ಹಾಸನ : ಒಂದು ಸಣ್ಣ ಸಮುದಾಯದಿಂದ ಬಂದಂತಹ ವ್ಯಕ್ತಿಯನ್ನು ಪಕ್ಷದ ಎಲ್ಲಾ ಸದಸ್ಯರೆಲ್ಲರೂ ಸೇರಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಕೊಟ್ಟ ಮಾತನ್ನು ತಪ್ಪಿರುವ ಅವರನ್ನು ಅವಿಶ್ವಾಸ ಮಂಡಿಸಿ ಕೆಳಗಿಳಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಚಂದ್ರೇಗೌಡರ ವಿರುದ್ಧ ಜೆಡಿಎಸ್ ವರಿಷ್ಠ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇವಲ ಮೂರು ತಿಂಗಳಿಗೆ ಅಧ್ಯಕ್ಷ ಸ್ಥಾನವನ್ನು ಕೇಳಿದ್ದರು. ನಂತರ ಬಜೆಟ್ ಮಂಡಿಸಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಇದೀಗ ಕೊಟ್ಟ ಮಾತನ್ನು ತಪ್ಪುತ್ತಿದ್ದು, ಈಗಾಗಲೇ ಪಕ್ಷದ ವೇದಿಕೆಯಲ್ಲಿ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದರೂ ಕೂಡ ಅದನ್ನು ನಿರ್ಲಕ್ಷಿಸುತ್ತಿದ್ದಾರೆ. ಪಕ್ಷದ ವತಿಯಿಂದ ಏನು ಕ್ರಮ ಕೈಗೊಳ್ಳಬೇಕೊ ಅದನ್ನು ತೆಗೆದುಕೊಳ್ಳುತ್ತೇವೆ ಎಂದು ಖಾರವಾಗಿ ಪ್ರತಿಕ್ರಯಿಸಿದರು.

ನಾನು ಮನಸ್ಸು ಮಾಡಿದ್ದರೆ ನಗರಸಭೆ ಅಧ್ಯಕ್ಷರು ಬಜೆಟ್ ಮಂಡಿಸಲು ಅವಕಾಶ ಕೊಡುತ್ತಿರಲಿಲ್ಲ. ಆದರೆ ಅಂತಹ ಸಣ್ಣತನಕ್ಕೆ ಹೋಗಬಾರದು ಹಾಗೂ ಅಧ್ಯಕ್ಷ ಹುದ್ದೆಗೆ ಅಗೌರವ ತರಬಾರದು ಎಂಬ ಕಾರಣಕ್ಕೆ ಅವಕಾಶ ಮಾಡಿಕೊಟ್ಟೆ. ಆದರೂ ರಾಜೀನಾಮೆ ನೀಡುತ್ತಿಲ್ಲ. ಇಂತಹ ಅಧ್ಯಕ್ಷರನ್ನು ನನ್ನ ರಾಜಕೀಯ ಜೀವನದಲ್ಲಿ ಎಷ್ಟು ಜನರನ್ನು ನೋಡಿಲ್ಲ ಎಂದು ಚಂದ್ರೇಗೌಡರ ವಿರುದ್ಧ ಕೆಂಡಾಮಂಡಲರಾದರು.
