ಸಕಲೇಶಪುರ: ಪಟ್ಟಣದ ಬಿ.ಎಂ.ರಸ್ತೆ ಹಳೆ ಬಸ್ ನಿಲ್ದಾಣ ಸಮೀಪ ಅನಧಿಕೃತವಾಗಿ ಹಾಕಿಕೊಂಡಿದ್ದ ಬೀದಿ ಬದಿಯ ಅಂಗಡಿಗಳನ್ನು ಜಿಲ್ಲಾಧಿಕಾರಿ ಲತಾಕುಮಾರಿ ಅವರ ಆದೇಶದಂತೆ ಸೋಮವಾರ
ಬೆಳ್ಳಂಬೆಳಗ್ಗೆ ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ ನೇತೃತ್ವದಲ್ಲಿ ಪೊಲೀಸ್ ಭದ್ರತೆಯೊಂದಿಗೆ ತೆರವು ಕಾರ್ಯಾಚರಣೆ ಮಾಡಲಾಯಿತು.
ಪಟ್ಟಣದ ಬಿ.ಎಂ. ರಸ್ತೆಯ ಹಳೆಬಸ್ ನಿಲ್ದಾಣದ ಸಮೀಪ ಕೆಲ ಬೀದಿಬದಿ ವ್ಯಾಪಾರಿಗಳು ಫುಟ್ ಪಾತ್ ಒತ್ತುವರಿ ಮಾಡಿ ಅನಧಿಕೃತವಾಗಿ ಶೆಡ್ ಗಳನ್ನು ನಿರ್ಮಿಸಿ ತರಕಾರಿ, ಹೂವು, ಹಣ್ಣು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಕಳೆದ ಮಂಗಳವಾರ ಜಿಲ್ಲಾಧಿಕಾರಿ ಲತಾಕುಮಾರಿ ಅವರು ತಮ್ಮ ಸಿಟಿರೌಂಡ್ಸ್ ಭಾಗವಾಗಿ ಪಟ್ಟಣಕ್ಕೆ ದಿಢೀರ್ ಭೇಟಿ ನೀಡಿದ ವೇಳೆ ಪಟ್ಟಣದ ನಾಗರಿಕರು ಫುಟ್ ಪಾತ್ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ ಅವರಿಗೆ ಕೂಡಲೇ ಪುಟ್ ಪಾತ್ ಒತ್ತುವರಿ ತೆರವುಗೊಳಿಸಿ ಪಾದಚಾರಿಗಳ ಒಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ತಾಕೀತು ಮಾಡಿದ್ದರು.
ಜಿಲ್ಲಾಧಿಕಾರಿಗಳ ಅದೇಶದ ಹಿನ್ನೆಲೆ ಕಾರ್ಯಪ್ರವೃತ್ತರಾದ ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ ಸೋಮವಾರ ಬೆಳ್ಳಂ ಬೆಳಗ್ಗೆ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಜೆಸಿಬಿ, ಟ್ರ್ಯಾಕ್ಡರ್ ಹಾಗೂ ಪುರಸಭೆ ಸಿಬ್ಬಂದಿಯೊಂದಿಗೆ ಪುಟ್ ಪಾತ್ ಮೇಲೆ ಅನಧಿಕೃತವಾಗಿ ಶೆಡ್ ನಿರ್ಮಿಸಿ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಿದರು.

ಮಾತಿನ ಚಕಮಕಿ:
ಪುಟ್ ಪಾತ್ ಮೇಲೆ ಅನಧಿಕೃತವಾಗಿ ಶೆಡ್ ನಿರ್ಮಿಸಿ ವ್ಯಾಪಾರ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಶೆಡ್ ತೆರವುಗೊಳಿಸುವಂತೆ ಪುರಸಭೆ ವತಿಯಿಂದ ಸೂಚಿಸಲಾಗಿತ್ತು. ಆದರೆ ವ್ಯಾಪಾರಿಗಳು ಮಾತ್ರ ಕ್ಯಾರೇ ಎನ್ನದೆ ವ್ಯಾಪಾರ ಮುಂದುವರೆಸಿದ್ದರು.ಸೋಮವಾರ
ಬೆಳ್ಳಂ ಬೆಳಗ್ಗೆ ಪುರಸಭೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾಗುತ್ತಿದ್ದಂತೆ ಆತಂಕಗೊಂಡ ವ್ಯಾಪಾರಿಗಳು ಪುರಸಭೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ ಘಟನೆಯೂ ನಡೆಯಿತು. ಬಳಿಕ ನಾವೇ ಅಂಗಡಿ ತೆರವು ಮಾಡುತ್ತೇವೆ. ಸಮಯಾವಕಾಶ ನೀಡುವಂತೆ ಮನವಿ ಕೂಡ ಮಾಡಿದರು. ಆದರೆ ಯಾವುದೇ ಮನವಿಗೂ ಮನ್ನಣೆ ನೀಡದ ಪುರಸಭೆ ಅಧಿಕಾರಿಗಳು ಸಿಬ್ಬಂದಿ ಮೂಲಕ ಅಂಗಡಿಯಲ್ಲಿದ್ದ ವಸ್ತುಗಳನ್ನು ತೆರವುಗೊಳಿಸಿ ಜೆಸಿಬಿ ಮೂಲಕ ಶೆಡ್ ಗಳನ್ನು ನೆಲಸಮಗೊಳಿಸಿದರು.
ಸಾರ್ವಜನಿಕರ ಮೆಚ್ಚುಗೆ:
ಪಟ್ಟಣದಲ್ಲಿ ಹಲವು ವರ್ಷಗಳಿಂದ ಬಿ.ಎಂ.ರಸ್ತೆಯಲ್ಲಿ ಫುಟ್ ಪಾತ್ ಒತ್ತುವರಿ ಮಾಡಿ ಅಧಿಕೃತವಾಗಿ ಶೆಡ್ ನಿರ್ಮಿಸಿ ಹಲವು ಬೀದಿ ಬದಿ ವ್ಯಾಪಾರಿಗಳು ಜೀವನ ನಡೆಸುತ್ತಿದ್ದರು. ಆದರೆ ಬೀದಿ ಬದಿವ್ಯಾಪಾರಿಗಳಿಂದ ಸಾರ್ವಜನಿಕರ ಓಡಾಟ ಹಾಗೂ ವಾಹನ ಸಂಚಾರಕ್ಕು ಕಿರಿಕಿರಿಯಾಗುತ್ತಿತ್ತು. ಈ ಬಗ್ಗೆ ಪುರಸಭೆಗೆ ಹಲವು ಬಾರಿ ಮನವಿ ಮಾಡಿದರೂ ಪುರಸಭೆ ಮಾತ್ರ ಪುಟ್ ಪಾತ್ ಒತ್ತುವರಿ ತೆರವಿಗೆ ಮುಂದಾಗಿರಲಿಲ್ಲ. ಹೀಗಾಗಿ ಕಳೆದ ಮಂಗಳವಾರ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಪಟ್ಟಣ ರೌಂಡ್ಸ್ ವೇಳೆ ನಾಗರೀಕರು ಜಿಲ್ಲಾಧಿಕಾರಿ ಮುಂದೆ ಸಮಸ್ಯೆ ಹೇಳಿಕೊಂಡಿದ್ದರು. ಡಿಸಿ ಕೂಡ ನಾಗರಿಕರಿಗೆ ಪುಟ್ ಪಾತ್ ಒತ್ತುವರಿ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಪುಟ್ ಪಾತ್ ಒತ್ತುವರಿ ತೆರವುಗೊಂಡಿದ್ದರು. ನುಡಿದಂತೆ ನಡೆದ ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
