ಕೆ.ಆರ್.ಪೇಟೆ,ಏ.02: ರೈತರು ವೈಯಕ್ತಿಕ ಕೆಲಸಗಳನ್ನು ಬಿಟ್ಟು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ‘ಸರ್ಕಾರಿ ಸೇವೆಗಳು ಮನೆ ಬಾಗಿಲಿಗೆ’ ಎಂಬ ಶೀರ್ಷಿಕೆ ಅಡಿಯಲ್ಲಿ ನಡೆಯುತ್ತಿರುವ “ಜನಸ್ಪಂದನಾ” ಕಾರ್ಯಕ್ರಮವು ರೈತರಿಗೆ ವರದಾನವಾದ ಕಾರ್ಯಕ್ರಮವಾಗಿದೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.

ಅವರು ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಗಂಜಿಗೆರೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ತಾಲ್ಲೂಕು ಆಡಳಿತವು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಬೂಕನಕೆರೆ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಸುಮಾರು 800ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಣೆ ಮಾಡಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಜನಸ್ಪಂದನಾ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಕಂದಾಯ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆ, ಪಂಚಾಯತ್ ರಾಜ್, ನೀರಾವರಿ, ಸೆಸ್ಕ್, ಪಶುವೈದ್ಯ ಇಲಾಖೆ, ಮೀನುಗಾರಿಕೆ ಇಲಾಖೆ, ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಒಂದೇ ಸೂರಿನಡಿ ಕುಳಿತು ನೂರಾರು ರೈತರು ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಿದ್ದಾರೆ ಎಂದರು.

ತಾಲ್ಲೂಕಿನ ಗಂಜಿಗೆರೆ, ವಿಠಲಾಪುರ, ಬಲ್ಲೇನಹಳ್ಳಿ, ಬೂಕನಕೆರೆ ಗ್ರಾಮ ಪಂಚಾಯಿಗಳ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಪೌತಿಖಾತೆ, ಪಹಣಿ ತಿದ್ದುಪಡಿ, ಖಾತೆ, ಇ-ಸ್ವತ್ತು, ವೃದ್ದಾಪ್ಯ, ವಿಧವಾ, ಅಂಗವಿಕಲರ ಪಿಂಚಣಿ, ಮನಸ್ವಿನಿ, ಅಂತರ್ ಜಾತಿಯ ಪರಿಹಾರ ಮೊತ್ತ ವಿತರಣೆ ಸೇರಿದಂತೆ ಹಲವಾರು ರೀತಿಯ ಸೇವೆಗಳನ್ನು ಅಧಿಕಾರಿಗಳು ಸ್ಥಳದಲ್ಲೇ ವಿತರಣೆ ಮಾಡಿ ಪರಿಹಾರ ಒದಗಿಸಿದ್ದಾರೆ. ಇದರಿಂದ ಈ ಭಾಗದ ಅರ್ಹ ಫಲಾನುಭವಿಗಳು ಸುಮಾರು 20ಕಿ.ಮೀ ದೂರದ ತಾಲ್ಲೂಕು ಕೇಂದ್ರಕ್ಕೆ ಅಲೆಯುವುದು ತಪ್ಪಿದೆ ಎಂದರು.

*ಆಸ್ಪತ್ರೆಗಳನ್ನು ಮುಚ್ಚದಂತೆ ಮನವಿ*
ಸರ್ಕಾರವು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮುಚ್ಚಲು ಹೊರಟಿದೆ ದಯಮಾಡಿ ಹೊಸದಾಗಿ ಆಸ್ಪತ್ರೆಗಳನ್ನು ನೀಡದಿದ್ದರೂ ಪರವಾಗಿಲ್ಲ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮುಚ್ಚಬಾರದು ಎಂದು ಶಾಸಕ ಹೆಚ್.ಟಿ.ಮಂಜು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದರು.
ಕಂದಾಯ ಗ್ರಾಮಗಳಾದ ಹೊಡಕೆಶೆಟ್ಟಿಹಳ್ಳಿ ಮತ್ತು ಕೂಡಲಕುಪ್ಪೆ ಗ್ರಾಮಗಳ 113ಮನೆಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಯಿತು. ಕಂದಾಯ ಇಲಾಖೆಯಿಂದ ಸುಮಾರು 300ಕ್ಕೂ ಹೆಚ್ಚು ಫಲಾನುಭವಿಗಳಿಗೆ ವಿವಿಧ ಸೌಲತ್ತುಗಳನ್ನು ಶಾಸಕರು ವಿತರಣೆ ಮಾಡಿದರು. ಕೃಷಿ ಇಲಾಖೆಯಿಂದ ಕೃಷಿ ಟ್ರಾಕ್ಟರ್, ಟ್ರೇಲರ್ಗಳನ್ನು ವಿತರಣೆ ಮಾಡಿದರು. ತೋಟಗಾರಿಕಾ ಇಲಾಖೆಯಿಂದ ಮೇವು ಕತ್ತರಿಸುವ ಯಂತ್ರ ವಿತರಣೆ ಮಾಡಿದರು. ಮೀನುಗಾರಿಕೆ ಇಲಾಖೆಯಿಂದ ಮೀನು ಹಿಡಿಯುವ ಹರಿಗೋಲು ದೋಣಿಯನ್ನು ಶಾಸಕರು ವಿತರಣೆ ಮಾಡಿದರು. ಚೆಸ್ಕಾಂ ಇಲಾಖೆಯಿಂದ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಕೃಷಿ ಪಂಪ್ ಸೆಟ್ ಸಕ್ರಮ ಮಾಡಿಕೊಂಡ ರೈತರಿಗೆ ಟಿಸಿ ವಿತರಣಾ ಆದೇಶಪತ್ರ ನೀಡಲಾಯಿತು. ಗ್ರಾಮ ಪಂಚಾಯತ್ ವತಿಯಿಂದ ವಿಕಲಚೇತನರಿಗೆ ಸೋಲಾರ್ ಲ್ಯಾಂಪ್ಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಾ.ಎಸ್.ಯು. ಅಶೋಕ್, ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸಿದ್ದಯ್ಯ, ತಾ.ಪಂ.ಇಓ ಅಧಿಕಾರಿ ಸುಷ್ಮಾ, ತಾಲ್ಲೂಕು ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಚೆಸ್ಕಾಂ ಇಇ ಪುಟ್ಟಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ಗಂಜಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಚ ಕೆ.ಬಿ.ನಾಗೇಶ್, ಜೆಡಿಎಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇನಹಳ್ಳಿ ಕುಮಾರಸ್ವಾಮಿ, ಬಲ್ಲೇನಹಳ್ಳಿ ರಾಮಚಂದ್ರನ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಎಂ.ಮೋಹನ್, ರಾಜಸ್ವ ನಿರೀಕ್ಷಕಿ ಚಂದ್ರಕಲಾಪ್ರಕಾಶ್, ಗಂಜಿಗೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಪರಮೇಶ್, ಪಿಡಿಓ ಗೀತಾ, ವಿಠಲಾಪುರ ಪಿಡಿಓ ರವಿಕುಮಾರ್, ಶಿಕ್ಷಣ ಸಂಯೋಜಕ ಎಂ.ಎಸ್.ಸುರೇಶ್, ಮುಖಂಡರಾದ ಕುರುಬಹಳ್ಳಿ ನಾಗೇಶ್, ಹೆಳವೇಗೌಡ, ರಾಜೇನಹಳ್ಳಿ ಕುಮಾರಸ್ವಾಮಿ, ಗಂಜಿಗೆರೆಕೊಪ್ಪಲು ರಾಮಕೃಷ್ಣೇಗೌಡ, ಮಾಚಗೋನಹಳ್ಳಿ ಯೋಗೇಂದ್ರ, ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್.ದೇವರಾಜು, ಸಮಾಜ ಕಲ್ಯಾಣಾಧಿಕಾರಿ ಸಹಾಯಕ ನಿರ್ದೇಶಕ ಕೆ.ದಿವಾಕರ್, ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕ ಜಗದೀಶ್, ಆಹಾರ ಇಲಾಖೆಯ ತಾಲ್ಲೂಕು ಅಧಿಕಾರಿ ನಟರಾಜ್, ಬಿಸಿಎಂ ಅಧಿಕಾರಿ ಎಂ.ಎನ್.ವೆಂಕಟೇಶ್, ತೋಟಗಾರಿಕೆ ಸಹಾಯಕ ನಿರ್ದೇಶಕ ಲೋಕೇಶ್, ಕೃಷಿ ಇಲಾಖೆಯ ಸಂತೋಷ್ಕುಮಾರ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ನೌಕರರು ಹಾಗೂ ಸಿಬ್ಬಂದಿ ವರ್ಗದವರು ಜನಸ್ಪಂದನಾ ಸಭೆಯಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
