ಅವರು ಶ್ರದ್ಧೆಯಿಂದ ಕೆಲಸ ಮಾಡಿದರು.
2008ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿಯೂ ಅವರ ಗೃಹ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ ತಮ್ಮ ಕಾರ್ಯನಿಷ್ಠೆಯನ್ನು ಮುಂದುವರಿಸಿದರು.
ಸಚಿವಾಲಯ ಸಂಘದಲ್ಲಿ ನಾಯಕತ್ವ
ಅವರ ಉತ್ತಮ ಕಾರ್ಯವೈಖರಿ ಹಾಗೂ ನೌಕರಪರ ನಿಲುವನ್ನು ಗುರುತಿಸಿ, ಸಚಿವಾಲಯವು ಅವರನ್ನು ಸಚಿವಾಲಯ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿತು.
ಈ ಹುದ್ದೆಯಲ್ಲಿ ಅವರು ಎಂಟು ವರ್ಷಗಳ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿದರು.
ನಂತರ, ಕರ್ನಾಟಕ ರಾಜ್ಯ ಸರ್ಕಾರದ ಸಚಿವಾಲಯ ಸಂಘದ ನಾಲ್ಕನೇ ದರ್ಜೆ ನೌಕರರ ಸಂಘದ ಅಧ್ಯಕ್ಷರಾಗಿ ಕೂಡ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ, ನೌಕರರ ಹಕ್ಕುಗಳ ಪರ ಧ್ವನಿಯಾದರು.
ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ
ಅವರ ಸಮರ್ಪಿತ ಹಾಗೂ ಪ್ರಾಮಾಣಿಕ ಸೇವೆಯನ್ನು ಗುರುತಿಸಿ, ಕರ್ನಾಟಕ ಸರ್ಕಾರವು 2016–17ನೇ ಸಾಲಿನ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಿತು.
ಈ ಪ್ರಶಸ್ತಿಯನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ವಾಜುಭಾಯ್ ವಾಲಾ ಅವರ ಸಮ್ಮುಖದಲ್ಲಿ ನೀಡಿ ಸನ್ಮಾನಿಸಲಾಯಿತು.
ಅಧಿಕಾರಿಗಳ ಮೆಚ್ಚುಗೆಗೂ ಪಾತ್ರ
ಜಗದೀಶ್ ಕೆ.ಟಿ. ಅವರು ರಾಜಕೀಯ ನಾಯಕರೊಂದಿಗೆ ಮಾತ್ರವಲ್ಲದೆ, ಅನೇಕ ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳಾದ ಶ್ರೀನಿವಾಸಾಚಾರ್, ಕನ್ಹೀರಾಮ್, ರಾಕೇಶ್ ಸಿಂಗ್ ಅವರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ಸಚಿವಾಲಯದಲ್ಲಿ ಇಂದಿಗೂ ಹಲವಾರು ಅಧಿಕಾರಿಗಳು ಅವರ ಕಾರ್ಯವೈಖರಿಯನ್ನು ಗೌರವದಿಂದ ಸ್ಮರಿಸುತ್ತಾರೆ ಎನ್ನುವುದು ವಿಶೇಷ.
ವಯೋನಿವೃತ್ತಿಗೆ ಹೃತ್ಪೂರ್ವಕ ಶುಭಾಶಯಗಳು
ಪ್ರಸ್ತುತ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಹಿರಿಯ ಕಚೇರಿ ಪರಿಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಜಗದೀಶ್ ಕೆ.ಟಿ. ಅವರು, ಸುಮಾರು 38 ವರ್ಷಗಳ ಸೇವೆಯ ಬಳಿಕ ವಯೋನಿವೃತ್ತಿ ಹೊಂದುತ್ತಿದ್ದಾರೆ.
ಈ ಸಂದರ್ಭದಲ್ಲಿ ಸಚಿವಾಲಯದ ನೌಕರರು, ಬೆಂಗಳೂರು ನಿವಾಸಿಗಳು ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೇರಳಪುರ ಗ್ರಾಮದ ಜನರು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು ಸಲ್ಲಿಸಿದ್ದಾರೆ.
– ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
