ಕವಲು ದಾರಿಯಲ್ಲಿ ಪತ್ರಿಕೋದ್ಯಮ–ಮಾಹಿತಿ ಹಕ್ಕುಎರಡೂ ಕವಲು ದಾರಿಯಲ್ಲಿದ್ದು ಆತ್ಮಾವಲೋಕನ ಅಗತ್ಯ –ರಾಜ್ಯ ಮಾಹಿತಿ ಹಕ್ಕು ರುದ್ರಣ್ಣ ಹರ್ತಿಕೋಟೆ
ಹಾಸನ: ಪತ್ರಿಕೋದ್ಯಮ ಹಾಗೂ ಮಾಹಿತಿ ಹಕ್ಕು ಕಾಯ್ದೆ ಎರಡೂ ಕವಲು ದಾರಿಯಲ್ಲಿದ್ದು ಆತ್ಮಾವಲೋಕನ ಅಗತ್ಯವಾಗಿದೆ ಎಂದು ರಾಜ್ಯ ಮಾಹಿತಿ ಹಕ್ಕು ಆಯುಕ್ತ ರುದ್ರಣ್ಣ ಹರ್ತಿಕೋಟೆ ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಸಾಂಸ್ಕೃತಿಕ ಸಮಿತಿಯ ‘ಸ್ಟಡಿ ವಿತ್ ಸೊಸೈಟಿ’ ಕಾರ್ಯಕ್ರಮದಡಿ ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮ ಮತ್ತು ಬಳಕೆ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಿಕೋದ್ಯಮ ಮತ್ತು ಮಾಹಿತಿ ಹಕ್ಕು ಕಾಯ್ದೆ ಎರಡರ ಉದ್ದೇಶವೂ ನಾಗರಿಕ ಸಬಲೀಕರಣವಾಗಿದ್ದು ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುವುದಾಗಿದೆ. ಆದರೆ ಇವೆರಡೂ ತಮ್ಮ ಮೂಲ ಉದ್ದೇಶದಿಂದ ದೂರ ಹೋಗುತ್ತಿರುವುದು ಕಳವಳಕಾರಿ ವಿಷಯ ಎಂದು ಅವರು ಹೇಳಿದರು.
ಇಂದಿನ ಕಾಲಘಟ್ಟದಲ್ಲಿ ಹೆಚ್ಚಿನ ಮಾಧ್ಯಮಗಳು ಬಂಡವಾಳಶಾಹಿಗಳ ಹಿಡಿತದಲ್ಲಿದ್ದರೂ ಪತ್ರಕರ್ತರು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮರೆಯಬಾರದು. ಸುಳ್ಳು ಮತ್ತು ಸತ್ಯದ ನಡುವಿನ ಪರಿಶೀಲನೆ ಕಡಿಮೆಯಾಗುತ್ತಿದ್ದು ನೈತಿಕ ಮೌಲ್ಯಗಳು ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕು. ಊಹಾಪೋಹಗಳ ಆಧಾರದ ಮೇಲೆ ಸುದ್ದಿಗಳನ್ನು ನೀಡುವುದನ್ನು ತಪ್ಪಿಸಬೇಕು. ಮಾಹಿತಿ ಹಕ್ಕು ಕಾಯ್ದೆ ಪ್ರಜಾಪ್ರಭುತ್ವಕ್ಕೆ ಆಮ್ಲಜನಕದಂತಿದ್ದು ಇದನ್ನು ಸರಿಯಾಗಿ ಬಳಸಿಕೊಂಡರೆ ಭ್ರಷ್ಟಾಚಾರ ತಡೆಗಟ್ಟಲು ಸಾಧ್ಯ. ಆದರೆ ಕಾಯ್ದೆಯ ದುರ್ಬಳಕೆ ಆಗದಂತೆ ಜಾಗರೂಕತೆ ವಹಿಸಬೇಕು ಎಂದು ಅವರು ಹೇಳಿದರು.
ಮಾಹಿತಿ ಆಯೋಗದ ಮತ್ತೊಬ್ಬ ಆಯುಕ್ತ ಬದ್ರುದ್ದೀನ್ ಕೆ. ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ತಂತ್ರಜ್ಞಾನದಿಂದ ಮಾಹಿತಿ ಸಂಗ್ರಹ ಸುಲಭವಾದರೂ ನಿರಂತರ ಅಧ್ಯಯನ, ಓದು ಮತ್ತು ಕಲಿಕೆಯ ಮನೋಭಾವ ಅಗತ್ಯ ಎಂದು ಹೇಳಿದರು.
ಮಾಹಿತಿ ಹಕ್ಕು ಕಾಯ್ದೆಗೆ ಸುಮಾರು 250 ವರ್ಷಗಳ ಇತಿಹಾಸವಿದ್ದು, 1766ರಲ್ಲಿ ಸ್ವೀಡನ್ನಲ್ಲಿ ಮೊದಲ ಬಾರಿ ಜಾರಿಗೆ ಬಂದಿದೆ. ಇಂದು 130ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದೆ ಎಂದು ಅವರು ತಿಳಿಸಿದರು.
ಸರ್ಕಾರದ ಯಾವುದೇ ನಿರ್ಧಾರಗಳು ಪ್ರಜೆಗಳ ಜೀವನದ ಮೇಲೆ ನೇರ ಪರಿಣಾಮ ಬೀರುವುದರಿಂದ ಅವುಗಳ ಬಗ್ಗೆ ತಿಳಿಯುವ ಹಕ್ಕು ನಾಗರಿಕರಿಗೆ ಇರಬೇಕು. ಮಾಹಿತಿ ಹಕ್ಕು ಜನರ ಕೈಯಲ್ಲಿರುವ ಬ್ರಹ್ಮಾಸ್ತ್ರವಾಗಿದ್ದು, ಅರ್ಜಿ ಹಾಕುವಾಗ ಸಾರ್ವಜನಿಕ ಹಿತ ಹಾಗೂ ಪ್ರಾಮಾಣಿಕತೆ ಇರಬೇಕು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಯು.ಡಬ್ಲ್ಯೂ.ಜೆ ರಾಜ್ಯ ಉಪಾಧ್ಯಕ್ಷ ಎಚ್.ಬಿ. ಮದನಗೌಡ, ರುದ್ರಣ್ಣ ಹರ್ತಿಕೋಟೆ ಹಾಗೂ ಬದ್ರುದ್ದೀನ್ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಘನತೆ ಕಾಪಾಡಿಕೊಂಡು ಕೆಲಸ ಮಾಡಿದವರು ಎಂದು ಪ್ರಶಂಸಿಸಿದರು.
ಕಾರ್ಯಕ್ರಮಕ್ಕೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್.ಕೆ. ಕೆಂಚೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರಸನ್ನಕುಮಾರ್ (ಚಲಂ), ಹಿರಿಯ ಹಾಗೂ ಕಿರಿಯ ಪತ್ರಕರ್ತರು, ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಕಾರ್ಯಕಾರಿ ಹಾಗೂ ಸಾಂಸ್ಕೃತಿಕ ಸಮಿತಿ ಸದಸ್ಯ ಸಿ.ಆರ್. ನವೀನ್ ಪ್ರಸ್ತಾವಿಕವಾಗಿ ಮಾತನಾಡಿದರು. ಹಿಂದೂ ಪ್ರಕಾಶ್ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ ನಿರೂಪಿಸಿದರು.
