
ಲಾಯರ್ ಜಗದೀಶ್ ಮತ್ತು ಅವರ ಪುತ್ರನ ಮೇಲೆ ಹಲ್ಲೆ: ರಕ್ತಸಿಕ್ತ ಅವತಾರದಲ್ಲೇ ಫೇಸ್ ಬುಕ್ ಲೈವ್ ಬಂದ ಜಗದೀಶ್
ಲಾಯರ್ ಜಗದೀಶ್ ಮತ್ತು ಅವರ ಪುತ್ರನ ಮೇಲೆ ಹಲ್ಲೆ
ಬಿಗ್ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ, ವಕೀಲ,ಹೋರಾಟಗಾರ ಎಂದು ತಮ್ಮನ್ನು ತಾವು ಗುರುತಿಸಿಕೊಳ್ಳುವ ಲಾಯರ್ ಜಗದೀಶ್ ಮೇಲೆ ಮತ್ತೆ ದಾಳಿ ನಡೆದಿದೆ. ಈ ದಾಳಿಯಲ್ಲಿ ಜಗದೀಶ್ಗೆ ಗಾಯಗಳಾಗಿದ್ದು ಜೊತೆಗೆ ಅವರ ಪುತ್ರನ ಮೇಲೂ ಹಲ್ಲೆ ನಡೆದಿದೆ.
ನಿನ್ನೆಯಷ್ಟೇ ಜಗದೀಶ್ ವ್ಯಕ್ತಿಯೊಬ್ಬರ ಜೊತೆ ಜಗಳ ಆಡುವ ವಿಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಇಂದು ಮತ್ತೆ ಕಿಡಿಗೇಡಿಗಳ ಗುಂಪೊಂದು ಜಗದೀಶ್ ಮತ್ತು ಅವರ ಪುತ್ರನ ಮೇಲೆ ಹಲ್ಲೆ ಮಾಡಿದ್ದು, ಈ ವೇಳೆ ಜಗದೀಶ್ ಅವರ ಮೂಗು ಹಾಗೂ ತುಟಿಯಿಂದ ರಕ್ತಸ್ರಾವವಾಗಿದೆ.
ಹೀಗೆ ರಕ್ತ ಸಿಕ್ತವಾಗಿಯೇ ಜಗದೀಶ್ ಫೇಸ್ ಬುಕ್ ನಲ್ಲಿ ಲೈವ್ ಬಂದು ಘಟನೆಯನ್ನು ವಿವರಿಸಿದ್ದಾರೆ.
ನನ್ನ ಕುಟುಂಬದ ಮೇಲೆ ಇಂದು ಮಾರಣಾಂತಿಕ ಹಲ್ಲೆ ನಡೆದಿದೆ. ಅಷ್ಟರಲ್ಲಿ ಪೊಲೀಸರು ನಮ್ಮನ್ನು ಕಾಪಾಡಿದರು ಎಂದು ಲೈವ್ ನಲ್ಲಿ ಜಗದೀಶ್ ಹೇಳಿಕೊಂಡಿದ್ದಾರೆ.
ಈ ದಾಳಿಯ ವೇಳೆ ಲಾಯರ್ ಜಗದೀಶ್ ಅವರ ಸ್ಕಾರ್ಪಿಯೋ ಸಂಪೂರ್ಣ ಧ್ವಂಸವಾಗಿದೆ. ಇನ್ನು ಅವರ ಭದ್ರತೆಗೆ ಇದ್ದ ಗನ್ ಮೇಲೆ ಸಹ ದೊಣ್ಣೆ ಹಾಗೂ ಮಚ್ಚುನಿಂದ ಹಲ್ಲೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ಏನು ಮಾಡುತ್ತಿದ್ದೀರಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿ ಟೆರರಿಸ್ಟ್ ರಾಜ್ಯವಾಗಿದೆ ಎಂದು ಜಗದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 500ಕ್ಕೂ ಹೆಚ್ಚು ಜನ, ಮದ್ಯ ಸೇವಿಸಿ, ಗಾಂಜಾ ಮತ್ತಿನಲ್ಲಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿರುವ ಜಗದೀಶ್ ದಾಳಿಕೋರರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.