ಬೆಂಗಳೂರು, ಜೂನ್ 27: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ (ರಿ) ಮತ್ತು ಜೇನುಗೂಡು ಕಲಾ ಬಳಗದ ಸಂಯುಕ್ತ ಆಶ್ರಯದಲ್ಲಿ ಕವಿ, ಕಲಾವಿದ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಅವರ ಇಂಗ್ಲಿಷ್ ಕೃತಿ “Comparative Study of Dramatic Theories in T.S. Eliot’s Plays” ಪುಸ್ತಕ ಲೋಕಾರ್ಪಣೆ ಹಾಗೂ 2023–24ರ ಸಾಲಿನ ‘ಸಾಹಿತಿ ರಾಂ.ಕೆ.ಹನುಮಂತಯ್ಯ ಪುಸ್ತಕ ದತ್ತಿ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಜುಲೈ 6 ರಂದು, ಭಾನುವಾರ ಬೆಳಿಗ್ಗೆ 10:30 ಗಂಟೆಗೆ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಖ್ಯಾತ ಜನಪರ ಚಳವಳಿ ಹೋರಾಟಗಾರ ಡಾ. ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸಿ, ಕೃತಿ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಪ್ರಶಸ್ತಿಗಳನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ಪ್ರದಾನ ಮಾಡಲಿದ್ದಾರೆ.
ಈ ವರ್ಷದ ಪ್ರಶಸ್ತಿ ವಿಜೇತರಾದ ಲೇಖಕರು:

ಮಂಜುಳಾ ಶಿವಾನಂದ (ಸತ್ಯಾಗ್ರಹ ದಂಪತಿಗಳು) – ಬೆಂಗಳೂರು ದಕ್ಷಿಣ

ಇಂ. ದಾಳೇಗೌಡ ಹೊಸಹಳ್ಳಿ (ಪತ್ರೋತ್ಸವ) – ಶಿವಮೊಗ್ಗ

ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ (ಖಾಲಿ ಜೋಳಿಗೆ ಫಕೀರ) – ಬೆಂಗಳೂರು ಗ್ರಾಮಾಂತರ

ಜ್ಯೋತಿ ಎನ್. ಲಿಂಗಂಪಲ್ಲಿ (ಭಾವನಾ ಜ್ಯೋತಿ) – ಕಲಬುರ್ಗಿ
ಕೃತಿಯ ವಿಮರ್ಶೆಯನ್ನು ಖಜಾನೆ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ಡಾ. ವಿ. ಭಾಗ್ಯಲಕ್ಷ್ಮಿ ಅವರು ನೀಡಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ಮತ್ತು ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ರಾಂ.ಕೆ.ಹನುಮಂತಯ್ಯ ವಹಿಸಲಿದ್ದಾರೆ.
ಪರಿಪೂರ್ಣ ಕಾರ್ಯಕ್ರಮದ ಅಂಗವಾಗಿ 10 ಮಕ್ಕಳಿಗೆ ಪ್ರತಿಭಾ ಪುರಸ್ಕಾರ, 10 ಕವಿಗಳಿಂದ ವಿಶೇಷ ಕವಿಗೋಷ್ಠಿ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು – ಬಿ.ಟಿ. ಚಿಕ್ಕಪುಟ್ಟೇಗೌಡ (ಕೃಷಿ), ಪ್ರೊ. ಸಂಗಮೇಶ ಗೌಡಪ್ಪನವರ (ಶಿಕ್ಷಣ), ಪ್ರೊ. ಎಂ. ಮುನಿಸ್ವಾಮಿ (ಆಡಳಿತ), ಶ್ರೀಮತಿ ಸುನಿತಾ ಎಸ್. ಅವಿನಾಶ್ (ಶಿಕ್ಷಣ) ಅವರಿಗೆ ಸೇವಾ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿಯನ್ನು ಸುಮಂಗಲಿ ಸೇವಾಶ್ರಮದ ಅಧ್ಯಕ್ಷ ಡಾ. ಎಸ್.ಜಿ. ಸುಶೀಲಮ್ಮ ಮತ್ತು ವಿದ್ವಾಂಸ ಪ್ರೊ. ಲೆಕ್ಕದ ಅವರು ಪ್ರದಾನ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಎ.ವಿ. ಗುರು ತೇಜಸ್, ಸಮಾಜ ಸೇವಕರು ಕುದೂರು ಸಿ. ದಯಾನಂದ್, ಪ್ರಾಧ್ಯಾಪಕರು ಡಾ. ಮುರಳಿ ಮೋಹನ್ ಮತ್ತು ವೀಣಾ ನಾರಾಯಣಪ್ಪ ಪ್ರಮುಖ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಸಿ. ಹೇಮಾವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
